ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2021: ಆರ್‌ಸಿಬಿಗೆ ಮೈಕ್ ಹೆಸನ್‌ ಕೋಚ್‌

Last Updated 21 ಆಗಸ್ಟ್ 2021, 20:30 IST
ಅಕ್ಷರ ಗಾತ್ರ

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ಆಡುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಕೋಚ್, ಆಸ್ಟ್ರೇಲಿಯಾದ ಸೈಮನ್ ಕ್ಯಾಟಿಚ್ ತಂಡವನ್ನು ತೊರೆದಿದ್ದು 14ನೇ ಆವೃತ್ತಿಯ ಎರಡನೇ ಹಂತದಲ್ಲಿಮೈಕ್ ಹೆಸನ್ ಕೋಚ್ ಆಗಿ ಕಾರ್ಯನಿರ್ವಹಿಸುವರು.

‌ಬದಲಾವಣೆಗಳನ್ನು ಶನಿವಾರ ಪ್ರಕಟಣೆಯ ಮೂಲಕ ತಿಳಿಸಿರುವ ತಂಡದ ಆಡಳಿತ ಮೂವರು ಆಟಗಾರರನ್ನು ಕೈಬಿಟ್ಟು ಮೂವರನ್ನು ಸೇರ್ಪಡೆಗೊಳಿಸಲಾಗಿದೆ ಎಂದು ತಿಳಿಸಿದೆ. ಶ್ರೀಲಂಕಾದ ಲೆಗ್ ಸ್ಪಿನ್ನರ್‌ ವಾಣಿಂದು ಹಸರಂಗ, ಮಧ್ಯಮ ವೇಗಿ ದುಷ್ಮಂತ ಚಮೀರ ಮತ್ತು ಆಸ್ಟ್ರೇಲಿಯಾದ ಆಲ್‌ರೌಂಡರ್ ಟಿಮ್ ಡೇವಿಡ್ ಅವರನ್ನು ತಂಡಕ್ಕೆ ಕರೆಸಿಕೊಳ್ಳಲಾಗಿದೆ.

ಇವರು ಕ್ರಮವಾಗಿ ಆಸ್ಟ್ರೇಲಿಯಾದ ಆ್ಯಡಂ ಜಂಪಾ, ಆಸ್ಟ್ರೇಲಿಯಾದ ಡ್ಯಾನಿ ಯಲ್ ಸ್ಯಾಮ್ಸ್‌ ಮತ್ತು ನ್ಯೂಜಿಲೆಂಡ್‌ನ ಫಿನ್ ಅಲೆನ್ ಅವರ ಬದಲಿಗೆ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಭಾರತದ ಆಟಗಾರರು ಮತ್ತು ನೆರವು ಸಿಬ್ಬಂದಿ ಶನಿವಾರದಿಂದ ಏಳು ದಿನ ಬೆಂಗಳೂರಿನಲ್ಲಿ ಕ್ವಾರಂಟೈನ್‌ಗೆ ಒಳಗಾಗಲಿದ್ದಾರೆ. ಈ ಅವಧಿಯಲ್ಲಿ ಮೂರು ದಿನ ಕೋವಿಡ್ ಪರೀಕ್ಷೆ ನಡೆಯಲಿದೆ. 29ರಂದು ವಿಶೇಷ ವಿಮಾನದಲ್ಲಿ ಯುಎಇಗೆ ತೆರಳಲಿದ್ದಾರೆ. ವಿದೇಶಿ ಆಟಗಾರರು ದುಬೈನಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ. ಅಲ್ಲಿ ಎಲ್ಲರೂ ಆರು ದಿನಗಳ ಕ್ವಾರಂಟೈನ್‌ಗೆ ಒಳಗಾಗುವರು.

ಈ ಬಾರಿ ಐಪಿಎಲ್‌ನ ಮೊದಲ ಪಂದ್ಯದಲ್ಲಿ ಆರ್‌ಸಿಬಿ ತಂಡ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಸೆಣಸಲಿದೆ. ಈ ಪಂದ್ಯ ಅಬುಧಾಬಿಯ ಶೇಕ್ ಜಯೇದ್‌ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 20ರಂದು ನಡೆಯಲಿದೆ.

ಭಾರತದ ವಿರುದ್ಧ ಮಿಂಚಿದ್ದ ವಾಣಿಂದು:
ಶಿಖರ್ ಧವನ್ ನೇತೃತ್ವದಲ್ಲಿ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಭಾರತ ತಂಡದ ಎದುರಿನ ಟಿ20 ಸರಣಿಯಲ್ಲಿ ವಾಣಿಂದು ಹಸರಂಗ ಅಮೋಘ ಆಟ ಆಡಿದ್ದರು. ಟಿ20 ಕ್ರಿಕೆಟ್‌ನ ಬೌಲರ್‌ಗಳ ರ‍್ಯಾಂಕಿಂಗ್‌ನಲ್ಲಿ ಅವರು ಎರಡನೇ ಸ್ಥಾನದಲ್ಲಿದ್ದಾರೆ. ಟಿಮ್ ಡೇವಿಡ್ ಅವರು ಬಿಗ್‌ ಬ್ಯಾಷ್ ಟೂರ್ನಿಯಲ್ಲಿ ಮಿಂಚಿದ್ದಾರೆ.

ಸಿಂಗಪುರದ ಮೊದಲ ಕ್ರಿಕೆಟಿಗ

ಟಿಮ್ ಡೇವಿಡ್ ಅವರು ಐಪಿಎಲ್‌ನಲ್ಲಿ ಆಡಲಿರುವ ಸಿಂಗಪುರದ ಮೊದಲ ಆಟಗಾರ ಎನಿಸಲಿದ್ದಾರೆ. ಪಾಲಕರು ಆಸ್ಟ್ರೇಲಿಯಾಗೆ ವಲಸೆ ಹೋದ ಕಾರಣ ಅಲ್ಲಿ ಬೆಳೆದ ಅವರು ಈಗ ಸಿಂಗಪುರ ತಂಡದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ ಆಡುತ್ತಿದ್ದಾರೆ. ರಾಷ್ಟ್ರೀಯ ತಂಡದಲ್ಲಿ 14 ಪಂದ್ಯಗಳನ್ನು ಆಡಿದ್ದು 558 ರನ್ ಗಳಿಸಿದ್ದಾರೆ.

ಒಟ್ಟಾರೆ 49 ಟಿ20 ಪಂದ್ಯಗಳನ್ನು ಆಡಿದ್ದು ಬಿಬಿಎಲ್‌ ಮತ್ತು ಪಿಎಸ್‌ಎಲ್‌ನಲ್ಲಿ ಒಟ್ಟು1171 ರನ್ ಕಲೆ ಹಾಕಿದ್ದಾರೆ. ಬಿಬಿಎಲ್‌ನಲ್ಲಿ ಹಾಬರ್ಟ್ ಹರಿಕೇನ್ಸ್‌ ಮತ್ತು ಪರ್ತ್‌ ಸ್ಕಾರ್ಚರ್ಸ್‌ ಪರ ಆಡಿರುವ ಅವರು ರಾಯಲ್ ಲಂಡನ್ ಕಪ್‌ ಟೂರ್ನಿಯಲ್ಲಿ ಸರೆ ಪರವಾಗಿ ಲಿಸ್ಟ್‌ ‘ಎ’ ಪಂದ್ಯಗಳನ್ನು ಆಡಿದ್ದು ಎರಡು ಶತಕ ಸಿಡಿಸಿದ್ದಾರೆ. ವಾರ್ವಿಕ್‌ಶೈರ್ ಎದುರು ಗರಿಷ್ಠ 140 ರನ್ ಗಳಿಸಿದ್ದಾರೆ.

ಟಿಮ್ ಅವರ ತಂದೆ ರಾಡ್‌ ಡೇವಿಡ್‌ ಕೂಡ ಸಿಂಗಪುರ ತಂಡದಲ್ಲಿ ಆಡಿದ್ದರು. ಸಿಂಗಪುರದಲ್ಲಿ ಜನಿಸಿದ ಟಿಮ್ ಬಳಿ ಅಲ್ಲಿನ ಪಾಸ್‌ಪೋರ್ಟ್ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT