ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಚ್‌ ಹುದ್ದೆ: ಆಕಾಂಕ್ಷಿಗಳ ಪಟ್ಟಿಯಲ್ಲಿ ಕರ್ಸ್ಟನ್‌, ಗಿಬ್ಸ್‌

ಇಂದು ಮಹಿಳಾ ಕ್ರಿಕೆಟ್‌ ತಂಡದ ಕೋಚ್‌ ಹುದ್ದೆಗೆ ಸಂದರ್ಶನ
Last Updated 19 ಡಿಸೆಂಬರ್ 2018, 19:34 IST
ಅಕ್ಷರ ಗಾತ್ರ

ಮುಂಬೈ: ಭಾರತ ಮಹಿಳಾ ಕ್ರಿಕೆಟ್‌ ತಂಡದ ನೂತನ ಕೋಚ್‌ ಹುದ್ದೆಗೆ ಗುರುವಾರ ಸಂದರ್ಶನ ನಡೆಯಲಿದೆ.

ದಕ್ಷಿಣ ಆಫ್ರಿಕಾದ ಗ್ಯಾರಿ ಕರ್ಸ್ಟನ್‌, ಹರ್ಷಲ್‌ ಗಿಬ್ಸ್‌ ಮತ್ತು ಭಾರತದ ರಮೇಶ್‌ ಪೊವಾರ್‌ ಅವರು ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ.

ಕೋಚ್‌ ಹುದ್ದೆಗೆ ಒಟ್ಟು 28 ಮಂದಿ ಅರ್ಜಿ ಸಲ್ಲಿಸಿದ್ದರು.ಹಿರಿಯ ಕ್ರಿಕೆಟಿಗರಾದ ಕಪಿಲ್‌ ದೇವ್‌, ಅನ್ಸುಮಾನ್‌ ಗಾಯಕವಾಡ್‌ ಮತ್ತು ಶಾಂತಾ ರಂಗಸ್ವಾಮಿ ಅವರನ್ನು ಹೊಂದಿರುವ ಅಡ್‌ಹಾಕ್‌ ಸಮಿತಿ, ಸಂಭಾವ್ಯರ ಪಟ್ಟಿಯನ್ನು ಸಿದ್ಧಪಡಿಸಿದ್ದು, ಸಂದರ್ಶನಕ್ಕೆ ಹಾಜರಾಗುವಂತೆ ಅವರಿಗೆ ಸೂಚಿಸಿದೆ.

ಕರ್ನಾಟಕದ ವೆಂಕಟೇಶ್‌ ಪ್ರಸಾದ್‌, ಡಬ್ಲ್ಯು.ವಿ.ರಾಮನ್‌, ಮನೋಜ್‌ ಪ್ರಭಾಕರ್‌, ಟ್ರೆಂಟ್‌ ಜಾನ್ಸ್‌ಟನ್‌, ಮಾರ್ಕ್‌ ಕೊಲೆಸ್‌, ಡಿಮಿಟ್ರಿ ಮಸ್ಕರೆನ್ಹಾಸ್‌ ಮತ್ತು ಬ್ರಾಡ್‌ ಹಾಗ್‌ ಅವರೂ ಈ ಪಟ್ಟಿಯಲ್ಲಿದ್ದಾರೆ.

ಭಾರತದವರು ನೇರವಾಗಿ ಸಂದರ್ಶನಕ್ಕೆ ಹಾಜರಾಗಲಿದ್ದು, ಕರ್ಸ್ಟನ್‌, ಗಿಬ್ಸ್‌, ಹಾಗ್‌ ಸೇರಿದಂತೆ ಕೆಲವರು ‘ಸ್ಕೈಪ್‌’ ಮೂಲಕ ಸಂದರ್ಶಕರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ.

ಕರ್ಸ್ಟನ್‌ ಅವರು ಈ ಹಿಂದೆ ಭಾರತ ಪುರುಷರ ತಂಡದ ಕೋಚ್‌ ಆಗಿದ್ದರು. ಅವರ ಮಾರ್ಗದರ್ಶನದಲ್ಲಿ ಮಹೇಂದ್ರ ಸಿಂಗ್‌ ಧೋನಿ ಬಳಗ ಏಕದಿನ ವಿಶ್ವಕಪ್‌ನಲ್ಲಿ ಪ್ರಶಸ್ತಿ ಜಯಿಸಿತ್ತು. ಹೀಗಾಗಿ ಸಂದರ್ಶಕರು ಕರ್ಸ್ಟನ್‌ ಮೇಲೆ ಒಲವು ತೋರಬಹುದು ಎನ್ನಲಾಗಿದೆ.

ಈ ಹಿಂದೆ ಕೋಚ್‌ ಆಗಿದ್ದ ರಮೇಶ್‌ ಪೊವಾರ್‌ ಅವರ ಅವಧಿ ನವೆಂಬರ್‌ 30ರಂದು ಮುಗಿದಿತ್ತು. ಹೀಗಾಗಿ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ನೂತನ ಕೋಚ್‌ ನೇಮಕಕ್ಕೆ ಅರ್ಜಿ ಆಹ್ವಾನಿಸಿತ್ತು.

ಬಿಸಿಸಿಐ ಆಡಳಿತಾಧಿಕಾರಿಗಳ ಸಮಿತಿಯ (ಸಿಒಎ) ಸದಸ್ಯೆ ಡಯಾನ ಎಡುಲ್ಜಿ ಅವರು ಮುಂದಿನ ತಿಂಗಳು ನಡೆಯುವ ನ್ಯೂಜಿಲೆಂಡ್‌ ಎದುರಿನ ಸರಣಿಯವರೆಗೂ ಪೊವಾರ್‌ ಅವರನ್ನು ಕೋಚ್‌ ಹುದ್ದೆಯಲ್ಲಿ ಮುಂದುವರಿಸುವಂತೆ ಸಲಹೆ ನೀಡಿದ್ದರು. ಇದನ್ನು ಒಪ್ಪದ ಸಿಒಎ ಮುಖ್ಯಸ್ಥ ವಿನೋದ್‌ ರಾಯ್‌, ಹೊಸದಾಗಿ ಅರ್ಜಿ ಕರೆದು ಅರ್ಹರನ್ನು ನೇಮಿಸುವಂತೆ ಸೂಚಿಸಿದ್ದರು.

ಪೊವಾರ್‌ ಅವರ ಮಾರ್ಗದರ್ಶನದಲ್ಲಿ ಈ ಬಾರಿಯ ವಿಶ್ವ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದ ಭಾರತ ತಂಡ ಇಂಗ್ಲೆಂಡ್‌ ಎದುರು ಸೋತಿತ್ತು. ಈ ಹಣಾಹಣಿಯಲ್ಲಿ ಹಿರಿಯ ಆಟಗಾರ್ತಿ ಮಿಥಾಲಿ ರಾಜ್‌ಗೆ ಆಡುವ ಬಳಗದಲ್ಲಿ ಅವಕಾಶ ನೀಡಿರಲಿಲ್ಲ. ಕೋಚ್‌ ಮತ್ತು ಆಡಳಿತ ಮಂಡಳಿಯ ಈ ನಿರ್ಧಾರ ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು.

ಪೊವಾರ್‌ ಮತ್ತು ಡಯಾನ ಎಡುಲ್ಜಿ ಅವರು ತಮ್ಮನ್ನು ನಾಶ ಮಾಡಲು ಹೊರಟಿದ್ದಾರೆ ಎಂದು ಮಿಥಾಲಿ ಆರೋಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT