ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭ್ಯಾಸ ಕಣದಲ್ಲಿ ಭಾರತ ಕ್ರಿಕೆಟ್ ತಂಡ

ಪ್ರಮುಖರಿಂದ ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ; ಬೆವರು ಸುರಿಸಿದ ವೇಗದ ಬೌಲರ್‌ಗಳು
Last Updated 10 ಜೂನ್ 2021, 15:04 IST
ಅಕ್ಷರ ಗಾತ್ರ

ಸೌತಾಂಪ್ಟನ್: ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್ ಪಂದ್ಯಕ್ಕೆ ಸಜ್ಜಾಗುತ್ತಿರುವ ಭಾರತ ಕ್ರಿಕೆಟ್ ತಂಡ ಇಂಗ್ಲೆಂಡ್‌ನಲ್ಲಿ ಗುರುವಾರ ಅಭ್ಯಾಸ ಆರಂಭಿಸಿದೆ. ಏಜೀಸ್ ಬೌಲ್ ಕ್ರೀಡಾಂಗಣದ ಸಮೀಪದ ಮೈದಾನದಲ್ಲಿ ಆಟಗಾರರು ವಿವಿಧ ಗುಂಪುಗಳಲ್ಲಿ ಅಭ್ಯಾಸ ಮಾಡಿದರು.

ನ್ಯೂಜಿಲೆಂಡ್‌ ವಿರುದ್ಧ ಇದೇ ತಿಂಗಳ 18ರಂದು ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯ ಆರಂಭವಾಗಲಿದೆ. ಭಾರತದ ಪುರುಷರ ಮತ್ತು ಮಹಿಳೆಯರ ತಂಡಗಳು ಜೊತೆಯಾಗಿ ಇಂಗ್ಲೆಂಡ್‌ಗೆ ತೆಳಿದ್ದವು. ಆದರೆ ಆಟಗಾರರು ಮೂರು ದಿನ ಕಠಿಣ ಕ್ವಾರಂಟೈನ್ ಒಳಗೊಂಡಂತೆ ಐದು ದಿನ ಹೋಟೆಲ್ ಕೊಠಡಿಯಲ್ಲೇ ಇದ್ದರು.

ಮೊದಲ ಮೂರು ದಿನಗಳ ಕ್ವಾರಂಟೈನ್ ನಂತರ ಆಟಗಾರರಿಗೆ ಜಿಮ್‌ ಮತ್ತು ಸಣ್ಣ ಪ್ರಮಾಣದ ಅಭ್ಯಾಸಕ್ಕೆ ಅವಕಾಶ ನೀಡಲಾಗಿತ್ತು. ಹ್ಯಾಂಪ್‌ಶೈರ್ ಬೌಲ್‌ಗೆ ಸಂಬಂಧಿಸಿದ ಹಿಲ್ಟನ್ ಹೋಟೆಲ್‌ನಿಂದ ಹೊರಬಂದಿದ್ದ ಆಟಗಾರರು ವೈಯಕ್ತಿಕ ಫಿಟ್‌ನೆಸ್‌ ಮತ್ತು ಅಭ್ಯಾಸದ ಕಡೆಗೆ ಗಮನ ನೀಡಿದ್ದರು. ಗುಂಪಾಗಿ ಅಭ್ಯಾಸ ಮಾಡಲು ಇದೇ ಮೊದಲ ಅವಕಾಶವಾಗಿತ್ತು. ವ್ಯಾಯಾಮಕ್ಕೆ ಬೇಕಾದ ಅಗತ್ಯ ಸಲಕರಣೆಗಳನ್ನು ಹೋಟೆಲ್ ಕೊಠಡಿಯಲ್ಲೇ ಒದಗಿಸಲಾಗಿತ್ತು.

ನೆಟ್ಸ್‌ನಲ್ಲಿ ನಾಯಕ ವಿರಾಟ್ ಕೊಹ್ಲಿ, ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್ ಶರ್ಮಾ, ಮಧ್ಯಮ ಕ್ರಮಾಂಕದ ಚೇತೇಶ್ವರ್ ಪೂಜಾರ, ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್‌ ಮುಂತಾದವರು ಕೆಲ ಕಾಲ ಅಭ್ಯಾಸ ಮಾಡಿದರು. ಥ್ರೋಡೌನ್ ಎಸೆತಗಳನ್ನೂ ಅವರು ಎದುರಿಸಿದರು.

ಬೌಲರ್‌ಗಳು ಸ್ವಲ್ಪ ಹೆಚ್ಚು ಬೆವರು ಸುರಿಸಿದರು. ವೇಗಿಗಳಾದ ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮುಂತಾದವರು ಬೌಲಿಂಗ್ ಮಾಡಿದರು.

ನೆಟ್ಸ್‌ನಲ್ಲಿ ಅಭ್ಯಾಸ ಮಾಡಿದ ನಂತರ ಫೀಲ್ಡಿಂಗ್ ಕೋಚ್‌ ಆರ್‌.ಶ್ರೀಧರ್‌ ಬಳಿಗೆ ಆಟಗಾರರು ತೆರಳಿದರು. ಸ್ಪಿಪ್‌ನಲ್ಲಿ ಕ್ಯಾಚ್ ಪಡೆಯುವುದರ ಮೇಲೆ ಹೆಚ್ಚು ಗಮನಹರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT