ಗುರುವಾರ , ಸೆಪ್ಟೆಂಬರ್ 23, 2021
25 °C
ಮುಂಬೈ ಇಂಡಿಯನ್ಸ್‌–ಸನ್‌ರೈಸರ್ಸ್‌ ತಂಡಗಳ ಮುಖಾಮುಖಿ ಇಂದು

ಕೇನ್ ಬಳಗಕ್ಕೆ ಮಹತ್ವದ ಪಂದ್ಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಐಪಿಎಲ್ ಟೂರ್ನಿಯ ಪ್ಲೇ ಆಫ್‌ ಪ್ರವೇಶಿಸುವ ಮೂರು ಮತ್ತು ನಾಲ್ಕನೇ ತಂಡಗಳ ಸ್ಥಾನಕ್ಕೆ ಈಗ ಭರ್ಜರಿ ಪೈಪೋಟಿ ಏರ್ಪಟ್ಟಿದೆ.

ಈ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿರುವ ಮುಂಬೈ ಇಂಡಿಯನ್ಸ್‌ ಮತ್ತು ಸನ್‌ರೈಸರ್ಸ್‌ ಹೈದರಾಬಾದ್ ತಂಡಗಳು ಗುರುವಾರ ವಾಂಖೆಡೆ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ.

ಚೆನ್ನೈ ಸೂಪರ್ ಕಿಂಗ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳು ಈಗಾಗಲೇ ಪ್ಲೇ ಆಫ್‌ಗೆ ಅರ್ಹತೆ ಪಡೆದುಕೊಂಡಿವೆ. ಸದ್ಯ ಮೊದಲ ಎರಡು ಸ್ಥಾನಗಳಲ್ಲಿವೆ. 12 ಪಂದ್ಯಗಳನ್ನಾಡಿರುವ ಮುಂಬೈ 14 ಪಾಯಿಂಟ್ಸ್‌ ಗಳಿಸಿದೆ. ಸನ್‌ರೈಸರ್ಸ್‌ 12 ಪಾಯಿಂಟ್ಸ್‌ ಗಳಿಸಿದೆ. ಇವೆರಡೂ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ. 

ಇಲ್ಲಿ ನಡೆಯುವ ಪಂದ್ಯದಲ್ಲಿ ಮುಂಬೈ ಗೆದ್ದರೆ ನಾಕೌಟ್ ಹಂತದ ಪ್ರವೇಶ ಖಚಿತವಾಗಲಿದೆ. ಆದರೆ ಸನ್‌ರೈಸರ್ಸ್‌ ಗೆದ್ದರೆ ರನ್‌ರೇಟ್ ಆಧಾರದಲ್ಲಿ ಮೂರನೇ ಸ್ಥಾನಕ್ಕೇರುವುದು. ಮುಂಬೈ ನಾಲ್ಕಕ್ಕೆ ಇಳಿಯುವ ಸಾಧ್ಯತೆ ಇದೆ.

ಆದರೆ ಈ ಲೆಕ್ಕಾಚಾರಕ್ಕೆ ಅವಕಾಶ ಕೊಡುವ ಮೂಡ್‌ನಲ್ಲಿ ಮುಂಬೈ ಇಲ್ಲ. ರೋಹಿತ್ ಶರ್ಮಾ, ಕ್ವಿಂಟನ್ ಡಿಕಾಕ್, ಹಾರ್ದಿಕ್ ಪಾಂಡ್, ಕೃಣಾಲ್ ಪಾಂಡ್ಯ ಮತ್ತು ಕೀರನ್ ಪೊಲಾರ್ಡ್‌ ಅವರು ಬ್ಯಾಟಿಂಗ್‌ನಲ್ಲಿ ಸ್ಥಿರವಾದ ಲಯ ಹೊಂದಿದ್ದಾರೆ. ಕೋಲ್ಕತ್ತ ತಂಡದ ಎದುರು ಹಾರ್ದಿಕ್ 34 ಎಸೆತಗಳಲ್ಲಿ 91 ರನ್‌ ಬಾರಿಸಿದ್ದರು. ಮಧ್ಯಮ ಕ್ರಮಾಂಕದಲ್ಲಿ ಅವರು ಎದುರಾಳಿ ಬೌಲರ್‌ಗಳ ಪಾಲಿಗೆ ಸಿಂಹಸ್ವಪ್ನವಾಗಿದ್ದಾರೆ. ಆದರೆ ಸನ್‌ರೈಸರ್ಸ್‌ ತಂಡದ  ‘ಮ್ಯಾಚ್ ವಿನ್ನಿಂಗ್’ ಬೌಲರ್‌ಗಳಾದ ಭುವನೇಶ್ವರ್ ಕುಮಾರ್, ವಿಜಯಶಂಕರ್, ಖಲೀಲ್ ಅಹಮದ್, ಸ್ಪಿನ್ನರ್ ರಶೀದ್ ಖಾನ್, ಮೊಹಮ್ಮದ್ ನಬಿ ಅವರನ್ನು ಹಾರ್ದಿಕ್ ಯಾವ ರೀತಿ ಎದುರಿಸುವರು ಎಂಬ ಕುತೂಹಲ ಗರಿಗೆದರಿದೆ.

ಡೇವಿಡ್ ವಾರ್ನರ್‌ ಆಸ್ಟ್ರೇಲಿಯಾಕ್ಕೆ ಮರಳಿರುವದರಿಂದ  ಸನ್‌ರೈಸರ್ಸ್‌ ತಂಡದ ಬ್ಯಾಟಿಂಗ್ ಸ್ವಲ್ಪ ಕಳೆಗುಂದಿದೆ. ಕೆಲವು ದಿನಗಳ ಹಿಂದೆ ಜಾನಿ ಬೆಸ್ಟೊ ಕೂಡ ತಮ್ಮ ತಾಯ್ನಾಡಿಗೆ ಮರಳಿದ್ದರು. ವಾರ್ನರ್ ಮತ್ತು ಜಾನಿ ಅವರು ಆರಂಭಿಕ ಬ್ಯಾಟ್ಸ್‌ಮನ್‌ಗಳಾಗಿ ತಂಡದ ಗೆಲುವಿಗೆ ಕಾರಣರಾಗಿದ್ದರು. ಆದರೆ ಇವರಿಬ್ಬರ ಅನುಪಸ್ಥಿತಿಯಲ್ಲಿ ತಂಡದ ಬ್ಯಾಟಿಂಗ್ ಹೊಣೆ ನಾಯಕ ಕೇನ್ ವಿಲಿಯಮ್ಸನ್, ಮನೀಷ್ ಪಾಂಡೆ, ಮಾರ್ಟಿಕ್ ಗಪ್ಟಿಲ್, ಯುಸೂಫ್ ಪಠಾಣ್, ವೃದ್ಧಿಮಾನ್ ಸಹಾ ಅವರ ಮೇಲೆ ಬಿದ್ದಿದೆ. ಸನ್‌ರೈಸರ್ಸ್‌ನ ಈ ದೌರ್ಬಲ್ಯವನ್ನು ಮುಂಬೈ ತಂಡವು ಬಳಸಿಕೊಳ್ಳುಲು ಪ್ರಯತ್ನಿಸುವುದು ಖಚಿತ. ಉತ್ತಮ ಲಯದಲ್ಲಿರುವ ಲಸಿತ್ ಮಾಲಿಂಗ, ಜಸ್‌ಪ್ರೀತ್ ಬೂಮ್ರಾ,  ಪಾಂಡ್ಯ ಸಹೋದರರು ಪರಿಣಾಮಕಾರಿಯಾಗಬಲ್ಲರು.

ಮೊದಲ ಸುತ್ತಿನಲ್ಲಿ ಸನ್‌ರೈಸರ್ಸ್‌ ಎದುರು ಗೆದ್ದಿದ್ದ ಮುಂಬೈ ತಂಡವು ತನ್ನ ತವರಿನ ಅಂಗಳದಲ್ಲಿಯೂ ಜಯಭೇರಿ ಬಾರಿಸುವ ವಿಶ್ವಾಸದಲ್ಲಿದೆ.

ತಂಡಗಳು: ಸನ್‌ರೈಸರ್ಸ್ ಹೈದರಾಬಾದ್: ಕೇನ್ ವಿಲಿಯಮ್ಸನ್ (ನಾಯಕ), ಬಾಸಿಲ್ ಥಂಪಿ, ಭುವನೇಶ್ವರ್ ಕುಮಾರ್, ದೀಪಕ್ ಹೂಡಾ, ಮನೀಷ್ ಪಾಂಡೆ, ಟಿ. ನಟರಾಜನ್, ರಿಕಿ ಭುಯ್, ಸಂದೀಪ್ ಶರ್ಮಾ, ಸಿದ್ಧಾರ್ಥ್ ಕೌಲ್, ಶ್ರೀವತ್ಸ ಗೋಸ್ವಾಮಿ, ಖಲೀಲ್ ಅಹಮದ್, ಯೂಸುಫ್ ಪಠಾಣ್, ಬಿಲ್ಲಿ ಸ್ಟಾನ್‌ಲೇಕ್, ರಶೀದ್ ಖಾನ್, ಮೊಹಮ್ಮದ್ ನಬಿ, ಶಕೀಬ್ ಅಲ್ ಹಸನ್, ವೃದ್ಧಿಮಾನ್ ಸಹಾ, ಮಾರ್ಟಿನ್ ಗಪ್ಟಿಲ್, ವಿಜಯಶಂಕರ್, ಅಭಿಷೇಕ್ ಶರ್ಮಾ, ಶಾಬಾಜ್ ನದೀಂ.

ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್‌ಕೀಪರ್), ಸೂರ್ಯಕುಮಾರ್ ಯಾದವ್, ಯುವರಾಜ್ ಸಿಂಗ್, ಕೀರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಕೃಣಾಲ್ ಪಾಂಡ್ಯ,  ಮಿಷೆಲ್ ಮೆಕ್ಲೆಂಗಾನ್, ಮಯಂಕ್ ಮಾರ್ಕಂಡೆ, ರಾಹುಲ್ ಚಾಹರ್, ಜಸ್‌ಪ್ರೀತ್ ಬೂಮ್ರಾ, ಅನ್ಮೋಲ್‌ಪ್ರೀತ್ ಸಿಂಗ್, ಸಿದ್ಧೇಶ್ ಲಾಡ್, ಅಂಕುಲ್ ರಾಹ್, ಎವಿನ್ ಲೂಯಿಸ್, ಪಂಕಜ್ ಜೈಸ್ವಾಲ್, ಬೆನ್ ಕಟಿಂಗ್, ಇಶಾನ್ ಕಿಶನ್, ಆದಿತ್ಯ ತಾರೆ, ರಸಿಕ್ ಸಲಾಂ, ಬರಿಂದರ್ ಸರನ್, ಜಯಂತ್ ಯಾದವ್, ಬೇರನ್ ಹೆನ್ರಿಕ್ಸ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು