ಕ್ರಿಕೆಟ್‌: ದಕ್ಷಿಣ ಆಫ್ರಿಕಾ ‘ಎ’ ತಂಡದ ವಿರುದ್ಧ ಮಯಂಕ್‌ ದ್ವಿಶತಕ ಸಂಭ್ರಮ

7

ಕ್ರಿಕೆಟ್‌: ದಕ್ಷಿಣ ಆಫ್ರಿಕಾ ‘ಎ’ ತಂಡದ ವಿರುದ್ಧ ಮಯಂಕ್‌ ದ್ವಿಶತಕ ಸಂಭ್ರಮ

Published:
Updated:

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರದ ಬಹುತೇಕ ಸಮಯ ಬ್ಯಾಟ್ಸ್‌ಮನ್ ಮತ್ತು ಬೌಲರ್‌ಗಳ ನಡುವೆ ಪೈಪೋಟಿ ಇರಲಿಲ್ಲ. ಆದರೆ ಆಲ್ಲಿ ಕ್ರೀಸ್‌ನಲ್ಲಿದ್ದ ಇಬ್ಬರು ಬ್ಯಾಟ್ಸ್‌ಮನ್‌ಗಳ ನಡುವೆ ರನ್‌ ಗಳಿಸುವ ‘ಸ್ಪರ್ಧೆ’ ನಡೆಯಿತು. ಅದರ ಫಲವಾಗಿ ಬೌಲರ್‌ಗಳು ಬಸವಳಿಯುವಂತಾಯಿತು.

ಭಾರತ ‘ಎ’ ತಂಡದ ಮಯಂಕ್ ಅಗರವಾಲ್ ಮತ್ತು ಪೃಥ್ವಿ ಶಾ ಅವರೇ ಆ ಬ್ಯಾಟ್ಸ್‌ಮನ್‌ಗಳು. ದಕ್ಷಿಣ  ಆಫ್ರಿಕಾ ‘ಎ’ ತಂಡದ ಎದುರು ಇಲ್ಲಿ ನಡೆಯುತ್ತಿರುವ ‘ಟೆಸ್ಟ್‌’ ಪಂದ್ಯದ ಎರಡನೇ ದಿನ  ‘ತವರಿನ ಅಂಗಳ’ದ ಲಾಭ ಪಡೆದ ಮಯಂಕ್ (ಬ್ಯಾಟಿಂಗ್ 220; 250ಎಸೆತ, 370 ನಿಮಿಷ, 31 ಬೌಂಡರಿ, 4 ಸಿಕ್ಸರ್) ದ್ವಿಶತಕ ಸಿಡಿಸಿದರೆ,  ‘ಮುಂಬೈಕರ್‌’ ಪೃಥ್ವಿ (136; 196ಎಸೆತ, 20ಬೌಂಡರಿ, 1 ಸಿಕ್ಸರ್)  ಅಕರ್ಷಕ ಶತಕ ದಾಖಲಿಸಿದರು.   ಇದರ ಫಲವಾಗಿ ದಿನದಾಟದ ಕೊನೆಗೆ ಆತಿಥೇಯ ತಂಡವು ಮೊದಲ ಇನಿಂಗ್ಸ್‌ನಲ್ಲಿ 165 ರನ್‌ಗಳ ಮುನ್ನಡೆ ಸಾಧಿಸಿತು. ಪ್ರವಾಸಿ ಬಳಗವು ಗಳಿಸಿದ್ದ 246 ರನ್‌ಗಳಿಗೆ ಉತ್ತರವಾಗಿ ಭಾರತ ’ಎ’  87 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 411 ರನ್‌ ಗಳಿಸಿದೆ. ನಾಯಕ ಶ್ರೇಯಸ್ ಅಯ್ಯರ್ (ಬ್ಯಾಟಿಂಗ್ 9) ಕ್ರೀಸ್‌ನಲ್ಲಿದ್ದಾರೆ.

ಮಯಂಕ್–ಪೃಥ್ವಿ ಜಿದ್ದಾಜಿದ್ದಿ: ಶನಿವಾರ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ದಕ್ಷಿಣ ಆಫ್ರಿಕಾ ‘ಎ’ ತಂಡವು 88 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 246 ರನ್‌ ಗಳಿಸಿತ್ತು. ಭಾನುವಾರ ಬೆಳಿಗ್ಗೆ  ಆಟ ಮುಂದುವರಿಸಿದ ತಂಡದ ಇನಿಂಗ್ಸ್‌ ಮೂರೇ ಎಸೆತಗಳಲ್ಲಿ ಮುಗಿಯಿತು. ಬಾಕಿ ಇದ್ದ ಎರಡು ವಿಕೆಟ್‌ಗಳನ್ನು ಕಬಳಿಸಿದ ಮೊಹಮ್ಮದ್ ಸಿರಾಜ್ ತಮ್ಮ ಗಳಿಕೆಯನ್ನು ಐದಕ್ಕೇರಿಸಿಕೊಂಡರು.

ಬ್ಯಾಟಿಂಗ್ ಆರಂಭಿಸಿದ ಆತಿಥೇಯ ತಂಡದ ಮಯಂಕ್ ಮತ್ತು ಪೃಥ್ವಿ ಅವರು ಶುರುವಿನಿಂದಲೇ ಆಕ್ರಮಣಕಾರಿ ಆಟ ಆರಂಭಿಸಿದರು. ಇದರಿಂದ ಎದುರಾಳಿ ಬೌಲರ್‌ಗಳು ಎದೆಗುಂದಿದರು. ಲೈನ್ ಮತ್ತು ಲೆಂಗ್ತ್‌ ನಿರ್ವಹಿಸುವಲ್ಲಿ ಎಡವಿದರು. ಆರಂಭಿಕ ಹಂತದಲ್ಲಿ ಹೆಚ್ಚು ರನ್ ಗಳಿಸಿದ್ದ ಮಯಂಕ್ ಅವರನ್ನು ಹಿಂದಿಕ್ಕಿದ ಪೃಥ್ವಿ ಅರ್ಧಶತಕದ ಗಡಿ ಮುಟ್ಟಿದರು. ಆದರೆ ಮಯಂಕ್  (100; 102 ಎಸೆತ, 153 ನಿಮಿಷ, 17 ಬೌಂಡರಿ, 1 ಸಿಕ್ಸರ್) ಶತಕ ಗಳಿಸುವಲ್ಲಿ ಮೊದಲಿಗರಾದರು. ‌ಆಗ ಪೃಥ್ವಿ 94 ರನ್ ಗಳಿಸಿ ಆಡುತ್ತಿದ್ದರು. ಪೃಥ್ವಿ 116 ಎಸೆತಗಳಲ್ಲಿ ಶತಕದ ಗಡಿ ದಾಟಿದರು. ಮೊದಲ ವಿಕೆಟ್‌ಗೆ 277 ರನ್‌ಗಳನ್ನು ಪೇರಿಸಿದರು. 59ನೇ ಓವರ್‌ನಲ್ಲಿ ಡೇನ್ ಪೀಡ್ತ್ ಅವರ ಎಸೆತದಲ್ಲಿ ಪೃಥ್ವಿ ಕ್ಲೀನ್ ಬೌಲ್ಡ್‌ ಆದಾಗ ಜೊತೆಯಾಟಕ್ಕೆ ತೆರೆಬಿದ್ದಿತು.

ನಂತರ ತಮ್ಮ ‘ಗೆಳೆಯ’ ಆರ್. ಸಮರ್ಥ್ ಜೊತೆಗೂಡಿದ ಮಯಂಕ್ ಬೌಲರ್‌ಗಳನ್ನು ಮತ್ತಷ್ಟು ಕಾಡಿದರು. ಒಟ್ಟು 223 ಎಸೆತಗಳಲ್ಲಿ ದ್ವಿಶತಕದ ಗಡಿ ಮುಟ್ಟಿದರು. ಲೀಸ್ಟ್‌ ‘ಎ’ ಕ್ರಿಕೆಟ್‌ನಲ್ಲಿ ಇದು ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ. ಇದುವರೆಗೆ ಅವರ ಶ್ರೇಷ್ಠ ಸ್ಕೋರ್ 176 ಆಗಿತ್ತು. ಹೋದ ವರ್ಷ ರಣಜಿ ಟೂರ್ನಿಯಲ್ಲಿ ಅವರು ತ್ರಿಶತಕ ದಾಖಲಿಸಿದ್ದರು. ದೇಶಿ ಋತುವಿನಲ್ಲಿ ಒಟ್ಟು 2234 ರನ್‌ಗಳನ್ನು ಗಳಿಸಿದ್ದರು. ಈಚೆಗೆ ಇಂಗ್ಲೆಂಡ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿಯೂ ಶತಕ ಬಾರಿಸಿದ್ದರು. ಎರಡನೇ ವಿಕೆಟ್‌ಗೆ 118 ರನ್‌ಗಳನ್ನು ಸೇರಿಸಿದ ಸಮರ್ಥ್ ಡೇನ್  ಒಲಿವರ್ ಎಸೆತದಲ್ಲಿ ಔಟಾದರು.

ಸಂಕ್ಷಿಪ್ತ ಸ್ಕೋರು:
ಮೊದಲ ಇನಿಂಗ್ಸ್‌:
ದಕ್ಷಿಣ ಆಫ್ರಿಕಾ ‘ಎ’ : 246 (ಶಾನ್ ವಾನ್ ಬರ್ಗ್ 15, ಮಲೂಸಿ ಸಿಬೊಟೊ ಔಟಾಗದೆ 13, ಮೊಹಮ್ಮದ್ ಸಿರಾಜ್ 56ಕ್ಕೆ5, ನವದೀಪ್ ಸೈನಿ 47ಕ್ಕೆ2, ರಜನೀಶ್ ಗುರ್ಬಾನಿ 47ಕ್ಕೆ2, ಯಜುವೇಂದ್ರ ಚಾಹಲ್ 54ಕ್ಕೆ1)

ಭಾರತ ‘ಎ‘: 87 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 411 (ಪೃಥ್ವಿ ಶಾ 136, ಮಯಂಕ್ ಅಗರವಾಲ್ ಬ್ಯಾಟಿಂಗ್ 220, ಆರ್. ಸಮರ್ಥ್ 37, ಶ್ರೇಯಸ್ ಅಯ್ಯರ್ ಬ್ಯಾಟಿಂಗ್ 9. ಡನ್ ಒಲಿವೀಯರ್ 69ಕ್ಕೆ1, ಡೇನ್ ಪೀಡ್ತ್ 56ಕ್ಕೆ1)

ಬರಹ ಇಷ್ಟವಾಯಿತೆ?

 • 14

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !