ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2022 GT vs MI: ಅಗ್ರ ಗುಜರಾತ್‌ಗೆ ಸೋಲಿನ ಆಘಾತ; ಮುಂಬೈಗೆ ರೋಚಕ ಜಯ

ಅಕ್ಷರ ಗಾತ್ರ

ಮುಂಬೈ: ಐಪಿಎಲ್ 2022 ಟೂರ್ನಿಯಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಗುಜರಾತ್ ಟೈಟನ್ಸ್ ವಿರುದ್ಧ ಐದು ರನ್ ಅಂತರದ ರೋಚಕ ಗೆಲುವು ದಾಖಲಿಸಿದೆ.

ಈ ಮೂಲಕ ಟೂರ್ನಿಯಲ್ಲಿ ಮುಂಬೈ ಸತತ ಎರಡನೇ ಗೆಲುವು ದಾಖಲಿಸಿದೆ. ಅತ್ತ ಗುಜರಾತ್ ಸತತ ಎರಡನೇ ಸೋಲಿಗೆ ಶರಣಾಗಿದೆ.

ಇದರೊಂದಿಗೆ ರಶೀದ್ ಖಾನ್ (24ಕ್ಕೆ 2 ವಿಕೆಟ್) ಮತ್ತು ವೃದ್ಧಿಮಾನ್ ಸಹಾ (55) ಹಾಗೂ ಶುಭಮನ್ ಗಿಲ್ (52) ಹೋರಾಟವು ವ್ಯರ್ಥವೆನಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ, ಆರು ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿತ್ತು. ಬಳಿಕ ಗುರಿ ಬೆನ್ನಟ್ಟಿದ ಗುಜರಾತ್, ಸಹಾ-ಗಿಲ್ ಶತಕದ ಜೊತೆಯಾಟದ ಹೊರತಾಗಿಯೂ ಐದು ವಿಕೆಟ್ ನಷ್ಟಕ್ಕೆ 172 ಗಳಿಸಲಷ್ಟೇ ಸಾಧ್ಯವಾಯಿತು.

10 ಪಂದ್ಯಗಳಲ್ಲಿ ಮುಂಬೈ ಎರಡನೇ ಗೆಲುವು ದಾಖಲಿಸಿದೆ. ಆದರೂ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಅತ್ತ ಹಾರ್ದಿಕ್ ಪಾಂಡ್ಯ ಬಳಗ 11 ಪಂದ್ಯಗಳಲ್ಲಿ ಮೂರನೇ ಸೋಲು ಅನುಭವಿಸಿದೆ. ಹಾಗಿದ್ದರೂ 16 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದೆ.

ಸವಾಲಿನ ಮೊತ್ತ ಬೆನ್ನಟ್ಟಿದ ಗುಜರಾತ್‌ಗೆ ವೃದ್ಧಿಮಾನ್ ಸಹಾ ಹಾಗೂ ಶುಭಮನ್ ಗಿಲ್ ಬಿರುಸಿನ ಆರಂಭವೊದಗಿಸಿದರು. ಆರಂಭದಲ್ಲಿ ಗಿಲ್ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರೆ ವೃದ್ಧಿಮಾನ್ ಬಿರುಸಿನ ಆಟವಾಡಿದರು.

ಸ್ವಲ್ಪ ಹೊತ್ತಲ್ಲೇ ಗಿಲ್ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದರು. ಇವರಿಬ್ಬರು ಮುಂಬೈ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು.

10 ಓವರ್‌ ಅಂತ್ಯಕ್ಕೆ ಗುಜರಾತ್ ವಿಕೆಟ್ ನಷ್ಟವಿಲ್ಲದೆ 95 ರನ್ ಗಳಿಸಿತ್ತು. ಅಂತಿಮ 60 ಎಸೆತಗಳಲ್ಲಿ ಗೆಲುವಿಗೆ 83 ರನ್ ಬೇಕಾಗಿತ್ತು.

ವೃದ್ಧಿಮಾನ್ 34 ಹಾಗೂ ಗಿಲ್ 33 ಎಸೆತಗಳಲ್ಲಿ ಅರ್ಧಶತಕ ಪೂರ್ಣಗೊಳಿಸಿದರು. ಆದರೆ 13ನೇ ಓವರ್‌ನಲ್ಲಿ ಗಿಲ್ ಹಾಗೂ ಸಹಾ ವಿಕೆಟ್‌ಗಳನ್ನು ಮುರುಗನ್ ಅಶ್ವಿನ್ ಕಬಳಿಸಿದರು. ಈ ಮೂಲಕ ಡಬಲ್ ಆಘಾತ ನೀಡಿದರು.

ಈ ಜೋಡಿ ಮೊದಲ ವಿಕೆಟ್‌ಗೆ 12.1 ಓವರ್‌ಗಳಲ್ಲಿ 106 ರನ್ ಒಟ್ಟು ಸೇರಿಸಿದರು. ಗಿಲ್ 36 ಎಸೆತಗಳಲ್ಲಿ 52 ಮತ್ತು ಸಹಾ 40 ಎಸೆತಗಳಲ್ಲಿ 55 ರನ್ ಗಳಿಸಿದರು. ಅವರಿಬ್ಬರು ತಲಾ ಆರು ಬೌಂಡರಿ ಹಾಗೂ ಎರಡು ಸಿಕ್ಸರ್ ಸಿಡಿಸಿದರು.

ಸಾಯಿ ಸುದರ್ಶನ್ 14 ರನ್‌ಗಳ ಕಾಣಿಕೆ ನೀಡಿದರು. ಆದರೆ 18ನೇ ಓವರ್‌ನಲ್ಲಿ ನಾಯಕ ಹಾರ್ದಿಕ್ ಪಾಂಡ್ಯ (24) ರನೌಟ್ ಆಗುವುದರೊಂದಿಗೆ ಗುಜರಾತ್ ಹಿನ್ನಡೆ ಅನುಭವಿಸಿತು.

ಅಂತಿಮ ಓವರ್‌ನಲ್ಲಿ ಗುಜರಾತ್ ಗೆಲುವಿಗೆ 9 ರನ್‌ಗಳ ಅಗತ್ಯವಿತ್ತು. ಚೆಂಡು ಡ್ಯಾನಿಯಲ್ ಸ್ಯಾಮ್ಸ್ ಕೈಯಲ್ಲಿತ್ತು. ಆದರೆ ಈ ಬಾರಿ ತಂಡವನ್ನು ಗೆಲುವಿನ ದಡ ಸೇರಿಸಲು ಡೇವಿಡ್ ಮಿಲ್ಲರ್ (19*) ಹಾಗೂ ರಾಹುಲ್ ತೆವಾಟಿಯಾಗೆ (3) ಸಾಧ್ಯವಾಗಲಿಲ್ಲ.

ಇದೇ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಆಡುತ್ತಿರುವ ಗುಜರಾತ್, ಟೂರ್ನಿಯಲ್ಲಿ ನಾಲ್ಕು ಪಂದ್ಯಗಳಲ್ಲಿ ಕೊನೆಯ ಓವರ್‌ನಲ್ಲಿ ಗೆಲುವು ದಾಖಲಿಸಿತ್ತು ಎಂಬುದು ಗಮನಾರ್ಹ.

ಆದರೆ ಈ ಬಾರಿ ಕೊನೆಯ ಎಸೆತದಲ್ಲಿ ಮಿಲ್ಲರ್ ಸಿಕ್ಸರ್ ಗಳಿಸಲು ವಿಫಲರಾಗುವುದರೊಂದಿಗೆ ಗುಜರಾತ್ ಸೋಲಿಗೆ ಶರಣಾಯಿತು. ಈ ಮೂಲಕ ಮುಂಬೈ ಐದು ರನ್ ಅಂತರದ ರೋಚಕ ಗೆಲುವು ದಾಖಲಿಸಿತು.

ಸ್ಯಾಮ್ಸ್ 3 ಓವರ್‌ಗಳಲ್ಲಿ 18 ರನ್ ಮಾತ್ರ ಬಿಟ್ಟುಕೊಟ್ಟು ಪರಿಣಾಮಕಾರಿ ಎನಿಸಿದರು. ಜಸ್‌ಪ್ರೀತ್ ಬೂಮ್ರಾ 48 ರನ್ ಬಿಟ್ಟುಕೊಟ್ಟು ದುಬಾರಿಯಾದರು.


ಮುಂಬೈ ಸವಾಲಿನ ಮೊತ್ತ...

ಈ ಮೊದಲು ನಾಯಕ ರೋಹಿತ್ ಶರ್ಮಾ (43), ಇಶಾನ್ ಕಿಶನ್ (45) ಹಾಗೂ ಟಿಮ್ ಡೇವಿಡ್ (44*) ಉಪಯುಕ್ತ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ ಆರು ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿತ್ತು.

ಮುಂಬೈ ತಂಡಕ್ಕೆ ನಾಯಕ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ಬಿರುಸಿನ ಆರಂಭವೊದಗಿಸಿದರು. ಕಿಶನ್ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರೆ ರೋಹಿತ್ ಆಕ್ರಮಣಕಾರಿ ಆಟವಾಡಿದರು. ಪವರ್ ಪ್ಲೇನಲ್ಲಿ 63 ರನ್ ಹರಿದು ಬಂತು.

ರೋಹಿತ್ ಹಾಗೂ ಇಶಾನ್ ಮೊದಲ ವಿಕೆಟ್‌ಗೆ 7.3 ಓವರ್‌ಗಳಲ್ಲಿ 74 ರನ್ ಗಳಿಸಿದರು. ರೋಹಿತ್ 28 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 43 ರನ್ ಗಳಿಸಿದರು. ಅತ್ತ ಇಶಾನ್ ಕಿಶನ್ 29 ಎಸೆತಗಳಲ್ಲಿ 45 ರನ್ (5 ಬೌಂಡರಿ, 1 ಸಿಕ್ಸರ್) ಗಳಿಸಿದರು.

ಆದರೆ ಈ ಜೋಡಿ ವಿಕೆಟ್ ಪತನದ ಬೆನ್ನಲ್ಲೇ ಮುಂಬೈ ಹಿನ್ನಡೆ ಅನುಭವಿಸಿತು. 119ಕ್ಕೆ ನಾಲ್ಕು ವಿಕೆಟ್ ಕಳೆದುಕೊಂಡಿತು. ಸೂರ್ಯಕುಮಾರ್ ಯಾದವ್ (13) ಹಾಗೂ ಕೀರನ್ ಪೊಲಾರ್ಡ್ (4) ಬೇಗನೇ ನಿರ್ಗಮಿಸಿದರು. ರೋಹಿತ್ ಹಾಗೂ ಪೊಲಾರ್ಡ್ ವಿಕೆಟ್ ಪಡೆದ ರಶೀದ್ ಖಾನ್ ಮೋಡಿ ಮಾಡಿದರು.

ತಿಲಕ್ ವರ್ಮಾ (21 ರನ್, 16 ಎಸೆತ) ಅವರು ಟಿಮ್ ಡೇವಿಡ್ ಜೊತೆ ಉಪಯುಕ್ತ ಜೊತೆಯಾಟದಲ್ಲಿ ಭಾಗಿಯಾದರೂ ರನೌಟ್ ಆಗುವ ಮೂಲಕ ನಿರಾಸೆ ಅನುಭವಿಸಿದರು.

ಅತ್ತ ಆಕ್ರಮಣಕಾರಿ ಆಟವಾಡಿದ ಡೇವಿಡ್, ಮುಂಬೈ 177 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು. 21 ಎಸೆತಗಳನ್ನು ಎದುರಿಸಿದ ಡೇವಿಡ್ ರನ್ (ಅಜೇಯ 44 ರನ್, 21 ಎಸೆತ, 2 ಬೌಂಡರಿ, 4 ಸಿಕ್ಸರ್) ಗಳಿಸಿ ಔಟಾಗದೆ ಉಳಿದರು.

ಗುಜರಾತ್ ಪರ ರಶೀದ್ ಎರಡು ವಿಕೆಟ್ ಕಬಳಿಸಿ ಮಿಂಚಿದರು.

ಟಾಸ್ ಗೆದ್ದ ಗುಜರಾತ್ ಫೀಲ್ಡಿಂಗ್...

ಈ ಮೊದಲುಟಾಸ್ ಗೆದ್ದ ಗುಜರಾತ್ ಟೈಟನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಫೀಲ್ಡಿಂಗ್ ಆಯ್ದುಕೊಂಡರು.

ಹನ್ನೊಂದರ ಬಳಗ:

ಅಂಕಪಟ್ಟಿಯಲ್ಲಿ ಮೊದಲ ಹಾಗೂ ಕೊನೆಯ ಸ್ಥಾನದಲ್ಲಿರುವ ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ.

ಅಗ್ರಸ್ಥಾನ ಕಾಯ್ದುಕೊಂಡಿರುವ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್, ಕಳೆದ ಪಂದ್ಯದಲ್ಲಿ ಸೋಲಿನ ಆಘಾತ ಎದುರಿಸಿತ್ತು. ಈಗ ಗೆಲುವಿನ ಲಯಕ್ಕೆ ಮರಳುವ ಇರಾದೆಯಲ್ಲಿದೆ.

ಐಪಿಎಲ್‌ನಲ್ಲಿ ಇದೇ ಮೊದಲ ಬಾರಿ ಆಡುತ್ತಿರುವ ಗುಜರಾತ್, ಈವರೆಗೆ 10 ಪಂದ್ಯಗಳಲ್ಲಿ ಎಂಟರಲ್ಲಿ ಗೆದ್ದು ಎರಡರಲ್ಲಿ ಸೋಲು ಅನುಭವಿಸಿದ್ದು, ಒಟ್ಟು 16 ಅಂಕ ಗಳಿಸಿದೆ.

ಅತ್ತ ಸತತ ಎಂಟು ಸೋಲುಗಳ ಬಳಿಕ ಮೊದಲ ಗೆಲುವು ದಾಖಲಿಸಿರುವ ಮುಂಬೈ, ಗುಜರಾತ್ ವಿರುದ್ಧವೂ ಗೆಲುವಿನ ಓಟ ಮುಂದುವರಿಸುವ ಗುರಿ ಹೊಂದಿದೆ.

ಐದು ಬಾರಿಯ ಚಾಂಪಿಯನ್ ರೋಹಿತ್ ಶರ್ಮಾ ನೇತೃತ್ವದ ಮುಂಬೈ, ಈ ಬಾರಿಯ ಐಪಿಎಲ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ್ದು, ಇದುವರೆಗೆ ಒಂಬತ್ತು ಪಂದ್ಯಗಳಲ್ಲಿ ಒಂದು ಗೆಲುವಿನೊಂದಿಗೆ ಎರಡು ಅಂಕ ಮಾತ್ರ ಗಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT