ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರಾಟ್‌ ಬಳಗಕ್ಕೆ ಕ್ಲೀನ್‌ಸ್ವೀಪ್‌ ಗುರಿ

ಮೂರನೇ ಮತ್ತು ಅಂತಿಮ ಟ್ವೆಂಟಿ–20 ಪಂದ್ಯ; ಭಾರತ ತಂಡದಲ್ಲಿ ಬದಲಾವಣೆ ಸಾಧ್ಯತೆ
Last Updated 5 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಗಯಾನ: ಮೊದಲ ಎರಡು ಪಂದ್ಯಗಳಲ್ಲಿ ಪಾರಮ್ಯ ಮೆರೆದಿರುವ ಭಾರತ ತಂಡ ವೆಸ್ಟ್ ಇಂಡೀಸ್‌ ಎದುರಿನ ಮೂರನೇ ಮತ್ತು ಅಂತಿಮ ಟ್ವೆಂಟಿ–20 ಕ್ರಿಕೆಟ್ ಪಂದ್ಯವನ್ನೂ ಗೆದ್ದು ‘ವೈಟ್ ವಾಷ್‌’ ಸಾಧನೆ ಮಾಡುವ ಹುಮ್ಮಸ್ಸಿನಲ್ಲಿದೆ.

ಫ್ಲೋರಿಡಾದಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ನಾಲ್ಕು ವಿಕೆಟ್‌ಗಳಿಂದ ಗೆದ್ದಿದ್ದ ಭಾರತ ಭಾನುವಾರ ರಾತ್ರಿ ಇದೇ ಅಂಗಣದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಡಕ್ವರ್ಥ್ ಲೂಯಿಸ್ ನಿಯಮದಡಿ 22 ರನ್‌ಗಳಿಂದ ಗೆದ್ದಿತ್ತು. ಎರಡೂ ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ನೀರಸ ಆಟ ಆಡಿತ್ತು. ಆದ್ದರಿಂದ ಮಂಗಳವಾರದ ಪಂದ್ಯದಲ್ಲೂ ಭಾರತ ಸುಲಭ ಗೆಲುವಿನ ಭರವಸೆ ಹೊಂದಿದೆ. ಕಣಕ್ಕೆ ಇಳಿಸುವ ತಂಡದಲ್ಲಿ ಬದಲಾವಣೆ ಮಾಡುವ ಸಾಧ್ಯತೆಗಳು ಇದ್ದು ಎರಡು ಪಂದ್ಯಗಳಲ್ಲಿ ಆಡದೇ ಇದ್ದವರಿಗೆ ಅವಕಾಶ ನೀಡುವ ನಿರೀಕ್ಷೆ ಇದೆ.

ಬ್ಯಾಟಿಂಗ್‌ ಲೈನ್ ಅಪ್‌ನಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇಲ್ಲ. ಆದರೆ ಬೌಲಿಂಗ್‌ನಲ್ಲಿ ಕೆಲವರಿಗೆ ವಿಶ್ರಾಂತಿ ನೀಡುವುದು ಖಚಿತ. ಇದನ್ನು ನಾಯಕ ವಿರಾಟ್ ಕೊಹ್ಲಿ ಕೂಡ ಸೂಚ್ಯವಾಗಿ ಹೇಳಿದ್ದಾರೆ. ಎರಡು ಪಂದ್ಯಗಳಲ್ಲಿ ನಿರೀಕ್ಷೆಗೆ ತಕ್ಕಂತೆ ಆಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಬದಲಿಗೆ ಕೊನೆಯ ಪಂದ್ಯದಲ್ಲಿ ಕೆ.ಎಲ್‌.ರಾಹುಲ್ ಅವರನ್ನು ಕರೆಸಿಕೊಳ್ಳುವ ಸಾಧ್ಯತೆ ಇದೆ. ಪಂತ್‌ ಮೊದಲ ಪಂದ್ಯದಲ್ಲಿ ನಾಲ್ಕು ರನ್ ಗಳಿಸಿದ್ದರೆ ಭಾನುವಾರ ಶೂನ್ಯಕ್ಕೆ ಔಟಾಗಿದ್ದರು.

ರೋಹಿತ್–ಧವನ್‌ಗೆ ವಿಶ್ರಾಂತಿ ಸಿಗದು: ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ರೋಹಿತ್ ಶರ್ಮಾ ಅಥವಾ ಶಿಖರ್ ಧವನ್‌ಗೆ ವಿಶ್ರಾಂತಿ ನೀಡುವ ಯೋಚನೆ ತಂಡದ ಆಡಳಿತದಲ್ಲಿ ಇರಲಾರದು. ವಿಶ್ವಕಪ್‌ ಟೂರ್ನಿಯ ಸಂದರ್ಭದಲ್ಲಿ ಹೆಬ್ಬೆರಳಿಗೆ ಗಾಯವಾಗಿ ತವರಿಗೆ ಮರಳಿದ್ದ ಶಿಖರ್‌ಗೆ ಆ ‘ಆಘಾತ’ದ ನಂತರ ಇದು ಮೊದಲ ಸರಣಿ. ಏಕದಿನ ಸರಣಿಗೆ ಸಜ್ಜಾಗಲು ಅವರಿಗೆ ಮೂರನೇ ಪಂದ್ಯವೂ ನೆರವಾಗಲಿದೆ.

ಬೌಲಿಂಗ್ ವಿಭಾಗದಲ್ಲಿ ಮಧ್ಯಮ ವೇಗಿ ನವದೀಪ್ ಸೈನಿ ಬದಲಿಗೆ ಲೆಗ್‌ ಸ್ಪಿನ್ನರ್ ರಾಹುಲ್ ಚಾಹರ್ ಕಾಣಿಸಿಕೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ. ರವೀಂದ್ರ ಜಡೇಜಗೆ ವಿಶ್ರಾಂತಿ ನೀಡಿದರೆ ದೀಪಕ್ ಚಾಹರ್ ಕೂಡ ಆಡುವರು.

ಕೊನೆಯ ಪಂದ್ಯವನ್ನು ಗೆದ್ದು ಗೌರವ ಉಳಿಸಿಕೊಳ್ಳುವ ಹಂಬಲದಲ್ಲಿರುವ ವೆಸ್ಟ್ ಇಂಡೀಸ್ ಕೀರನ್ ಪೊಲಾರ್ಡ್‌, ನಾಯಕ ಕಾರ್ಲೋಸ್ ಬ್ರಾಥ್‌ವೇಟ್ ಮುಂತಾದ ಬಲಿಷ್ಠ ಆಟಗಾರರಿಂದ ಉತ್ತಮ ಬ್ಯಾಟಿಂಗ್‌ ಬಯಸುತ್ತಿದೆ.

ತಂಡಗಳು: ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್‌ ಶರ್ಮಾ, ಶಿಖರ್‌ ಧವನ್, ಕೆ.ಎಲ್‌.ರಾಹುಲ್‌, ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ರಿಷಭ್ ಪಂತ್‌, ಕೃಣಾಲ್ ಪಾಂಡ್ಯ, ರವೀಂದ್ರ ಜಡೇಜ, ವಾಷಿಂಗ್ಟನ್ ಸುಂದರ್‌, ರಾಹುಲ್ ಚಾಹರ್‌, ಭುವನೇಶ್ವರ್ ಕುಮಾರ್, ಖಲೀಲ್ ಅಹಮ್ಮದ್, ದೀಪಕ್ ಚಾಹರ್‌, ನವದೀಪ್ ಸೈನಿ.

ವೆಸ್ಟ್ ಇಂಡೀಸ್‌: ಕಾರ್ಲೊಸ್‌ ಬ್ರಾಥ್‌ವೇಟ್‌ (ನಾಯಕ), ಜಾನ್‌ ಕ್ಯಾಂಪ್‌ಬೆಲ್‌, ಎವಿನ್‌ ಲೂಯಿಸ್‌, ಶಿಮ್ರಾನ್ ಹೆಟ್ಮೆಯರ್‌, ನಿಕೋಲಸ್‌ ಪೂರನ್‌, ಕೀರನ್ ಪೊಲಾರ್ಡ್‌, ರಾವ್ಮನ್‌ ಪೊವೆಲ್‌, ಕೀಮೊ ಪೌಲ್‌, ಸುನಿಲ್ ನಾರಾಯಣ್‌, ಶೆಲ್ಡನ್ ಕಾಟ್ರೆಲ್‌, ಒಷೇನ್ ಥಾಮಸ್‌, ಆ್ಯಂಟನಿ ಬ್ರಾಂಬೆಲ್‌, ಜೇಸನ್‌ ಮೊಹಮ್ಮದ್ ಖಾರಿ ಪೀರ್‌.

ಅಶಿಸ್ತು: ನವದೀಪ್‌ ಸೈನಿಗೆ ‘ದಂಡ’

ಲಾಡೆರ್‌ಹಿಲ್, ಫ್ಲೋರಿಡಾ: ವೆಸ್ಟ್ ಇಂಡೀಸ್‌ನ ನಿಕೋಲಸ್ ಪೂರನ್ ಅವರ ವಿಕೆಟ್‌ ಪಡೆದ ಸಂದರ್ಭದಲ್ಲಿ ಅನುಚಿತವಾಗಿ ವರ್ತಿಸಿದ ಭಾರತದ ಬೌಲರ್‌ ನವದೀಪ್ ಸೈನಿ ’ದಂಡ’ ತೆತ್ತಿದ್ದಾರೆ. ಅವರಿಗೆ ಒಂದು ‘ಡಿಮೆರಿಟ್‌’ ಪಾಯಿಂಟ್‌ ವಿಧಿಸಲಾಗಿದೆ.

ಎರಡನೇ ಟ್ವೆಂಟಿ–20 ಪಂದ್ಯದಲ್ಲಿ ಪೂರನ್ ವಿಕೆಟ್ ಕಬಳಿಸಿದ ನಂತರ ಸೈನಿ, ಪೂರನ್‌ ಕಡೆ ದಿಟ್ಟಿಸಿ ಪ್ರಚೋದಿಸುವ ರೀತಿ ವರ್ತಿಸಿದ್ದರು.

‘ಇದು ಐಸಿಸಿ ನೀತಿಯ 2.5 ನಿಯಮದ ಉಲ್ಲಂಘನೆಯಾಗಿದೆ’ ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ. ಸೈನಿಗೆ ಫೀಲ್ಡ್ ಅಂಪೈರ್‌ಗಳಾದ ನಿಗೆಲ್ ಡುಗಿಡ್, ಗ್ರೆಗರಿ ಬ್ರಾಥ್‌ವೇಟ್‌, ಮೂರನೇ ಅಂಪೈರ್ ಲೆಸ್ಲಿ ರೀಪರ್‌ ಮತ್ತು ಪ್ಯಾಟ್ರಿಕ್‌ ಗಸ್ಟಡ್‌ ಎಚ್ಚರಿಕೆ ನೀಡಿದ್ದರು.

ಪಂದ್ಯ ಆರಂಭ ರಾತ್ರಿ 8.00 (ಭಾರತೀಯ ಕಾಲಮಾನ)

ನೇರ ಪ್ರಸಾರ: ಸೋನಿ ನೆಟ್‌ವರ್ಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT