12 ರನ್‌ ಕೊಟ್ಟು 6 ವಿಕೆಟ್‌ ಪಡೆದ ಮುಂಬೈ ತಂಡದ ಜೋಸೆಫ್‌:ಮೊದಲ ಪಂದ್ಯದಲ್ಲೇ ದಾಖಲೆ

ಮಂಗಳವಾರ, ಏಪ್ರಿಲ್ 23, 2019
31 °C
ಸನ್‌ರೈಸರ್ಸ್‌ ವಿರುದ್ಧ ಮುಂಬೈಗೆ ಜಯ

12 ರನ್‌ ಕೊಟ್ಟು 6 ವಿಕೆಟ್‌ ಪಡೆದ ಮುಂಬೈ ತಂಡದ ಜೋಸೆಫ್‌:ಮೊದಲ ಪಂದ್ಯದಲ್ಲೇ ದಾಖಲೆ

Published:
Updated:

ಹೈದರಾಬಾದ್: ಐಪಿಎಲ್‌ 12ನೇ ಆವೃತ್ತಿಯ ಶನಿವಾರದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡವು ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ವಿರುದ್ಧ 40 ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಈ ಪಂದ್ಯದಲ್ಲಿ ಮುಂಬೈ ಪರ ಜಾದು ಮಾಡಿದ ಬೌಲರ್‌ ಅಲ್ಜಾರಿ ಜೋಸೆಫ್‌ ಅವರು ಕೇವಲ 12ರನ್‌ಗಳಿಗೆ ಹೈದರಾಬಾದ್‌ ತಂಡದ ಪ್ರಮುಖ 6 ವಿಕೆಟ್‌ ಕಬಳಿಸಿ ಹೊಸ ದಾಖಲೆ ನಿರ್ಮಿಸಿದರು. 

ಹೈದರಾಬಾದ್‌ನ ರಾಜೀವ್‌ ಗಾಂಧಿ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ಸನ್‌ರೈಸರ್ಸ್‌ ಹೈದರಾಬಾದ್‌ ಮತ್ತು ಮುಂಬೈ ಇಂಡಿಯನ್ಸ್‌ ನಡುವೆ ನಡೆದ ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್‌ ಮಾಡಿದ್ದ ಮುಂಬೈ ಇಂಡಿಯನ್ಸ್‌ ತಂಡ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟದೊಂದಿಗೆ 137ರನ್‌ಗಳ ಸಾಧಾರಣ ಮೊತ್ತದ ಗುರಿಯನ್ನಷ್ಟೇ ನೀಡಿತ್ತು. ಇದನ್ನು ಬೆನ್ನುಹತ್ತಿದ ಸನ್‌ರೈಸರ್ಸ್‌ ತಂಡ 17.4 ಓವರ್‌ಗಳಲ್ಲಿ 96ರನ್‌ ಗಳಿಸಿ ಇನ್ನೂ 40 ರನ್‌ಗಳು ಬಾಕಿ ಇರುವಾಗಲೇ ಮುಂಬೈ ಇಂಡಿಯನ್ಸ್‌ಗೆ ಶರಣಾಯಿತು.

ಸಾಧಾರಣ ಮೊತ್ತದ ಗುರಿ ಇದ್ದಾಗ್ಯೂ ಮುಂಬೈ ತಂಡ ಹೈದರಾಬಾದ್‌ ತಂಡವನ್ನು ಗುರಿತಲುಪದಂತೆ ಸಮರ್ಥವಾಗಿ ಕಟ್ಟಿಹಾಕಿತು. ಇದರಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದ್ದು ಐಪಿಎಲ್‌ಗೆ ಮುಂಬೈ ಇಂಡಿಯನ್ಸ್‌ ತಂಡದ ಪರ ನಿನ್ನೆಯ ಪಂದ್ಯದಲ್ಲಷ್ಟೇ  ಪದಾರ್ಪಣೆ ಮಾಡಿದ ವಿಂಡಿಸ್‌ನ ಬೌಲರ್‌ 22 ವರ್ಷದ ಅಲ್ಜಾರಿ ಜೋಸೆಫ್‌. ಮುಂಬೈ ಪರ 3.4 ಓವರ್‌ಗಳಲ್ಲಿ ಕೇವಲ 12ರನ್‌ ನೀಡಿ ಪ್ರಮುಖ 6 ವಿಕಟ್‌ ಕಿತ್ತ ಅಲ್ಜಾರಿ ಜೋಸೆಫ್‌ ಮಿಂಚಿದರು. ಈ ಮೂಲಕ ಜೋಸೆಫ್‌ ಐಪಿಎಲ್‌ನಲ್ಲಿ ಹೊಸ ದಾಖಲೆಯನ್ನೂ ಬರೆದರು. 

ರಾಜಸ್ಥಾನ ರಾಯಲ್ಸ್‌ ತಂಡದ ಸುಹೇಲ್‌ ತನ್ವೀರ್‌ ಅವರು 2008ರ ಪಂದ್ಯದಲ್ಲಿ 14ರನ್‌ಗಳಿಗೆ 6 ವಿಕಟ್‌ ಪಡೆದಿದ್ದೇ ಈ ವರೆಗಿನ ಅತ್ಯುನ್ನತ ದಾಖಲೆಯಾಗಿತ್ತು. ಆದರೆ, ಶನಿವಾರ ಅಲ್ಜಾರಿ ಜೋಸೆಫ್‌ ಅವರು ಆ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. 

ತಮ್ಮ ಪದಾರ್ಪಣೆ ಪಂದ್ಯದಲ್ಲೇ ದಾಖಲೆ ಬರೆದ, ಮುಂಬೈ ಇಂಡಿಯನ್ಸ್‌ ತಂಡದ ಗೆಲುವಿಗೆ ಕಾರಣರಾದ ಅಲ್ಜಾರಿ ಜೋಸೆಫ್‌ ಅವರು ಶನಿವಾರದ ಪಂದ್ಯದಲ್ಲಿ ಪಂದ್ಯ ಪುರುಷೋತ್ತಮರೆನಿಸಿಕೊಂಡರು. 

ಇದರ ಜತೆಗೇ ಕ್ರಿಕೆಟ್‌ ರಂಗವೂ ಕೂಡ ಅಲ್ಜಾರಿ ಜೋಸೆಫ್‌ ಸಾಧನೆಯನ್ನು ಕೊಂಡಾಡಿದೆ. ಸಚಿನ್‌, ಹರ್ಷ ಬೋಗ್ಲೆ, ವಿಂಡಿಸ್‌ ತಂಡ,  ಆಕಾಶ್‌ ಅಂಬಾನಿ, ಮೊಹಮದ್‌ ಕೈಫ್‌, ಸಂಜಯ್‌ ಮಂಜ್ರೇಕರ್‌, ಕ್ರಿಕೆಟರ್‌ ಮೈಕೆಲ್‌ ವಾಗನ್‌ ಸೇರಿದಂತೆ ಹಲವರು ಟ್ವಿಟರ್‌ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

 

ಬರಹ ಇಷ್ಟವಾಯಿತೆ?

 • 12

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !