ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ENG 2nd Test: ಆ್ಯಂಡರ್ಸನ್ ಔಟ್; ಇಂಗ್ಲೆಂಡ್ ತಂಡದಲ್ಲಿ 4 ಬದಲಾವಣೆ

Last Updated 12 ಫೆಬ್ರುವರಿ 2021, 9:39 IST
ಅಕ್ಷರ ಗಾತ್ರ

ಚೆನ್ನೈ: ಆತಿಥೇಯ ಭಾರತ ವಿರುದ್ಧ ಇಲ್ಲಿನ ಎಂಎ ಚಿದಂಬರಂ ಮೈದಾನದಲ್ಲಿ ಫೆಬ್ರುವರಿ 13 ಶನಿವಾರದಿಂದ ಆರಂಭವಾಗಲಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಪ್ರಮುಖ ನಾಲ್ಕು ಬದಲಾವಣೆಗಳನ್ನು ತಂದಿದೆ.

ಈ ಕುರಿತು ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಮಾಹಿತಿ ನೀಡಿದ್ದಾರೆ. ಗಾಯದ ತೊಂದರೆಗೆ ಸಿಲುಕಿರುವ ಜೋಫ್ರಾ ಆರ್ಚರ್ ಸೇವೆಯಿಂದ ಇಂಗ್ಲೆಂಡ್ ವಂಚಿತವಾಗಿದೆ.

ಇದರ ಜೊತೆಗೆ ಮುಂಬರುವ ಸೀಮಿತ ಓವರ್‌ಗಳ ಸರಣಿಯನ್ನು ಪರಿಗಣಿಸಿ ವಿಕೆಟ್ ಕೀಪರ್ ಜೋಸ್ ಬಟ್ಲರ್ ಅವರಿಗೆ ವಿಶ್ರಾಂತಿ ಸೂಚಿಸಲಾಗಿದ್ದು, ಮುಂದಿನ ಮೂರು ಟೆಸ್ಟ್ ಪಂದ್ಯಗಳಿಗೆ ಅಲಭ್ಯವಾಗಲಿದ್ದಾರೆ.

ಸಂಪೂರ್ಣವಾಗಿ ಫಿಟ್ ಅಲ್ಲದ ಕಾರಣ 38ರ ಹರೆಯದ ಅನುಭವಿ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ ಸಹ ತಂಡದಿಂದ ಹೊರಗುಳಿಯಲಿದ್ದಾರೆ. ಹಾಗೆಯೇ ಡಾಮ್ ಬೆಸ್ ಕೂಡಾ ಅವಕಾಶ ವಂಚಿತವಾಗಿದ್ದಾರೆ.

ಈ ನಾಲ್ವರು ಆಟಗಾರರ ಬದಲಿಗೆ ಅಂತಿಮ 12ರ ಬಳಗದಲ್ಲಿ ಬೆನ್ ಫೋಕ್ಸ್, ಸ್ಟುವರ್ಟ್ ಬ್ರಾಡ್, ಕ್ರಿಸ್ ವೋಕ್ಸ್ ಮತ್ತು ಮೊಯಿನ್ ಅಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಈ ಪೈಕಿ ಬೆನ್ ಫೋಕ್ಸ್ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ. ಹಾಗೆಯೇ ಅಂತಿಮ ಎರಡು ಪಂದ್ಯಗಳಿಗೆ ಜಾನಿ ಬೆಸ್ಟೊ ಸ್ಪೆಷಲಿಷ್ಟ್ ಬ್ಯಾಟ್ಸ್‌ಮನ್ ಆಗಿ ಮರಳುವ ಸಾಧ್ಯತೆಯಿದೆ ಎಂದು ರೂಟ್ ತಿಳಿಸಿದರು.

ಚೆನ್ನೈನಲ್ಲೇ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ 227 ರನ್ ಅಂತರದ ಬೃಹತ್ ಗೆಲುವು ದಾಖಲಿಸಿತ್ತು. ಈ ಮೂಲಕ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ. ಸರಣಿಯ ಅಂತಿಮದ ಎರಡು ಪಂದ್ಯಗಳು ಅಹಮದಾಬಾದ್‌ನಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಮೊಟೆರಾ ಸ್ಟೇಡಿಯಂನಲ್ಲಿ ನಡೆಯಲಿದೆ.

ಹಾರ್ದಿಕ್, ಅಕ್ಷರ್ ಇನ್?
ಏತನ್ಮಧ್ಯೆ ಆತಿಥೇಯ ಭಾರತ ತಂಡದಲ್ಲೂ ಮಹತ್ವದ ಬದಲಾವಣೆ ಸಾಧ್ಯತೆಯಿದ್ದು, ಗಾಯ ಮುಕ್ತಗೊಂಡಿರುವ ಅಕ್ಷರ್ ಪಟೇಲ್ ಹಾಗೂ ಹಾರ್ದಿಕ್ ಪಾಂಡ್ಯ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT