ದುಬೈ (ಪಿಟಿಐ): ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಟೆಸ್ಟ್ ಕ್ರಿಕೆಟ್ ಪಂದ್ಯ ಆಯೋಜನೆಗೊಂಡಿದ್ದ ಇಂದೋರಿನ ಹೋಳ್ಕರ್ ಮೈದಾನದ ಪಿಚ್‌ಗೆ ನೀಡಿದ್ದ ಕಳಪೆ ರೇಟಿಂಗ್ ಬದಲಾಯಿಸಿರುವ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ‘ಸಾಧಾರಣಕ್ಕಿಂತ ಕಡಿಮೆ’ ಎಂದು ಹೇಳಿದೆ.
ಕಳಪೆ ಎಂದು ರೇಟಿಂಗ್ ನೀಡಿದ್ದನ್ನು ಮರುಪರಿಶೀಲಿಸುವಂತೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಮನವಿ ಸಲ್ಲಿಸಿತ್ತು. ಅದಕ್ಕೆ ಸ್ಪಂದಿಸಿರುವ ಐಸಿಸಿ ಪರಿಷ್ಕರಣೆ ಮಾಡಿದೆ. ಪಂದ್ಯದ ರೆಫರಿ ಕ್ರಿಸ್ ಬ್ರಾಡ್ ಅವರು ನೀಡಿದ್ದ ವರದಿಯನ್ವಯ ಮೊದಲು ಕಳಪೆ ಎಂದು ರೇಟಿಂಗ್ ನೀಡಿ ಮೂರು ಅಂಕಗಳನ್ನು ಕಡಿತ ಮಾಡಲಾಗಿತ್ತು. ಈಗ ರೇಟಿಂಗ್ ಬದಲಾಗಿರುವುದರಿಂದ ಇಂದೋರ್ ಕ್ರೀಡಾಂಗಣಕ್ಕೆ ಒಂದು ಡಿಮೆರಿಟ್ ಪಾಯಿಂಟ್ ಆಗಲಿದೆ.
‘ಐಸಿಸಿ ಮೇಲ್ಮನವಿ ಸಮಿತಿಯು ಪಂದ್ಯಗಳ ವಿಡಿಯೊ ತುಣುಕುಗಳನ್ನು ಪರಿಶೀಲಿಸಿದ ನಂತರ ರೇಟಿಂಗ್ ನೀಡಿದೆ. ಈ ಸಮಿತಿಯಲ್ಲಿ ಐಸಿಸಿ ಮುಖ್ಯ ಕ್ರಿಕೆಟ್ ವ್ಯವಸ್ಥಾಪಕ ವಾಸೀಂ ಖಾನ್, ಪುರುಷರ ಕ್ರಿಕೆಟ್ ಸಮಿತಿ ಸದಸ್ಯ ರೋಜರ್ ಹಾರ್ಪರ್ ಇದ್ದಾರೆ’ ಎಂದು ಸೋಮವಾರ ಐಸಿಸಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಬಾರ್ಡರ್–ಗಾವಸ್ಕರ್ ಟ್ರೋಫಿ ಟೂರ್ನಿಯ ನಾಲ್ಕನೇ ಪಂದ್ಯ ನಡೆದಿದ್ದ ಅಹಮದಾಬಾದಿನ ನರೇಂದ್ರ ಮೋದಿ ಕ್ರೀಡಾಂಗಣದ ಪಿಚ್ ‘ಸಾಧಾರಣ’ ರೇಟಿಂಗ್ ಪಡೆದಿದೆ. ಈ ಪಂದ್ಯವು ಐದು ದಿನಗಳನ್ನು ಪೂರೈಸಿತ್ತು. ಉಭಯ ತಂಡಗಳೂ ತಲಾ ಒಂದು ಪೂರ್ಣ ಇನಿಂಗ್ಸ್ ಆಡಿದ್ದವು. ಆದರೆ ಪಂದ್ಯ ಡ್ರಾ ಆಗಿತ್ತು. ಭಾರತವು 2–1ರಿಂದ ಸರಣಿ ಜಯಿಸಿತ್ತು. ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ಗೆ ಅರ್ಹತೆ ಗಳಿಸಿತ್ತು.
ಇಂದೋರ್ ಕ್ರೀಡಾಂಗಣದಲ್ಲಿ ನಡೆದಿದ್ದ ಮೂರನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ತಂಡವು ಭಾರತವನ್ನು ಪರಾಭವಗೊಳಿಸಿತ್ತು. ಮೂರನೇ ದಿನವೇ ಪಂದ್ಯ ಅಂತ್ಯಗೊಂಡಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.