ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ICC Test Rankings: ಸತತ 2ನೇ ದ್ವಿಶತಕ; ಜೈಸ್ವಾಲ್ ಅಗ್ರ 20ರ ಪಟ್ಟಿಗೆ ಲಗ್ಗೆ

Published 21 ಫೆಬ್ರುವರಿ 2024, 9:42 IST
Last Updated 21 ಫೆಬ್ರುವರಿ 2024, 9:42 IST
ಅಕ್ಷರ ಗಾತ್ರ

ದುಬೈ: ಸತತ ಎರಡು ದ್ವಿಶತಕಗಳ ಸಾಧನೆ ಮಾಡಿರುವ ಟೀಮ್ ಇಂಡಿಯಾದ ಯುವ ಭರವಸೆಯ ಎಡಗೈ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿರುವ ತಾಜಾ ಟೆಸ್ಟ್ ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ಅಗ್ರ 20ರ ಪಟ್ಟಿಗೆ ಲಗ್ಗೆ ಇಟ್ಟಿದ್ದಾರೆ.

14 ಸ್ಥಾನಗಳ ಬಡ್ತಿ ಪಡೆದಿರುವ ಜೈಸ್ವಾಲ್, 15ನೇ ಸ್ಥಾನಕ್ಕೆ ತಲುಪಿದ್ದಾರೆ.

22ರ ಹರೆಯದ ಜೈಸ್ವಾಲ್, ಟೆಸ್ಟ್ ಕ್ರಿಕೆಟ್‌ನಲ್ಲಿ ಸತತ ಎರಡು ದ್ವಿಶತಕ ಸಾಧನೆ ಮಾಡಿದ ವಿಶ್ವದ ಏಳನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಆ ಮೂಲಕ ವಿನೋದ್ ಕಾಂಬ್ಳಿ ಹಾಗೂ ವಿರಾಟ್ ಕೊಹ್ಲಿ ಅವರ ಸಾಲಿನಲ್ಲಿ ಕಾಣಿಸಿಕೊಂಡಿದ್ದಾರೆ.

ವಿಶಾಖಪಟ್ಟಣದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 209 ರನ್ ಗಳಿಸಿದ್ದ ಜೈಸ್ವಾಲ್, ರಾಜ್‌ಕೋಟ್ ಪಂದ್ಯದಲ್ಲಿ ಅಜೇಯ 214 ರನ್ ಗಳಿಸುವ ಮೂಲಕ ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.

ರಾಜ್‌ಕೋಟ್ ಪಂದ್ಯದಲ್ಲಿ ಭಾರತ 434 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿತ್ತು. ಆ ಮೂಲಕ ಟೆಸ್ಟ್ ಇತಿಹಾಸದಲ್ಲೇ ಬೃಹತ್ (ರನ್ ಅಂತರದಲ್ಲಿ) ಗೆಲುವು ದಾಖಲಿಸಿದ್ದ ಟೀಮ್ ಇಂಡಿಯಾ, ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1ರ ಅಂತರದ ಮುನ್ನಡೆ ಕಾಯ್ದುಕೊಂಡಿದೆ.

ರಾಜ್‌ಕೋಟ್ ಪಂದ್ಯದಲ್ಲಿ ಶತಕ ಹಾಗೂ ಐದು ವಿಕೆಟ್‌ಗಳ ಸಾಧನೆ ಮಾಡಿರುವ ರವೀಂದ್ರ ಜಡೇಜ, ಬ್ಯಾಟಿಂಗ್ ರ‍್ಯಾಂಕಿಂಗ್‌ ಪಟ್ಟಿಯಲ್ಲಿ 41ರಿಂದ 34ನೇ ಸ್ಥಾನಕ್ಕೆ ತಲುಪಿದ್ದಾರೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಜಡೇಜ, ಆರನೇ ಸ್ಥಾನ ಗಳಿಸಿದ್ದಾರೆ.

ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ರವೀಂದ್ರ ಜಡೇಜ ಹಾಗೂ ರವಿಚಂದ್ರನ್ ಅಶ್ವಿನ್ ಅನುಕ್ರಮವಾಗಿ ಮೊದಲೆರಡು ಸ್ಥಾನಗಳನ್ನು ಭದ್ರವಾಗಿಸಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಜಸ್‌ಪ್ರೀತ್ ಬೂಮ್ರಾ ಅಗ್ರಸ್ಥಾನದಲ್ಲಿ ಮುಂದುವರಿದಿದ್ದು, ರವಿಚಂದ್ರನ್ ಅಶ್ವಿನ್ ಒಂದು ಸ್ಥಾನ ಬಡ್ತಿ ಪಡೆದು ಎರಡನೇ ಸ್ಥಾನ ಪಡೆದಿದ್ದಾರೆ.

ರಾಜ್‌ಕೋಟ್ ಟೆಸ್ಟ್‌ನಲ್ಲಿ ಶತಕ ಗಳಿಸಿರುವ ನಾಯಕ ರೋಹಿತ್ ಶರ್ಮಾ, ಬ್ಯಾಟಿಂಗ್ ವಿಭಾಗದಲ್ಲಿ ಒಂದು ಸ್ಥಾನ ಬಡ್ತಿ ಪಡೆದು 12ಕ್ಕೆ ತಲುಪಿದ್ದಾರೆ. ಇದೇ ಪಂದ್ಯದಲ್ಲಿ 91 ರನ್ ಗಳಿಸಿರುವ ಶುಭಮನ್ ಗಿಲ್, 35ನೇ ಸ್ಥಾನಕ್ಕೆ ತಲುಪಿದ್ದಾರೆ.

ಪದಾರ್ಪಣೆ ಪಂದ್ಯದಲ್ಲಿ ಗಮನಾರ್ಹ ಪ್ರದರ್ಶನ ನೀಡಿರುವ ಸರ್ಫರಾಜ್ ಖಾನ್ ಹಾಗೂ ಧ್ರುವ್ ಜುರೇಲ್, ಇದೇ ಮೊದಲ ಬಾರಿಗೆ ಐಸಿಸಿ ಬ್ಯಾಟಿಂಗ್ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದು, ಅನುಕ್ರಮವಾಗಿ 75 ಹಾಗೂ 100ನೇ ಸ್ಥಾನ ಅಲಂಕರಿಸಿದ್ದಾರೆ.

ವೈಯಕ್ತಿಕ ಕಾರಣದಿಂದಾಗಿ ಇಂಗ್ಲೆಂಡ್ ವಿರುದ್ಧದ ಸರಣಿಯಿಂದ ಹೊರಗುಳಿದಿರುವ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ, ಅಗ್ರ 10ರ ಪಟ್ಟಿಯಲ್ಲಿರುವ ಭಾರತದ ಏಕಮಾತ್ರ ಆಟಗಾರನಾಗಿದ್ದು, 7ನೇ ಸ್ಥಾನದಲ್ಲಿದ್ದಾರೆ.

ಏಳು ಟೆಸ್ಟ್ ಪಂದ್ಯಗಳಲ್ಲಿ ಏಳು ಶತಕಗಳ ಸಾಧನೆ ಮಾಡಿರುವ ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್, ಟೆಸ್ಟ್ ಬ್ಯಾಟಿಂಗ್ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT