ಗುರುವಾರ , ಜೂನ್ 24, 2021
22 °C

IPL 2021: ಸರ್. ಜಡೇಜ vs ಆರ್‌ಸಿಬಿ: ಸಿಡಿದ ದಾಖಲೆಗಳು!

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಜೇಯ ಓಟಕ್ಕೆ ಭಾನುವಾರ ಎಡಗೈ ಆಲ್‌ರೌಂಡರ್ ರವೀಂದ್ರ ಜಡೇಜ ತಡೆಯೊಡ್ಡಿದರು. ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದ ಒಂದೇ ಓವರ್‌ನಲ್ಲಿ ಐದು ಸಿಕ್ಸರ್‌ಗಳನ್ನು ಸಿಡಿಸಿದ ಜಡೇಜ, ಬೌಲಿಂಗ್‌ನಲ್ಲಿಯೂ ಮಿಂಚಿದರು.

ಇದರಿಂದಾಗಿ ವಿರಾಟ್ ಕೊಹ್ಲಿ ಬಳಗವು ಈ ಟೂರ್ನಿಯಲ್ಲಿ ಮೊದಲ ಬಾರಿಗೆ ಸೋಲಿನ ಕಹಿಯುಂಡಿತು. ಇಲ್ಲಿಯವರೆಗೆ ಆಡಿದ್ದ ನಾಲ್ಕು ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿದ್ದ ತಂಡ ಇಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎದುರು 69 ರನ್‌ಗಳಿಂದ ಸೋತಿತು. ಚೆನ್ನೈ ತಂಡವು ನಾಲ್ಕನೇ ಪಂದ್ಯ ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

ಪ್ರಸ್ತುತ ಪಂದ್ಯಗಳ ಅನೇಕ ದಾಖಲೆಗಳು ಸೃಷ್ಟಿಯಾಗಿವೆ. ಈ ಕುರಿತು ಸಮಗ್ರ ಮಾಹಿತಿಯನ್ನು ಇಲ್ಲಿ ಕೊಡಲಾಗಿದೆ.


ರವೀಂದ್ರ ಜಡೇಜ 

37 ರನ್ ಬಿಟ್ಟುಕೊಟ್ಟ ಹರ್ಷಲ್ ಪಟೇಲ್...
ಓವರ್‌ವೊಂದರಲ್ಲಿ 37 ರನ್ ಬಿಟ್ಟುಕೊಟ್ಟಿರುವ ಆರ್‌ಸಿಬಿ ವೇಗದ ಬೌಲರ್ ಹರ್ಷಲ್ ಪಟೇಲ್ ಸಾಕಷ್ಟು ದುಬಾರಿನಿಸಿದರು. ಈ ಮೂಲಕ ಐಪಿಎಲ್‌ನಲ್ಲಿ ಓವರ್‌ವೊಂದರಲ್ಲಿ ಅತಿ ಹೆಚ್ಚು ರನ್ ಬಿಟ್ಟುಕೊಟ್ಟಿರುವ ಬೌಲರ್‌ಗಳ ಸಾಲಿನಲ್ಲಿ ಪಿ. ಪರಮೇಶ್ವರನ್ ದಾಖಲೆಯನ್ನು ಸರಿಗ್ಟಟುವ ಮೂಲಕ ಅಪಖ್ಯಾತಿಗೊಳಗಾಗಿದ್ದಾರೆ.

'ಪರ್ಪಲ್ ಕ್ಯಾಪ್' ಒಡೆಯ...
ಹಾಗಿದ್ದರೂ ಪಂದ್ಯದಲ್ಲಿ ಮೂರು ವಿಕೆಟ್ ಸೇರಿದಂತೆ ಇದುವರೆಗೆ ಒಟ್ಟು 15 ವಿಕೆಟ್ ಕಬಳಿಸಿರುವ ಹರ್ಷಲ್ ಪಟೇಲ್, ಐಪಿಎಲ್ 14ನೇ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಸಾಲಿನಲ್ಲಿ ಅಗ್ರಸ್ಥಾನ ಕಾಪಾಡಿಕೊಂಡಿದ್ದು, 'ಪರ್ಪಲ್ ಕ್ಯಾಪ್' ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ.

36 ರನ್ ಚಚ್ಚಿದ ಜಡೇಜ...
ಐಪಿಎಲ್‌ನಲ್ಲಿ ಓವರ್‌ವೊಂದರಲ್ಲಿ 36 ರನ್ ಚಚ್ಚಿರುವ ರವೀಂದ್ರ ಜಡೇಜ, ವೆಸ್ಟ್‌ಇಂಡೀಸ್‌ನ ಮಾಜಿ ದೈತ್ಯ ಕ್ರಿಸ್ ಗೇಲ್ ದಾಖಲೆಯನ್ನು ಸರಿಗಟ್ಟಿದ್ದಾರೆ. 2011ರಲ್ಲಿ ಆರ್‌ಸಿಬಿಯಲ್ಲಿದ್ದ ಕ್ರಿಸ್ ಗೇಲ್ ಒಂದೇ ಓವರ್‌ನಲ್ಲಿ ಹೊಡೆದಿದ್ದ 36 ರನ್‌ಗಳ ದಾಖಲೆಯನ್ನು ಜಡೇಜ ಸರಿಗಟ್ಟಿದರು.

6,6,6+Nb,6,2,6,4
ಹರ್ಷಲ್ ಪಟೇಲ್ ಹಾಕಿದ ಕೊನೆಯ ಓವರ್‌‌ನಲ್ಲಿ ಜಡೇಜ ಐದು ಸಿಕ್ಸರ್‌ ಮತ್ತು ಒಂದು ಬೌಂಡರಿ ಸಹಿತ 37 ರನ್‌ಗಳನ್ನು (ನೋ ಬಾಲ್ ಸೇರಿದಂತೆ) ಸೂರೆ ಮಾಡಿದರು. ಈ ಓವರ್‌ನಲ್ಲಿ ಒಂದು ನೋಬಾಲ್‌ನಿಂದ ಸಿಕ್ಕ ಫ್ರೀ ಹಿಟ್‌ನಲ್ಲಿಯೂ ಜಡೇಜ ಸಿಕ್ಸರ್ ಬಾರಿಸಿದರು. ಅಲ್ಲದೆ ಸತತ ನಾಲ್ಕು ಸಿಕ್ಸರ್‌ಗಳು ಸೇರಿದ್ದವು. ಅವರಿಗೆ ಈ ಓವರ್‌ನಲ್ಲಿಯೂ ಒಂದು ಜೀವದಾನ ಲಭಿಸಿತು.

ಐದು ಸಿಕ್ಸರ್ ದಾಖಲೆ...
ಐಪಿಎಲ್‌ನಲ್ಲಿ ಓವರ್‌ವೊಂದರಲ್ಲಿ ಐದು ಸಿಕ್ಸರ್ ಸಿಡಿಸಿದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ಜಡೇಜ ಭಾಜನರಾಗಿದ್ದಾರೆ. ಈ ಮೂಲಕ ಕ್ರಿಸ್ ಗೇಲ್ ಹಾಗೂ ರಾಹುಲ್ ತೆವಾಟಿಯಾ ಸಾಧನೆಯನ್ನು ಸರಿಗಟ್ಟಿದ್ದಾರೆ.

ಫಿಫ್ಟಿ ಹಾಗೂ 3 ವಿಕೆಟ್ ಸಾಧನೆ...
ಐಪಿಎಲ್ ಪಂದ್ಯವೊಂದರಲ್ಲಿ ಅರ್ಧಶತಕ ಹಾಗೂ ಮೂರು ವಿಕೆಟ್ ಪಡೆದ ಚೆನ್ನೈನ ಮೊದಲ ಹಾಗೂ ಒಟ್ಟಾರೆಯಾಗಿ ಐಪಿಎಲ್‌ನ 10ನೇ ಆಟಗಾರನೆಂಬ ಹಿರಿಮೆಗೆ ಜಡೇಜ ಪಾತ್ರವಾಗಿದ್ದಾರೆ.

25 ಎಸೆತಗಳಲ್ಲಿ ಅರ್ಧಶತಕ...
ಇದೇ ಪಂದ್ಯದಲ್ಲಿ ರವೀಂದ್ರ ಜಡೇಜ ಕೇವಲ 25 ಎಸೆತಗಳಲ್ಲಿ ಅರ್ಧಶತಕ ಸಾಧನೆ ಮಾಡಿದರು. 

ರೈನಾ 200 ಸಿಕ್ಸರ್‌ಗಳ ಸರದಾರ...
ಐಪಿಎಲ್‌ನಲ್ಲಿ 200 ಸಿಕ್ಸರ್‌ಗಳನ್ನು ಸಿಡಿಸಿದ ಏಳನೇ ಬ್ಯಾಟ್ಸ್‌ಮನ್ ಎಂಬ ಗೌರವಕ್ಕೆ ಸುರೇಶ್ ರೈನಾ ಅರ್ಹರಾಗಿದ್ದಾರೆ.

ಶಾರ್ದೂಲ್ ವಿಕೆಟ್‌ಗಳ ಫಿಫ್ಟಿ ಸಾಧನೆ...
ಇದೇ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್, ಐಪಿಎಲ್‌ನಲ್ಲಿ 50 ವಿಕೆಟ್‌ಗಳ ಮೈಲಿಗಲ್ಲು ತಲುಪಿದ್ದಾರೆ.

ಸಿಎಸ್‌ಕೆ ಸೆಕೆಂಡ್ ಬೆಸ್ಟ್ ವಿನ್...
ಇದು ಆರ್‌ಸಿಬಿ ವಿರುದ್ಧ ಚೆನ್ನೈ ದಾಖಲಿಸಿದ ಎರಡನೇ ಅತಿ ದೊಡ್ಡ (ರನ್ ಅಂತರದಲ್ಲಿ) ಗೆಲುವಾಗಿದೆ. ಈ ಹಿಂದೆ 2009ರಲ್ಲಿ 92 ರನ್ ಅಂತರದ ಗೆಲುವು ದಾಖಲಿಸಿತ್ತು.

ಇವನ್ನೂ ಓದಿ...

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು