ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೂಪರ್‌ ಹೀರೊ’ ಎಂದು ಕರೆದರೆ ತುಂಬಾ ಖುಷಿ: ಆ್ಯಂಡ್ರೆ ರಸೆಲ್‌

ಕೋಲ್ಕತ್ತ ನೈಟ್‌ರೈಡರ್ಸ್‌ ತಂಡದ ಆಲ್‌ರೌಂಡರ್‌ ಮನದ ಮಾತು
Last Updated 29 ಏಪ್ರಿಲ್ 2019, 15:51 IST
ಅಕ್ಷರ ಗಾತ್ರ

ಕೋಲ್ಕತ್ತ: ‘ಅಭಿಮಾನಿಗಳು ನನ್ನನ್ನು ‘ಸೂಪರ್‌ ಹೀರೊ’ ಎಂದು ಕರೆದರೆ ಅತೀವ ಖುಷಿಯಾಗುತ್ತದೆ’ ಎಂದು ಕೋಲ್ಕತ್ತ ನೈಟ್‌ರೈಡರ್ಸ್‌ ತಂಡದ ಆಲ್‌ರೌಂಡರ್‌ ಆ್ಯಂಡ್ರೆ ರಸೆಲ್‌ ಹೇಳಿದ್ದಾರೆ.

ಭಾನುವಾರ ಈಡನ್‌ ಗಾರ್ಡನ್ಸ್‌ ಅಂಗಳದಲ್ಲಿ ನಡೆದಿದ್ದ ಮುಂಬೈ ಇಂಡಿಯನ್ಸ್‌ ಎದುರಿನ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ನ ರಸೆಲ್‌, ಕೋಲ್ಕತ್ತ ನೈಟ್‌ರೈಡರ್ಸ್‌ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. 40 ಎಸೆತಗಳಲ್ಲಿ ಅಜೇಯ 80ರನ್‌ ಗಳಿಸಿ ‘ಪಂದ್ಯಶ್ರೇಷ್ಠ’ ಗೌರವಕ್ಕೆ ಪಾತ್ರರಾಗಿದ್ದರು.

ಪಂದ್ಯದ ನಂತರ ಮಾತನಾಡಿದ ರಸೆಲ್‌ ‘ಚೆಂಡನ್ನು ಬೌಂಡರಿ, ಸಿಕ್ಸರ್‌ಗೆ ಅಟ್ಟುವುದು ಅಷ್ಟು ಸುಲಭವಲ್ಲ. ಅದಕ್ಕಾಗಿ ಫಿಟ್‌ ಆಗಿದ್ದರಷ್ಟೇ ಸಾಲದು. ತೋಳುಗಳಲ್ಲಿ ಬಲವೂ ಇರಬೇಕು’ ಎಂದರು.

‘ಬೌಲರ್‌ಗಳು ಕೆಲವೊಮ್ಮೆ ನಿಧಾನಗತಿಯ ಎಸೆತಗಳನ್ನು ಹಾಕಿ ನಮ್ಮನ್ನು ತಬ್ಬಿಬ್ಬುಗೊಳಿಸಲು ಪ್ರಯತ್ನಿಸಬಹುದು. ಅವರ ತಂತ್ರವನ್ನು ಮೊದಲೇ ಅರಿತಿದ್ದರೆ ಆ ಎಸೆತಗಳನ್ನೂ ಸಿಕ್ಸರ್‌ಗೆ ಅಟ್ಟಬಹುದು. ಮುಂಬೈ ಇಂಡಿಯನ್ಸ್‌ ಎದುರಿನ ಪಂದ್ಯದಲ್ಲಿ ಜಸ್‌ಪ್ರೀತ್‌ ಬೂಮ್ರಾ ಹಾಕಿದ್ದ ಎಸೆತವನ್ನು ಕವರ್ಸ್‌ನತ್ತ ಸಿಕ್ಸರ್‌ ಬಾರಿಸಿದ್ದು ಇದಕ್ಕೊಂದು ನಿದರ್ಶನ’ ಎಂದು ನುಡಿದರು.

‘ಮುಂಬೈ ಎದುರು 200ಕ್ಕೂ ಹೆಚ್ಚು ರನ್‌ ಗಳಿಸುವ ಗುರಿ ಇಟ್ಟುಕೊಂಡಿದ್ದೆವು. ಯೋಜನೆಗೆ ಅನುಗುಣವಾಗಿ ಆಡಿದ್ದರಿಂದ 232ರನ್‌ ಪೇರಿಸಲು ಸಾಧ್ಯವಾಯಿತು. ಒಂದೊಮ್ಮೆ 200ಕ್ಕಿಂತಲೂ ಕಡಿಮೆ ರನ್‌ ಗಳಿಸಿದ್ದರೆ ಖಂಡಿತವಾಗಿಯೂ ಸೋಲು ಎದುರಾಗುತ್ತಿತ್ತು’ ಎಂದು ಹೇಳಿದರು.

ವಿಶ್ವಾಸವೇ ಯಶಸ್ಸಿನ ಗುಟ್ಟು: ‘ಪ್ರತಿ ಸಲವೂ ಆತ್ಮವಿಶ್ವಾಸದಿಂದಲೇ ಅಂಗಳಕ್ಕಿಳಿಯುತ್ತೇನೆ. ಎಲ್ಲಾ ಎಸೆತಗಳನ್ನೂ ವಿಶ್ವಾಸದಿಂದಲೇ ಎದುರಿಸುತ್ತೇನೆ. ದೊಡ್ಡ ಗುರಿ ಬೆನ್ನಟ್ಟುವಾಗ ಯೋಚಿಸಲು ಹೆಚ್ಚು ಸಮಯ ಇರುವುದಿಲ್ಲ. ಪ್ರತಿ ಎಸೆತವನ್ನೂ ಬೌಂಡರಿ, ಸಿಕ್ಸರ್‌ಗೆ ಅಟ್ಟಲೇಬೇಕಾಗುತ್ತದೆ. ಹೀಗಾಗಿಯೇ ಕೋಲ್ಕತ್ತ ಎದುರಿನ ಪಂದ್ಯದಲ್ಲಿ ನಾನು ದೊಡ್ಡ ಹೊಡೆತಗಳನ್ನು ಬಾರಿಸಲು ಹೆಚ್ಚು ಪ್ರಯತ್ನಿಸಿದೆ’ ಎಂದು ಮುಂಬೈ ಇಂಡಿಯನ್ಸ್‌ ತಂಡದ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಹೇಳಿದರು.

ಹಾರ್ದಿಕ್‌ ಅವರು ಭಾನುವಾರದ ಹೋರಾಟದಲ್ಲಿ 34 ಎಸೆತಗಳಲ್ಲಿ 91ರನ್‌ ಬಾರಿಸಿದ್ದರು. ಒಂಬತ್ತು ಸಿಕ್ಸರ್‌ ಮತ್ತು ಆರು ಬೌಂಡರಿ ಸಿಡಿಸಿ ಗಮನ ಸೆಳೆದಿದ್ದರು.

‘ನಾನು ಬ್ಯಾಟಿಂಗ್‌ಗೆ ಹೋದಾಗ ಇನ್ನೊಂದು ಬದಿಯಲ್ಲಿ ಕೀರನ್‌ ಪೊಲಾರ್ಡ್‌ ಇದ್ದರು. ಅವರು ಕೂಡಾ ದೊಡ್ಡ ಹೊಡೆತಗಳನ್ನು ಬಾರಿಸಲು ಪ್ರಯತ್ನಿಸಿದರು. ಆದರೆ ಅದೃಷ್ಟ ನಮ್ಮ ಕೈ ಹಿಡಿಯಲಿಲ್ಲ. ಅವರು ಬೇಗ ಔಟಾದರು. ಏಕಾಂಗಿಯಾಗಿ ತಂಡವನ್ನು ಗುರಿ ಮುಟ್ಟಿಸುವುದು ನನ್ನಿಂದ ಕಷ್ಟವಾಯಿತು’ ಎಂದರು.

ಹಾರ್ದಿಕ್‌ಗೆ ಯಾರೂ ಬೆಂಬಲ ನೀಡಲಿಲ್ಲ: ‘ಹಾರ್ದಿಕ್‌ ಪಾಂಡ್ಯ ಅವರ ಆಟ ಪದಗಳಿಗೆ ನಿಲುಕದ್ದು. ಅವರು ಕ್ರೀಸ್‌ನಲ್ಲಿದ್ದಷ್ಟು ಸಮಯ ಕೆಕೆಆರ್‌ ಪಾಳಯದಲ್ಲಿ ಆತಂಕ ಮನೆಮಾಡಿತ್ತು. ಅವರಿಗೆ ಇತರ ಆಟಗಾರರಿಂದ ಉತ್ತಮ ಬೆಂಬಲ ಸಿಗಲಿಲ್ಲ. ಹೀಗಾಗಿ ಸೋಲು ಎದುರಾಯಿತು’ ಎಂದು ಮುಂಬೈ ಇಂಡಿಯನ್ಸ್‌ ತಂಡದ ಆಟಗಾರ ಕ್ವಿಂಟನ್‌ ಡಿ ಕಾಕ್‌’ ಹೇಳಿದರು.

‘ಹಾರ್ದಿಕ್‌ ಮತ್ತು ಪೊಲಾರ್ಡ್‌ ಅವರು ಏಕಾಂಗಿಯಾಗಿ ಪಂದ್ಯ ಗೆದ್ದುಕೊಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಕೆಕೆಆರ್‌ ವಿರುದ್ಧವೂ ಅವರು ತಂಡವನ್ನು ಗೆಲುವಿನ ದಡ ಮುಟ್ಟಿಸಲು ಪ್ರಯತ್ನಿಸಿದ್ದರು. ಆದರೆ ಅದೃಷ್ಟ ನಮ್ಮ ಕೈಹಿಡಿಯಲಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT