ಗುರುವಾರ , ಏಪ್ರಿಲ್ 22, 2021
29 °C
ಕ್ರಿಕೆಟ್‌: ವಿಂಡೀಸ್‌ ‘ಎ’ ವಿರುದ್ಧ ಭಾರತ ‘ಎ’ ತಂಡಕ್ಕೆ ಗೆಲುವು: ನವದೀಪ್‌ ಸೈನಿಗೆ ಐದು ವಿಕೆಟ್‌

ಭಾರತ ‘ಎ’ ತಂಡಕ್ಕೆ ಜಯಭೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆ್ಯಂಟಿಗ, ವೆಸ್ಟ್‌ ಇಂಡೀಸ್‌: ಆರಂಭಿಕರಾದ ಋತುರಾಜ್‌ ಗಾಯಕವಾಡ್‌ (85; 102ಎ, 5ಬೌಂ, 2ಸಿ) ಮತ್ತು ಶುಭಮನ್‌ ಗಿಲ್‌ (62; 83ಎ, 4ಬೌಂ, 1ಸಿ) ಅವರ ಅಮೋಘ ಜೊತೆಯಾಟದ ಬಲದಿಂದ ಭಾರತ ‘ಎ’ ತಂಡ ಎರಡನೇ ‘ಏಕದಿನ’ ಪಂದ್ಯದಲ್ಲಿ 65ರನ್‌ಗಳಿಂದ ವೆಸ್ಟ್‌ ಇಂಡೀಸ್‌ ‘ಎ’ ತಂಡವನ್ನು ಸೋಲಿಸಿದೆ.

ಸರ್‌ ವಿವಿಯನ್‌ ರಿಚರ್ಡ್ಸ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಮನೀಷ್‌ ಪಾಂಡೆ ಮುಂದಾಳತ್ವದ ಭಾರತ ‘ಎ’ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 255ರನ್‌ ದಾಖಲಿಸಿತು.

ಸವಾಲಿನ ಗುರಿ ಬೆನ್ನಟ್ಟಿದ ಆತಿಥೇಯರು 43.5 ಓವರ್‌ಗಳಲ್ಲಿ 190ರನ್‌ಗಳಿಗೆ ಹೋರಾಟ ಮುಗಿಸಿದರು.

ಬ್ಯಾಟಿಂಗ್‌ ಆರಂಭಿಸಿದ ಭಾರತ ‘ಎ’ ತಂಡಕ್ಕೆ ಋತುರಾಜ್‌ ಮತ್ತು ಶುಭಮನ್‌ ಅಮೋಘ ಆರಂಭ ನೀಡಿದರು. ಕೆರಿಬಿಯನ್‌ ಬೌಲರ್‌ಗಳನ್ನು ಕಾಡಿದ ಈ ಜೋಡಿ ಮೊದಲ ವಿಕೆಟ್‌ಗೆ 151ರನ್‌ ಸೇರಿಸಿತು. ಆರು ಎಸೆತಗಳ ಅಂತರದಲ್ಲಿ ಇವರು ಪೆವಿಲಿಯನ್‌ ಸೇರಿದರು. ಶ್ರೇಯಸ್‌ ಅಯ್ಯರ್‌ (2) ಕೂಡಾ ಬೇಗನೆ ಔಟಾದರು.

ನಂತರ ಮನೀಷ್‌ (27), ಹನುಮ ವಿಹಾರಿ (23) ಮತ್ತು ಇಶಾನ್‌ ಕಿಶನ್‌ (24) ಜವಾಬ್ದಾರಿಯುತ ಬ್ಯಾಟಿಂಗ್‌ ಮಾಡಿ ತಂಡದ ಮೊತ್ತ ಹೆಚ್ಚಿಸಿದರು.

ಗುರಿ ಬೆನ್ನಟ್ಟಿದ ವಿಂಡೀಸ್‌ಗೆ ಎರಡನೇ ಓವರ್‌ನಲ್ಲಿ ಖಲೀಲ್‌ ಅಹಮದ್‌ ಆಘಾತ ನೀಡಿದರು. ಕೊನೆಯ ಎಸೆತದಲ್ಲಿ ಜಾನ್‌ ಕ್ಯಾಂಪ್‌ಬೆಲ್‌ (5), ವಿಕೆಟ್‌ ಕೀಪರ್‌ ಇಶಾನ್‌ ಕಿಶನ್‌ಗೆ ಕ್ಯಾಚ್‌ ಕೊಟ್ಟರು.

ಸುನಿಲ್‌ ಆ್ಯಂಬ್ರಿಸ್‌ (24; 31ಎ, 3ಬೌಂ) ಮತ್ತು ರೇಮನ್‌ ರೀಫರ್‌ (71; 105ಎ, 7ಬೌಂ, 3ಸಿ) ತಂಡವನ್ನು ಅಪಾಯದಿಂದ ಮೇಲಕ್ಕೆತ್ತುವ ಪ್ರಯತ್ನ ಮಾಡಿದರು.

ಇವರು ಔಟಾದ ನಂತರ ತಂಡ ಕುಸಿತದ ಹಾದಿ ಹಿಡಿಯಿತು. ನಾಯಕ ರಾಸ್ಟನ್‌ ಚೇಸ್‌ (2) ಸೇರಿದಂತೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಕಂಡರು. ಹೀಗಾಗಿ ಆತಿಥೇಯರಿಗೆ ಸೋಲು ಎದುರಾಯಿತು.

ಸಂಕ್ಷಿಪ್ತ ಸ್ಕೋರ್‌: ಭಾರತ ‘ಎ’: 50 ಓವರ್‌ಗಳಲ್ಲಿ 8 ವಿಕೆಟ್‌ಗೆ 255 (ಋತುರಾಜ್‌ ಗಾಯಕವಾಡ್‌ 85, ಶುಭಮನ್‌ ಗಿಲ್‌ 62, ಮನೀಷ್‌ ಪಾಂಡೆ 27, ಹನುಮ ವಿಹಾರಿ 23, ಇಶಾನ್‌ ಕಿಶನ್‌ 24, ಅಕ್ಷರ್‌ ಪಟೇಲ್‌ 13; ರೊಮೇರಿಯೊ ಶೆಫರ್ಡ್‌ 36ಕ್ಕೆ4, ಅಕೀಮ್‌ ಜೋರ್ಡನ್‌ 56ಕ್ಕೆ1, ರೇಮನ್‌ ರೀಫರ್‌ 52ಕ್ಕೆ1, ರಖೀಮ್‌ ಕಾರ್ನ್‌ವಾಲ್‌ 45ಕ್ಕೆ1, ಖಾರಿ ಪಿಯೆರೆ 44ಕ್ಕೆ1).

ವೆಸ್ಟ್‌ ಇಂಡೀಸ್‌ ‘ಎ’: 43.5 ಓವರ್‌ಗಳಲ್ಲಿ 190 (ಸುನಿಲ್‌ ಆ್ಯಂಬ್ರಿಸ್‌ 24, ರೇಮನ್‌ ರೀಫರ್‌ 71, ಜೊನಾಥನ್‌ ಕಾರ್ಟರ್‌ 10, ರಖೀಮ್‌ ಕಾರ್ನ್‌ವಾಲ್‌ 13, ರೊಮೇರಿಯೊ ಶೆಫರ್ಡ್‌ ಔಟಾಗದೆ 34; ಖಲೀಲ್‌ ಅಹಮದ್‌ 32ಕ್ಕೆ1, ಅಕ್ಷರ್‌ ಪಟೇಲ್‌ 21ಕ್ಕೆ1, ನವದೀಪ್‌ ಸೈನಿ 46ಕ್ಕೆ5, ರಾಹುಲ್‌ ಚಾಹರ್‌ 47ಕ್ಕೆ2).

ಫಲಿತಾಂಶ: ಭಾರತ ‘ಎ’ ತಂಡಕ್ಕೆ 65ರನ್‌ ಗೆಲುವು ಹಾಗೂ 5 ಪಂದ್ಯಗಳ ಸರಣಿಯಲ್ಲಿ 2–0 ಮುನ್ನಡೆ.

ಪಂದ್ಯಶ್ರೇಷ್ಠ: ಋತುರಾಜ್‌ ಗಾಯಕವಾಡ್‌.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು