ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿವೀಸ್‌ ಸವಾಲು ಮೀರುವ ಛಲದಲ್ಲಿ ಭಾರತ

ವೆಸ್ಟ್ ಇಂಡೀಸ್‌ ಆತಿಥ್ಯದಲ್ಲಿ ಮಹಿಳೆಯರ ಟ್ವೆಂಟಿ–20 ವಿಶ್ವಕಪ್ ಕ್ರಿಕೆಟ್ ಇಂದಿನಿಂದ
Last Updated 8 ನವೆಂಬರ್ 2018, 20:27 IST
ಅಕ್ಷರ ಗಾತ್ರ

ಪ್ರಾವಿಡೆನ್ಸ್, ಗಯಾನಾ: ಕೆರಿಬಿಯನ್ ದ್ವೀಪಗಳ ನಾಡಿನಲ್ಲಿ ಈಗ ಚುಟುಕು ಕ್ರಿಕೆಟ್‌ನ ಸಂಭ್ರಮ ಗರಿಗೆದರಿದೆ. ಮಹಿಳೆಯರ ಟ್ವೆಂಟಿ–20 ವಿಶ್ವಕಪ್ ಟೂರ್ನಿಯು ಶುಕ್ರವಾರ ಆರಂಭವಾಗಲಿದೆ.

ಪ್ರಶಸ್ತಿಯ ಕನಸು ನನಸಾಗಿಸಿಕೊಳ್ಳುವ ಛಲದಲ್ಲಿರುವ ಭಾರತ ತಂಡವು ಹರ್ಮನ್‌ಪ್ರೀತ್ ಕೌರ್ ನಾಯಕತ್ವದಲ್ಲಿ ಕಣಕ್ಕಿಳಿಯಲಿದೆ. ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.

ಏಕದಿನ ಮಾದರಿಯ ಕ್ರಿಕೆಟ್‌ನಲ್ಲಿ ಉತ್ತಮ ಸಾಧನೆ ಮಾಡಿರುವ ಭಾರತ ತಂಡವು ಚುಟುಕು ಕ್ರಿಕೆಟ್‌ನಲ್ಲಿ ಇದು ವರೆಗೂ ಮಹತ್ವದ ಸಾಧನೆ ಮಾಡಿಲ್ಲ. ಭಾರತ ತಂಡವು ಒಟ್ಟು ಐದು ಟ್ವೆಂಟಿ–20 ವಿಶ್ವಕಪ್ ಟೂರ್ನಿಗಳಲ್ಲಿ ಆಡಿದೆ. ಆದರೆ ಒಂದು ಬಾರಿಯೂ ಪ್ರಶಸ್ತಿ ಗೆದ್ದಿಲ್ಲ. 2009 ಮತ್ತು 2010ರಲ್ಲಿ ತಂಡವು ಸೆಮಿಫೈನಲ್‌ ತಲುಪಿದ್ದು ಇಲ್ಲಿಯವರೆಗಿನ ಶ್ರೇಷ್ಠ ಸಾಧನೆ.

ವಿಶ್ವಕಪ್ ಟೂರ್ನಿಗೆ ಹೋಗುವ ಮುನ್ನ ನಡೆದ ಸಿದ್ಧತೆಯಲ್ಲಿ ಭಾರತವು ಭರವಸೆ ಮೂಡಿಸುವಂತಹ ಆಟ ವಾಡಿತ್ತು. ಆಸ್ಟ್ರೇಲಿಯಾ ‘ಎ’ ತಂಡದ ಎದುರು ಭಾರತದಲ್ಲಿ ನಡೆದಿದ್ದ ಸರಣಿಯಲ್ಲಿ ಭಾರತ ಗೆದ್ದಿತ್ತು. ಹೋದ ಜೂನ್‌ನಲ್ಲಿ ನಡೆದಿದ್ದ ಏಷ್ಯಾ ಕಪ್ ಟ್ವೆಂಟಿ –20 ಫೈನಲ್‌ನಲ್ಲಿ ಬಾಂಗ್ಲಾ ಎದುರು ಭಾರತ ಸೋತಿತ್ತು.

‘ಏಷ್ಯಾಕಪ್‌ನಲ್ಲಿ ಸೋಲಿನಿಂದ ಪಾಠ ಕಲಿತಿದ್ದೇವೆ. ಲೋಪಗಳನ್ನು ತಿದ್ದಿಕೊಂಡಿದ್ದೇವೆ. ಹೋದ ಮೂರು ತಿಂಗಳಲ್ಲಿ ಬಹಳಷ್ಟು ಪರಿಶ್ರಮದಿಂದ ಆಭ್ಯಾಸ ಮಾಡಿದ್ದೇವೆ. ಬೌಲರ್‌ಗಳು ಕೂಡ ಚೆನ್ನಾಗಿ ಆಡುತ್ತಿದ್ದಾರೆ. ಈ ಬಾರಿ ಫೈನಲ್ ಪ್ರವೇಶಿಸುತ್ತೇವೆ’ ಎಂದು ಭಾರತ ತಂಡದ ಬ್ಯಾಟ್ಸ್‌ವುಮನ್ ಸ್ಮೃತಿ ಮಂದಾನ ಹೇಳುತ್ತಾರೆ.

ಬಿಗ್‌ಬ್ಯಾಷ್ ಸೇರಿದಂತೆ ಕೆಲವು ಪ್ರತಿಷ್ಠಿತ ಲೀಗ್‌ಗಳಲ್ಲಿ ಮಿಂಚಿರುವ ಸ್ಮೃತಿ ಮೇಲೆ ತಂಡದ ಬ್ಯಾಟಿಂಗ್ ಅವಲಂಬಿತವಾಗಿದೆ.

ಅನುಭವಿ ಆಟಗಾರ್ತಿಮಿಥಾಲಿ ರಾಜ್, ನಾಯಕಿ ಹರ್ಮನ್‌ ಅವರು ಉತ್ತಮವಾಗಿ ಆಡಿದರೆ ತಂಡ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗುತ್ತದೆ. ಬುಧವಾರ ಇಂಗ್ಲೆಂಡ್ ವಿರುದ್ಧ ನಡೆದಿದ್ದ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡವು ಗೆದ್ದಿತ್ತು. ಅದರಲ್ಲಿ ಹರ್ಮನ್ ಅರ್ಧಶತಕ ಗಳಿಸಿದ್ದರು. ಆದ್ದರಿಂದ ಬಳಗದಲ್ಲಿ ಆತ್ಮವಿಶ್ವಾಸ ಹೆಚ್ಚಿದೆ. ಕನ್ನಡತಿ ವೇದಾ ಕೃಷ್ಣಮೂರ್ತಿ, ಬೌಲಿಂಗ್‌ನಲ್ಲಿ ಪೂನಮ್ ಯಾದವ್, ಅವರು ಕೂಡ ತಂಡಕ್ಕೆ ಉತ್ತಮ ಕಾಣಿಕೆ ನೀಡಬಲ್ಲರು. ಆದರೆ ಹಿರಿಯ ಬೌಲರ್‌ ಜೂಲನ್ ಗೋಸ್ವಾಮಿ ಅವರ ಅನುಪಸ್ಥಿತಿ ತಂಡವನ್ನು ಕಾಡುತ್ತಿದೆ. ಅವರು ಈಚೆಗೆ ನಿವೃತ್ತಿ ಘೋಷಿಸಿದ್ದರು.

ನ್ಯೂಜಿಲೆಂಡ್ ಬಳಗದಲ್ಲಿ ಸೂಜಿ ಬೇಟ್ಸ್‌, ನಾಯಕಿ ಎಮಿ ಸೆಟ್ಟರ್‌ವೈಟ್ ಅವರನ್ನು ಕಟ್ಟಿಹಾಕಲು ಭಾರತದ ವನಿತೆಯರು ವಿಶೇಷ ಯೋಜನೆ ರೂಪಿಸಿದರೆ ಗೆಲುವು ಸುಲಭ. ಭಾರತವು ನ. 11ರಂದು ಪಾಕಿ ಸ್ತಾನ, 15ರಂದು ಐರ್ಲೆಂಡ್ ಮತ್ತು 17ರಂದು ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.

ತಂಡಗಳು ಇಂತಿವೆ: ಭಾರತ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ತಾನಿಯಾ ಭಾಟಿಯಾ (ವಿಕೆಟ್‌ಕೀಪರ್), ಏಕ್ತಾ ಬಿಷ್ಠ್, ದಯಾಳನ್ ಹೇಮಲತಾ, ಮಾನಸಿ ಜೋಶಿ, ವೇದಾ ಕೃಷ್ಣಮೂರ್ತಿ, ಸ್ಮೃತಿ ಮಂದಾನಾ, ಅನುಜಾ ಪಾಟೀಲ, ಮಿಥಾಲಿ ರಾಜ್, ಅರುಂಧತಿ ರೆಡ್ಡಿ, ಜಿಮಿಮಾ ರಾಡ್ರಿಗಸ್, ದೀಪ್ತಿ ಶರ್ಮಾ, ಪೂಜಾ ವಸ್ತ್ರಕರ್, ರಾಧಾ ಯಾದವ್, ಪೂನಮ್ ಯಾದವ್.

ನ್ಯೂಜಿಲೆಂಡ್: ಎಮಿ ಸೆಟ್ಟರ್‌ವೈಟ್ (ನಾಯಕಿ), ಸೂಜಿ ಬೇಟ್ಸ್‌, ಬೆರ್ನೈಡನ್ ಬೆಜೂಡೆನ್‌ಹಾಟ್ (ವಿಕೆಟ್‌ಕೀಪರ್), ಸೋಫಿ ಡಿವೈನ್, ಕೇಟ್ ಇಬ್ರಾಹಿಂ, ಮ್ಯಾಡಿ ಗ್ರೀನ್, ಹೋಲಿ ಹಡ್ಲೆಸ್ಟನ್, ಹ್ಯಾಲಿ ಜೆನ್ಸೆನ್, ಲೀಗ್ ಕಾಸ್ಪೆರೆಕ್, ಅಮೆಲಿಯಾ ಕೆರ್, ಕ್ಯಾಟಿ ಮಾರ್ಟಿನ್, ಅನ್ನಾ ಪೀಟರ್ಸನ್, ಹ್ಯಾರಿಯೆಟ್ ರೋವ್, ಲೀ ತಹುವಾ, ಜೆಸ್ ವಾಟ್ಕಿನ್.

ಪಂದ್ಯ ಆರಂಭ: ರಾತ್ರಿ 8.30 (ಭಾರತೀಯ ಕಾಲಮಾನ)
ನೇರ ಪ್ರಸಾರ: ಸ್ಟಾರ್ ನೆಟ್‌ವರ್ಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT