ಮಂಗಳವಾರ, ಸೆಪ್ಟೆಂಬರ್ 17, 2019
24 °C
ದಕ್ಷಿಣ ಆಫ್ರಿಕಾ ‘ಎ’ ಎದುರಿನ ಅಂತಿಮ ಏಕದಿನ ಪಂದ್ಯ

ಸಂಜು, ಶಿಖರ್‌ ಸ್ಫೋಟಕ ಬ್ಯಾಟಿಂಗ್‌: ಭಾರತ ‘ಎ’ ತಂಡಕ್ಕೆ ಜಯ

Published:
Updated:
Prajavani

ತಿರುವನಂತಪುರ (ಪಿಟಿಐ): ಸ್ಥಳೀಯ ಆಟಗಾರ ಸಂಜು ಸ್ಯಾಮ್ಸನ್‌ (91; 48ಎ, 6ಬೌಂ, 7ಸಿ) ಮತ್ತು ಅನುಭವಿ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌ (51; 36ಎ, 5ಬೌಂ, 2ಸಿ) ಶುಕ್ರವಾರ ಇಲ್ಲಿನ ಗ್ರೀನ್‌ಫೀಲ್ಡ್‌ ಮೈದಾನದಲ್ಲಿ ಸ್ಫೋಟಕ ಆಟ ಆಡಿ ಅಭಿಮಾನಿಗಳನ್ನು ರಂಜಿಸಿದರು.

ಇವರ ಶತಕದ ಜೊತೆಯಾಟದ ಬಲದಿಂದ ಭಾರತ ‘ಎ’ ತಂಡ ದಕ್ಷಿಣ ಆಫ್ರಿಕಾ ‘ಎ’ ಎದುರಿನ ಅಂತಿಮ ಏಕದಿನ ಪಂದ್ಯದಲ್ಲಿ 36ರನ್‌ಗಳಿಂದ ಗೆದ್ದಿತು. ಇದರೊಂದಿಗೆ 5 ಪಂದ್ಯಗಳ ಸರಣಿಯನ್ನು 4–1ರಿಂದ ಕೈವಶ ಮಾಡಿಕೊಂಡಿತು.

ಮಳೆಯ ಕಾರಣ 20 ಓವರ್‌ಗಳಿಗೆ ನಿಗದಿಪಡಿಸಲಾಗಿದ್ದ ಪಂದ್ಯದಲ್ಲಿ ಶ್ರೇಯಸ್‌ ಅಯ್ಯರ್‌ ಮುಂದಾಳತ್ವದ ಭಾರತ ‘ಎ’ ಮೊದಲು ಬ್ಯಾಟಿಂಗ್‌ ಮಾಡಿತು. ಆತಿಥೇಯರು 4 ವಿಕೆಟ್‌ಗೆ 204ರನ್‌ ಸೇರಿಸಿದರು. ಗುರಿ ಬೆನ್ನಟ್ಟಿದ ಹರಿಣಗಳ ತಂಡ 168ರನ್‌ಗಳಿಗೆ ಆಲೌಟ್‌ ಆಯಿತು.

ಶಾರ್ದೂಲ್‌ ಠಾಕೂರ್‌ ಬಿಗುವಿನ ದಾಳಿ ನಡೆಸಿದರು. ಮೂರು ಓವರ್‌ ಬೌಲ್‌ ಮಾಡಿದ ಅವರು ಕೇವಲ ಒಂಬತ್ತು ರನ್‌ ಬಿಟ್ಟುಕೊಟ್ಟು ಮೂರು ವಿಕೆಟ್‌ ಉರುಳಿಸಿದರು.

ಇನಿಂಗ್ಸ್‌ ಆರಂಭಿಸಿದ ಶ್ರೇಯಸ್‌ ಪಡೆಗೆ ಮೊದಲ ಓವರ್‌ನಲ್ಲೇ ಆಘಾತ ಎದುರಾಯಿತು. ಬ್ಯೂರನ್‌ ಹೆನ್ರಿಕ್ಸ್‌ ಹಾಕಿದ ಆರನೇ ಎಸೆತದಲ್ಲಿ ಪ್ರಶಾಂತ್ ಚೋಪ್ರಾ (2) ಹೆನ್ರಿಕ್‌ ಕ್ಲಾಸೆನ್‌ಗೆ ಕ್ಯಾಚ್‌ ನೀಡಿದರು.

ನಂತರ ಶಿಖರ್‌ ಮತ್ತು ಸಂಜು ಆಟ ರಂಗೇರಿತು. ಪ್ರವಾಸಿ ಪಡೆಯ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಈ ಜೋಡಿ ಎರಡನೇ ವಿಕೆಟ್‌ ಪಾಲುದಾರಿಕೆಯಲ್ಲಿ 135ರನ್‌ ಸೇರಿಸಿತು.

14ನೇ ಓವರ್‌ನಲ್ಲಿ ಧವನ್‌ ಔಟಾದರು. ಇದರ ಬೆನ್ನಲ್ಲೇ ಸಂಜು ಕೂಡ ಪೆವಿಲಿಯನ್‌ ಸೇರಿದರು. ತವರಿನ ಅಭಿಮಾನಿಗಳ ಎದುರು ಶತಕದ ಸಂಭ್ರಮ ಆಚರಿಸುವ ಅವರ ಕನಸು ಕೈಗೂಡಲಿಲ್ಲ.

ಬಳಿಕ ನಾಯಕ ಶ್ರೇಯಸ್‌ (36; 19ಎ, 5ಬೌಂ, 1ಸಿ) ಮತ್ತು ಶುಭಮನ್‌ ಗಿಲ್‌ (ಔಟಾಗದೆ 10; 10ಎ, 1ಬೌಂ) ವೇಗವಾಗಿ ರನ್‌ ಗಳಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.

ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ‘ಎ’ ತಂಡ 95ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡು ಸಂಕಷ್ಟ ಎದುರಿಸಿತ್ತು.

ರೀಜಾ ಹೆನ್ರಿಕ್ಸ್‌ (59; 43ಎ, 10ಬೌಂ) ಮತ್ತು ಕೈಲ್‌ ವೆರೆನ್‌ (44; 24ಎ, 3ಬೌಂ, 4ಸಿ) ಭಾರತದ ಬೌಲರ್‌ಗಳನ್ನು ದಿಟ್ಟತನದಿಂದ ಎದುರಿಸಿದರು. ಮಧ್ಯಮ ಮತ್ತು ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಬೇಗನೆ ಪೆವಿಲಿಯನ್‌ ಸೇರಿದ್ದರಿಂದ ಪ್ರವಾಸಿ ಪಡೆಯ ಗೆಲುವಿನ ಕನಸು ಕಮರಿತು.

ಸಂಕ್ಷಿಪ್ತ ಸ್ಕೋರ್‌: ಭಾರತ ‘ಎ’: 20 ಓವರ್‌ಗಳಲ್ಲಿ 4 ವಿಕೆಟ್‌ಗೆ 204 (ಶಿಖರ್‌ ಧವನ್‌ 51, ಸಂಜು ಸ್ಯಾಮ್ಸನ್‌ 91, ಶ್ರೇಯಸ್‌ ಅಯ್ಯರ್‌ 36, ಶುಭಮನ್‌ ಗಿಲ್‌ ಔಟಾಗದೆ 10; ಬ್ಯೂರನ್‌ ಹೆನ್ರಿಕ್ಸ್‌ 29ಕ್ಕೆ2, ಜಾರ್ಜ್‌ ಲಿಂಡೆ 43ಕ್ಕೆ2).

ದಕ್ಷಿಣ ಆಫ್ರಿಕಾ ‘ಎ’: 20 ಓವರ್‌ಗಳಲ್ಲಿ 168 (ಜೆ.ಮಲಾನ್‌ 16, ರೀಜಾ ಹೆನ್ರಿಕ್ಸ್‌ 59, ಕೈಲ್‌ ವೆರೆನ್‌ 44, ಹೆನ್ರಿಕ್‌ ಕ್ಲಾಸೆನ್‌ 14, ಸಿನೆತೆಂಬಾ ಕ್ವೆಶಿಲ್‌ 16; ಶಾರ್ದೂಲ್‌ ಠಾಕೂರ್‌ 9ಕ್ಕೆ3, ಇಶಾನ್‌ ಪೊರೆಲ್‌ 26ಕ್ಕೆ1, ತುಷಾರ್‌ ದೇಶಪಾಂಡೆ 28ಕ್ಕೆ1, ರಾಹುಲ್‌ ಚಾಹರ್‌ 38ಕ್ಕೆ1, ವಾಷಿಂಗ್ಟನ್‌ ಸುಂದರ್‌ 39ಕ್ಕೆ2, ಶಿವಂ ದುಬೆ 25ಕ್ಕೆ1).

ಫಲಿತಾಂಶ: ಭಾರತ ‘ಎ’ ತಂಡಕ್ಕೆ 36ರನ್‌ ಗೆಲುವು. 4–1ರಿಂದ ಸರಣಿ ಕೈವಶ.

ಪಂದ್ಯಶ್ರೇಷ್ಠ: ಸಂಜು ಸ್ಯಾಮ್ಸನ್‌.

Post Comments (+)