ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

INDW vs SAW | ವಿಶ್ವದಾಖಲೆ ಮೊತ್ತ ಪೇರಿಸಿದ ಭಾರತ ಪಾರಮ್ಯ

ಎರಡನೇ ದಿನದಾಟದಲ್ಲಿಯೂ ಆತಿಥೇಯರ ಪಾರಮ್ಯ; ಸ್ನೇಹಾಗೆ ಮೂರು ವಿಕೆಟ್
Published 29 ಜೂನ್ 2024, 15:33 IST
Last Updated 29 ಜೂನ್ 2024, 15:33 IST
ಅಕ್ಷರ ಗಾತ್ರ

ಚೆನ್ನೈ: ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ತಂಡವು ಮಹಿಳಾ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿಯೇ ಅತಿ ದೊಡ್ಡ ಮೊತ್ತ ಗಳಿಸಿದ ದಾಖಲೆಯನ್ನು ಬರೆಯಿತು. 

ಚೆಪಾಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ಎದುರಿನ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಮೊದಲ ಇನಿಂಗ್ಸ್‌ನಲ್ಲಿ 115.1 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 603 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. 

ಹೋದ ಫೆಬ್ರುವರಿಯಲ್ಲಿ ಪರ್ತ್‌ನಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ದಕ್ಷಿಣ ಆಫ್ರಿಕಾ ಎದುರು 9 ವಿಕೆಟ್‌ಗಳಿಗೆ 575 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಆ ದಾಖಲೆಯನ್ನು ಭಾರತ ತಂಡವು ಮೀರಿ ನಿಂತಿತು. ಮೊದಲ ಇನಿಂಗ್ಸ್‌ ಬ್ಯಾಟಿಂಗ್ ಆರಂಭಿಸಿರುವ ಪ್ರವಾಸಿ ಬಳಗವು ಎರಡನೇ ದಿನದಾಟದ ಕೊನೆಗೆ ದಕ್ಷಿಣ ಆಫ್ರಿಕಾ ತಂಡವು 72 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 236 ರನ್ ಗಳಿಸಿತು. ಮರಿಜಾನ್ ಕಾಪ್ (ಬ್ಯಾಟಿಂಗ್ 69) ಮತ್ತು ನದೈನ್ ಡಿ ಕ್ಲರ್ಕ್ (ಬ್ಯಾಟಿಂಗ್ 27) ತಂಡಕ್ಕೆ ಆಸರೆಯಾಗಿದ್ದಾರೆ. 

ಪಂದ್ಯದ ಮೊದಲ ದಿನವಾದ ಶುಕ್ರವಾರ ಟಾಸ್ ಗೆದ್ದ ಆತಿಥೇಯ ತಂಡವು ಶಫಾಲಿ ವರ್ಮಾ (205 ರನ್) ಮತ್ತು ಸ್ಮೃತಿ ಮಂದಾನ (149 ರನ್) ಅವರ ಭರ್ಜರಿ ಬ್ಯಾಟಿಂಗ್ ಬಲದಿಂದ ಒಂದೇ ದಿನದಲ್ಲಿ 525 ರನ್‌ ಪೇರಿಸಿತ್ತು. ಶನಿವಾರ ಆಟ ಮುಂದುವರಿಸಿದ ಹರ್ಮನ್‌ಪ್ರೀತ್ ಕೌರ್ ಮತ್ತು ರೀಚಾ ಘೋಷ್ ಅವರೂ ಅರ್ಧಶತಕಗಳನ್ನು ಹೊಡೆದು ತಂಡದ ಮೊತ್ತವು ಹೆಚ್ಚಲು ಕಾರಣರಾದರು. 

ರಿಚಾ ತಮ್ಮ ವೈಯಕ್ತಿಕ ಶ್ರೇಷ್ಠ (86; 90ಎ, 4X18) ಸ್ಕೋರ್ ದಾಖಲಿಸಿದರು. ತಂಡದ ಮೊತ್ತವು 576 ರನ್‌ಗೆ ತಲುಪುತ್ತಿದ್ದಂತೆಯೇ ಹೊಸ ದಾಖಲೆ ನಿರ್ಮಾಣವಾಯಿತು.  ಕೌರ್ ಮತ್ತು ಘೋಷ್ ಅವರು ಐದನೇ ವಿಕೆಟ್ ಜೊತೆಯಾಟದಲ್ಲಿ 143 ರನ್‌ ಸೇರಿಸಿದರು.  ಟುಮಿ ಸೆಕುಕುನೆ ಎಸೆತದಲ್ಲಿ ಹರ್ಮನ್‌ಪ್ರೀತ್ ಎಲ್‌ಬಿಡಬ್ಲ್ಯು ಆಗುವುದರೊಂದಿಗೆ ಜೊತೆಯಾಟ ಮುರಿಯಿತು. 

ತಂಡದ ಮೊತ್ತ 600ರ ಗಡಿ ದಾಟಿದ ನಂತರ ರಿಚಾ ಘೋಷ್ ಅವರು ಮ್ಲಾಬಾ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಅದರೊಂದಿಗೆ ಭಾರತ ತಂಡವು ಇನಿಂಗ್ಸ್‌ ಡಿಕ್ಲೇರ್ ಮಾಡಿಕೊಂಡಿತು. 

ಪ್ರವಾಸಿ ತಂಡಕ್ಕೆ ಲೌರಾ ವೊಲ್ವಾರ್ಟ್ (20 ರನ್) ಮತ್ತು ಅನೆಕಿ ಬಾಷ್ (39 ರನ್) ಉತ್ತಮ ಆರಂಭ ನೀಡುವ ಪ್ರಯತ್ನ ಮಾಡಿದರು. ಆದರೆ ತಂಡದ ಮೊತ್ತವು ನೂರರ ಗಡಿ ದಾಟುವ ಮುನ್ನವೇ ಈ ಇಬ್ಬರೂ ಬ್ಯಾಟರ್‌ಗಳ ವಿಕೆಟ್ ಗಳಿಸಿದ ಸ್ನೇಹಾ ರಾಣಾ ಸಂಭ್ರಮಿಸಿದರು. ಈ ಹಂತದಲ್ಲಿ ಸುನೆ ಲೂಸ್ (65; 164ಎ, 4X6, 6X1) ಮತ್ತು ಕಾಪ್ ಮೂರನೇ ವಿಕೆಟ್ ಜೊತೆಯಾಟದಲ್ಲಿ 93 ರನ್ ಸೇರಿಸಿದರು. 

ಚಹಾ ವಿರಾಮದ ನಂತರ ಲೂಸ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದ ದೀಪ್ತಿ ಶರ್ಮಾ ಜೊತೆಯಾಟ ಮುರಿದರು. ದಿಯಾಮಿ ಟಕರ್ ಅವರು ಖಾತೆ ತೆರೆಯಲು ಸ್ನೇಹಾ ಬಿಡಲಿಲ್ಲ. ನಂತರ ವಿಕೆಟ್ ಪತನವಾಗದಂತೆ ಕಾಪ್ ಮತ್ತು ಕ್ಲರ್ಕ್ ಅವರು ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಿದರು. 

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಭಾರತ: 115.1 ಓವರ್‌ಗಳಲ್ಲಿ 6ಕ್ಕೆ603 (ಹರ್ಮನ್‌ಪ್ರೀತ್ ಕೌರ್ 69, ರಿಚಾ ಘೋಷ್ 86, ದೀಮಿ ಟಕರ್ 141ಕ್ಕೆ2) ದಕ್ಷಿಣ ಆಫ್ರಿಕಾ: 72 ಓವರ್‌ಗಳಲ್ಲಿ 4ಕ್ಕೆ236 (ಲೌರಾ ವೊಲ್ವಾರ್ಟ್ 20, ಅನೆಕಿ ಬಾಷ್ 39, ಸುನೆ ಲೂಸ್ 65, ಮರಿಜಾನ್ ಕಾಪ್ ಬ್ಯಾಟಿಂಗ್ 69, ನದೈನ್ ಡಿ ಕ್ಲರ್ಕ್ ಬ್ಯಾಟಿಂಗ್ 27, ಸ್ನೇಹಾ ರಾಣಾ 61ಕ್ಕೆ3, ದೀಪ್ತಿ ಶರ್ಮಾ 40ಕ್ಕೆ1) 

ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್‌  –ಪಿಟಿಐ ಚಿತ್ರ
ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್‌  –ಪಿಟಿಐ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT