ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟಿಗರ ಬಾಕಿ ವೇತನ ಸಿಗುವುದೇ?

ಬಿಸಿಸಿಐ ವಿಶೇಷ ಸಾಮಾನ್ಯ ಸಭೆ ಇಂದು
Last Updated 21 ಜೂನ್ 2018, 18:54 IST
ಅಕ್ಷರ ಗಾತ್ರ

ನವದೆಹಲಿ: ಭಾರತ ತಂಡದ ಕೆಲವು ಅಗ್ರಶ್ರೇಣಿಯ ಕ್ರಿಕೆಟಿಗರಿಗೆ ಬಾಕಿ ವೇತನ ಸಂದಾಯ ಮಾಡುವ ಕುರಿತು ಶುಕ್ರವಾರ ನಡೆಯುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿಶೇಷ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗುವ ನಿರೀಕ್ಷೆ ಇದೆ.

ಬಿಸಿಸಿಐ ಪದಾಧಿಕಾರಿಗಳು ಮತ್ತು ಆಡಳಿತ ಸಮಿತಿ (ಸಿಒಎ)ಯ ಅಧಿಕಾರಿಗಳು ಸಭೆಯಲ್ಲಿ ಹಾಜರಿರುವರು. ಪ್ರಮುಖ 10 ಅಂಶಗಳ ಕುರಿತು ಚರ್ಚೆ ನಡೆಯಲಿದೆ. ಅದರಲ್ಲಿ ಪ್ರಮುಖವಾಗಿ ಆಟಗಾರರ ವೇತನ ಬಾಕಿ ವಿಷಯ ಇದೆ ಎಂದು ಮಂಡಳಿಯ ಮೂಲಗಳು ತಿಳಿಸಿವೆ.

ಹೋದ ಮಾರ್ಚ್ 5ರಂದು ಬಿಸಿಸಿಐನ ಕೇಂದ್ರ ಗುತ್ತಿಗೆಗೆ ಸಹಿ ಹಾಕಿದ್ದ ಆಟಗಾರರ ವೇತನ ಬಾಕಿ ಇದೆ. ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡವು ಜೂನ್ 23ರಂದು ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸ ಆರಂಭಿಸಲಿದೆ.

‘ಆಟಗಾರರಿಗೆ ವೇತನ ಬಾಕಿ ಇರುವುದು ಸರಿಯಲ್ಲ. ಈ ವಿಷಯದಲ್ಲಿ ನನಗೆ ಅಪರಾಧಪ್ರಜ್ಞೆ ಕಾಡುತ್ತಿದೆ.ಸಾಮಾನ್ಯ ಸಭೆಯಲ್ಲಿ ಈ ಕುರಿತು ಏನು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ನೋಡಬೇಕು. ಹಣಕಾಸು ಸಮಿತಿಗೆ ಈ ಕುರಿತು ಪ್ರಸ್ತಾವ ಸಲ್ಲಿಸಲಾಗಿದೆ. ಆಟಗಾರರು ಸಹಿ ಮಾಡಿರುವ ಒಪ್ಪಂದ ಪತ್ರಗಳನ್ನೂ ಸಮಿತಿಗೆ ನೀಡಲಾಗಿದೆ’ ಎಂದು ಸಿಒಎ ಮುಖ್ಯಸ್ಥ ವಿನೋದ್ ರಾಯ್ ಹೇಳಿದ್ದಾರೆ.

ಪರಿಷ್ಕರಣೆಯಾದ ವೇತನದ ಪ್ರಕಾರ ‘ಎ’ ಪ್ಲಸ್ ಗುಂಪಿನ ಆಟಗಾರರು ₹ 7ಕೋಟಿ, ಎ ಗುಂಪಿನ ಆಟಗಾರರು ₹ 5 ಕೋಟಿ, ಬಿ ಗುಂಪಿನವರು ₹ 3 ಮತ್ತು ಸಿ ಗುಂಪಿನವರು ₹ 1 ಕೋಟಿ ಪಡೆಯುವರು. ಒಟ್ಟು 27 ಆಟಗಾರರು ಈ ಗುಂಪುಗಳಲ್ಲಿದ್ದಾರೆ.

‘ವೇತನವಲ್ಲದೇ ಪ್ರತಿ ತಿಂಗಳಿನ ಸಂಭಾವನೆ ಮತ್ತು ದಿನಭತ್ಯೆಗಳನ್ನು ನೀಡುವ ಪ್ರಸ್ತಾವಕ್ಕೆ ಅಮಿತಾಭ್ ಚೌಧರಿ ಅವರು ಅನುಮೋದನೆ ನೀಡಬೇಕಿದೆ. ಅದರಿಂದಾಗಿ ವೇತನ ಬಾಕಿ ಉಳಿದಿದೆ‘ ಎಂದು ಮೂಲಗಳು ತಿಳಿಸಿವೆ.

ಚರ್ಚೆಯಾಗಲಿರುವ ಪ್ರಮುಖ ವಿಷಯಗಳು
* ಗುತ್ತಿಗೆಯಲ್ಲಿರುವ ಆಟಗಾರರ ವೇತನ ಬಾಕಿ ಪಾವತಿ
* ಐಸಿಸಿಯಲ್ಲಿ ಸದಸ್ಯರ ಪಾಲ್ಗೊಳ್ಳುವಿಕೆ ಒಪ್ಪಂದ ಕುರಿತು
* ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯು ನಷ್ಟ ಪರಿಹಾರಕ್ಕೆ ಆಗ್ರಹಿಸಿ ಹೂಡಿರುವ ದಾವೆ
* 2021ರ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯನ್ನು ವಿಶ್ವ ಟ್ವೆಂಟಿ–20 ಟೂರ್ನಿಯಾಗಿ ಪರಿವರ್ತಿಸಿದ ಕುರಿತು
* ನ್ಯಾಷನಲ್ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಯಲ್ಲಿ ನಡೆಯುವ ನೇಮಕಾತಿಗಳ ನಿಯಮಾವಳಿಗಳು.

ಚೌಧರಿಗೆ ನೋಟಿಸ್
ಭೂತಾನ್‌ನಲ್ಲಿ ನಡೆದ ಸಮೀಕ್ಷೆ ಕಾರ್ಯಕ್ರಮವೊಂದಕ್ಕೆ ತೆರಳಿದ್ದ ಬಿಸಿಸಿಐ ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿ ಅವರಿಗೆ ಸಿಒಎ ಕಾರಣ ಕೇಳಿ ನೋಟಿಸ್ ನೀಡಿದೆ.

‘ಭೂತಾನ್‌ಗೆ ತೆರಳಿದ್ದ ಔಚಿತ್ಯವೇನು, ಅಲ್ಲಿಗೆ ತೆರಳುವ ಅಗತ್ಯವಿತ್ತೇ ಮತ್ತು ಮೊದಲೇ ಅನುಮತಿ ಏಕೆ ಪಡೆದಿಲ್ಲ’ ಎಂದು ಸಿಒಎ ಅಮಿತಾಭ್ ಅವರನ್ನು ಪ್ರಶ್ನಿಸಿದೆ.

‘ಭೂತಾನ್‌ನಲ್ಲಿ ‘ಮಣ್ಣು ಮತ್ತು ಕ್ರಿಕೆಟ್ ಸಲಕರಣೆಗಳು’ ಎಂಬ ವಿಷಯದ ಕುರಿತು ಸಮೀಕ್ಷೆ ಮತ್ತು ವಿಚಾರ ಸಂಕಿರಣ ಇತ್ತು. ಅದು ತಾಂತ್ರಿಕ ವಿಷಯವಾಗಿದೆ. ಪಿಚ್ ಕ್ಯುರೇಟರ್ ಮತ್ತು ಕ್ರಿಕೆಟ್ ಆಪರೇಷನ್‌ನ ಎಜಿಎಂ ಅವರು ಇಂತಹದಕ್ಕೆ ಹೋಗುವುದು ಸೂಕ್ತ’ ಎಂದು ಸಿಒಎ ಪತ್ರದಲ್ಲಿ ಉಲ್ಲೇಖಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT