ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮ್ಯಾಚ್‌ ಫಿಕ್ಸಿಂಗ್‌’ಗೆ ಕಡಿವಾಣ

Last Updated 2 ಜೂನ್ 2019, 19:30 IST
ಅಕ್ಷರ ಗಾತ್ರ

‘ಮ್ಯಾಚ್ ಫಿಕ್ಸಿಂಗ್‌’ ಭೂತ ಕ್ರಿಕೆಟ್‌ ಕ್ರೀಡೆಯನ್ನೂ ಬಿಟ್ಟಿಲ್ಲ. ‘ಸಭ್ಯರ ಆಟ’ ಎನಿಸಿರುವ ಕ್ರಿಕೆಟ್‌ನ ಮೇಲೆ ಹಲವು ಸಲ ಮೋಸದಾಟದ ಕರಿನೆರಳು ಬಿದ್ದಿದೆ. ಈ ಹಿಂದಿನ ವಿಶ್ವಕಪ್‌ ಟೂರ್ನಿಗಳಲ್ಲಿ ‘ಫಿಕ್ಸಿಂಗ್‌’ ಆರೋಪ ಕೇಳಿಬಂದಿದ್ದವು. ಈ ಬಾರಿ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಟೂರ್ನಿಯನ್ನು ಮೋಸದಾಟದಿಂದ ಸಂಪೂರ್ಣ ಮುಕ್ತವನ್ನಾಗಿಸಲು ಅಂತರರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಕೆಲವು ಕ್ರಮಗಳನ್ನು ತೆಗೆದುಕೊಂಡಿದೆ.

ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯು ಕ್ರಿಕೆಟ್‌ನ ಬಲುದೊಡ್ಡ ’ಹಬ್ಬ’. ಇಂತಹ ದೊಡ್ಡ ಟೂರ್ನಿಗಳ ಮೇಲೆ ಬುಕ್ಕಿಗಳು ಮತ್ತು ಮ್ಯಾಚ್‌ ಫಿಕ್ಸರ್‌ಗಳ ಕಣ್ಣು ಸದಾ ಇದ್ದೇ ಇರುತ್ತದೆ. ‘ಮ್ಯಾಚ್‌ ಫಿಕ್ಸಿಂಗ್‌’ ಜಾಲದ ಮಂದಿ ವಿವಿಧ ವಾಮಮಾರ್ಗಗಳ ಮೂಲಕ ಆಟಗಾರರು, ತಂಡದ ಸಿಬ್ಬಂದಿಯನ್ನು ಸಂಪರ್ಕಿಸಲು ಪ್ರಯತ್ನಿಸುವರು.

ಆದರೆ ಐಸಿಸಿ ಈ ಬಾರಿಯ ಟೂರ್ನಿಯನ್ನು ‘ಮ್ಯಾಚ್‌ ಫಿಕ್ಸಿಂಗ್‌’ ಮುಕ್ತವನ್ನಾಗಿಸಲು ಪಣತೊಟ್ಟಿದ್ದು, ಈ ನಿಟ್ಟಿನಲ್ಲಿ ಕೆಲವೊಂದು ಹೊಸ ಕ್ರಮಗಳನ್ನು ತೆಗೆದುಕೊಂಡಿದೆ. ಇದೇ ಮೊದಲ ಬಾರಿಗೆ ಪ್ರತಿ ತಂಡಕ್ಕೂ ಭ್ರಷ್ಟಾಚಾರ ನಿಗ್ರದ ದಳದ ಅಧಿಕಾರಿಯನ್ನು ನೇಮಿಸಲು ತೀರ್ಮಾನಿಸಿದೆ. ಅಭ್ಯಾಸ ಪಂದ್ಯಗಳಿಂದ ಆರಂಭಗೊಂಡು, ಟೂರ್ನಿ ಕೊನೆಗೊಳ್ಳುವವರೆಗೂ ಆ ಅಧಿಕಾರಿ ನಿರ್ದಿಷ್ಟ ತಂಡದ ಜತೆ ಇರುತ್ತಾರೆ.

ಈ ಹಿಂದೆ ಐಸಿಸಿಯ ಭ್ರಷ್ಟಾಚಾರ ನಿಗ್ರಹ ದಳವು (ಎಸಿಯು) ವಿಶ್ವಕಪ್‌ ಪಂದ್ಯ ನಡೆಯುವ ಪ್ರತಿ ತಾಣಗಳಿಗೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಯನ್ನು ನೇಮಿಸುತ್ತಿತ್ತು. ಇದರಿಂದ ತಂಡವೊಂದು ಟೂರ್ನಿಯಲ್ಲಿ ಹಲವು ಅಧಿಕಾರಿಗಳ ಜತೆ ವ್ಯವಹರಿಸಬೇಕಿತ್ತು.

ಇದೀಗ ಪ್ರತಿ ತಂಡಕ್ಕೂ ಒಬ್ಬ ಪ್ರತ್ಯೇಕ ಅಧಿಕಾರಿಯನ್ನು ನೇಮಿಸಲಿರುವುದರಿಂದ ಆ ಅಧಿಕಾರಿ ಟೂರ್ನಿಯುದ್ದಕ್ಕೂ ತಂಡದ ಜತೆ ಇರುವರು. ಟೂರ್ನಿಯ ಅವಧಿಯಲ್ಲಿ ತಂಡದ ಜತೆಗೆ ಪ್ರಯಾಣಿಸಲಿದ್ದು, ಆಟಗಾರರು ಉಳಿದುಕೊಳ್ಳಲಿರುವ ಹೋಟೆಲ್‌ನಲ್ಲೇ ತಂಗಲಿದ್ದಾರೆ.

ಮ್ಯಾಚ್‌ ಫಿಕ್ಸಿಂಗ್‌ಗೆ ಯಾವುದೇ ಅವಕಾಶ ನೀಡದಿರುವುದು ಹಾಗೂ ಆಟಗಾರರು ಮತ್ತು ಎಸಿಯು ಜತೆಗಿನ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಐಸಿಸಿಯ ಈ ತೀರ್ಮಾನದ ಹಿಂದಿರುವ ಉದ್ದೇಶವಾಗಿದೆ.

ಅಧಿಕಾರಿಯೊಬ್ಬರು ಒಂದೇ ತಂಡದ ಜತೆಗೆ ಇರುವುದರಿಂದ ಎಲ್ಲ ಆಟಗಾರರ ಮೇಲೆ ನಿಗಾ ವಹಿಸಲು ಸಾಧ್ಯವಾಗಲಿದೆ. ಶಂಕಿತ ಬುಕ್ಕಿಗಳು, ಫಿಕ್ಸಿಂಗ್‌ನಲ್ಲಿ ತೊಡಗಿರುವವರು ಆಟಗಾರರನ್ನು ಸಂಪರ್ಕಿಸಲು ಪ್ರಯತ್ನಿಸಿದರೆ ಸುಲಭದಲ್ಲಿ ಅಧಿಕಾರಿಯ ಗಮನಕ್ಕೆ ಬರಲಿದೆ.

ಭ್ರಷ್ಟಾಚಾರ ನಿಗ್ರಹ ನೀತಿ ಸಂಹಿತೆ ಉಲ್ಲಂಘಿಸುವವರು ಇಂಗ್ಲೆಂಡ್‌ಗೆ ಕಾಲಿಡಬೇಡಿ ಎಂದು ಐಸಿಸಿಯ ಭ್ರಷ್ಟಾಚಾರ ನಿಗ್ರಹ ಪಡೆಯು ಎಚ್ಚರಿಕೆ ನೀಡಿದೆ. ಈ ಹಿಂದೆ ಮ್ಯಾಚ್‌ ಫಿಕ್ಸಿಂಗ್‌ನಲ್ಲಿ ತೊಡಗಿದ್ದವರ ಪಟ್ಟಿಯನ್ನು ಐಸಿಸಿಯು ಬ್ರಿಟನ್‌ನ ನ್ಯಾಷನಲ್‌ ಕ್ರೈಂ ಏಜೆನ್ಸಿಗೆ ನೀಡಿದೆ.

ಪ್ರತಿ ತಂಡಕ್ಕೆ ಅಧಿಕಾರಿಯನ್ನು ನೇಮಿಸುವ ಜತೆಗೆ ಇಬ್ಬರು ತನಿಖಾಧಿಕಾರಿಗಳು ಹಾಗೂ ಸಾಕ್ಷ್ಯಗಳ ವಿಶ್ಲೇಷಣೆಗೆ ಒಬ್ಬ ಅಧಿಕಾರಿಯನ್ನು ಐಸಿಸಿ ನೇಮಿಸಲಿದೆ.

ಐಸಿಸಿಯು ಈಗಾಗಲೇ ಶಂಕಿತ ಮ್ಯಾಚ್‌ ಫಿಕ್ಸರ್‌ಗಳನ್ನು ಗುರುತಿಸಿದ್ದು, ಕ್ರೀಡಾಂಗಣದಲ್ಲಿ ಕಾಣಿಸಿಕೊಳ್ಳದಂತೆ ಎಚ್ಚರಿಕೆ ಕೊಟ್ಟಿದೆ. ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ಎಲ್ಲ 10 ತಂಡಗಳ ಸದಸ್ಯರು ಮತ್ತು ಸಹಾಯಕ ಸಿಬ್ಬಂದಿಗೆ ಎಸಿಯು ಅಧಿಕಾರಿಗಳು ಶಂಕಿತ ಸ್ಪಾಟ್‌ ಫಿಕ್ಸರ್‌ಗಳ ಮಾಹಿತಿ ಮತ್ತು ಅವರ ಛಾಯಾಚಿತ್ರ ತೋರಿಸಲಿದೆ. ಟೂರ್ನಿಯ ಅವಧಿಯಲ್ಲಿ ಇವರು ಸಂಪರ್ಕಿಸಲು ಪ್ರಯತ್ನಿಸಿದರೆ ಮಾಹಿತಿ ನೀಡುವಂತೆಯೂ ಸೂಚಿಸಿದೆ. ಈ ಹಿಂದೆ ಮ್ಯಾಚ್‌ ಫಿಕ್ಸಿಂಗ್‌ ವಿವಾದದಿಂದಾಗಿ ಕ್ರಿಕೆಟ್‌ನ ಘನತೆಗೆ ಕುಂದುಂಟಾಗಿತ್ತು. ಆದ್ದರಿಂದ ಐಸಿಸಿ ಈ ಬಾರಿ ಬಹಳ ಎಚ್ಚರಿಕೆ ವಹಿಸಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT