ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Test Cricket | ಸ್ಪಿನ್ನರ್ ಆಗಿ 500 ವಿಕೆಟ್ ಕಬಳಿಸಿದ IT ಎಂಜಿನಿಯರ್ ಅಶ್ವಿನ್

Published 16 ಫೆಬ್ರುವರಿ 2024, 13:02 IST
Last Updated 16 ಫೆಬ್ರುವರಿ 2024, 13:02 IST
ಅಕ್ಷರ ಗಾತ್ರ

ರಾಜ್‌ಕೋಟ್: ಭಾರತದ ಆಫ್‌ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ 500ನೇ ವಿಕೆಟ್ ಪಡೆಯುವ ಮೂಲಕ ಜಗತ್ತಿನ ಗಮನ ಸೆಳೆದಿದ್ದಾರೆ.

ದಶಕದಿಂದಲೂ ಭಾರತ ತಂಡದ ಯಶಸ್ವಿ ಬೌಲರ್ ಎನಿಸಿರುವ ಅಶ್ವಿನ್‌ ಅವರು ತಮ್ಮ 98ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್‌ನ ಓಪನರ್‌ ಝಾಕ್ ಕ್ರಾಲಿ ಅವರ ವಿಕೆಟ್ ಪಡೆದು 500 ವಿಕೆಟ್‌ ಕಬಳಸಿದವರ ಕ್ಲಬ್ ಸೇರುತ್ತಿದ್ದಂತೆಯೇ ಇಡೀ ಕ್ರೀಡಾಂಗಣವೇ ಎದ್ದು ನಿಂತು ಸಾಧಕನಿಗೆ ಚಪ್ಪಾಳೆಯ ಮಳೆಗರೆದು ಮೆಚ್ಚುಗೆ ಸೂಚಿಸಿತು.

ಕ್ರಿಕೆಟ್‌ ವೀಕ್ಷಕ ವಿವರಣೆಗಾರ ಹರ್ಷ ಬೋಗ್ಲೆ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಅಶ್ವಿನ್ ಅವರ ಸಾಧನೆ ಕುರಿತು ಬರೆದುಕೊಂಡಿದ್ದು, ‘ಅದ್ಭುತ ಆಟದ ಶ್ರೇಷ್ಠ ವ್ಯಕ್ತಿಯೊಬ್ಬರು ಮಹತ್ವದ ಸಾಧನೆ ಮಾಡಿದ್ದಾರೆ. ಅವರ ಈ ಸಾಧನೆಗಾಗಿ ಎಲ್ಲರೂ ಎದ್ದುನಿಂತು ಚಪ್ಪಾಳೆ ತಟ್ಟುವ ಮೂಲಕ ಗೌರವ ಸೂಚಿಸುವ ಸಮಯವಿದು’ ಎಂದಿದ್ದಾರೆ.

37 ವರ್ಷದ ಅಶ್ವಿನ್ ಅವರು ‘ಸರ್ವಕಾಲಿಕ ಶ್ರೇಷ್ಠ’ ಎಂದು ಟೆಸ್ಟ್ ಕ್ಯಾಪ್ಟನ್ ರೋಹಿನ್ ಶರ್ಮಾ ಬಣ್ಣಿಸಿದ್ದಾರೆ. ಈ ಸಾಧನೆ ಮಾಡಿದ ಜಗತ್ತಿನ 9ನೇ ಹಾಗೂ ಭಾರತದ 2ನೇ (ಅನಿಲ್ ಕುಂಬ್ಳೆ (619)) ಬೌಲರ್ ಎನಿಸಿದ್ದಾರೆ ಅಶ್ವಿನ್.

ಅಶ್ವಿನ್ ಅವರು ಚೆನ್ನೈನ ನಿವಾಸಿ. ಐಟಿ ಎಂಜಿನಿಯರಿಂಗ್ ಪದವೀಧರರಾದ ಅವರ ಚಿತ್ತ ಕ್ರಿಕೆಟ್‌ನತ್ತ ಇದ್ದದ್ದು ಮಾತ್ರವಲ್ಲ, ಸಾಧನೆಯ ಹಾದಿಗೂ ನೂಕಿತು. ಕರಾರುವಕ್ಕಾದ ಬೌಲಿಂಗ್‌, ವಿನೂತನ ಶೈಲಿಯ ತಂತ್ರಗಾರಿಕೆ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ಆಫ್‌ ಸ್ಪಿನ್ ಅನ್ನು ಬಹು ಆಯಾಮಗಳಿಂದ ಬಳಸುವ ಅಶ್ವಿನ್ ಎದುರಾಳಿಯ ತಂತ್ರಗಳನ್ನೇ ಬುಡಮೇಲು ಮಾಡಿ ವಿಕೆಟ್ ಕಬಳಿಸಿದವರು.

‘ಆರ್ಮ್‌ ಬಾಲ್’ ಎಂಬ ತಂತ್ರ ಬಳಸುವ ಅಶ್ವಿನ್ ಅವರು ಎಸೆಯುವ ಚೆಂಡು ನೇರವಾಗಿ ಹಾದು, ಕೇರಂ ಬಾಲ್‌ನಂತೆ ನುಗ್ಗುವ ಮೂಲಕ ವಿಕೆಟ್ ಪಡೆಯುವಲ್ಲಿ ನೆರವಾಗುವಂತದ್ದು. ಆದರೆ ಕೆಲವೊಮ್ಮೆ ನಾನ್‌ ಸ್ಟ್ರೈಕರ್‌ ತುದಿಯಲ್ಲಿರುವವರನ್ನು ರನ್‌ಔಟ್ ಮಾಡುವ ಕೆಲವೊಂದು ಸಂದರ್ಭಗಳೂ ಅವರನ್ನು ವಿವಾದದ ಸುಳಿಗೆ ನೂಕಿವೆ.

ಭಾರತದಲ್ಲಿ ನಡೆದ 2011ರ ವಿಶ್ವಕಪ್‌ನಲ್ಲಿದ್ದ ಅಶ್ವಿನ್‌, 2013ರ ಚಾಂಪಿಯನ್ಸ್‌ ಟ್ರೋಫಿ ಪಡೆದ ತಂಡದಲ್ಲೂ ಪ್ರಮುಖ ಪಾತ್ರ ವಹಿಸಿದ್ದರು. 2015–16ರಲ್ಲಿ 8 ಟೆಸ್ಟ್‌ನಲ್ಲಿ 48 ವಿಕೆಟ್‌ಗಳನ್ನು ಹಾಗೂ 19 ಟಿ20 ಪಂದ್ಯಗಳಲ್ಲಿ 27 ವಿಕೆಟ್‌ಗಳನ್ನು ಪಡೆಯುವ ಮೂಲಕ ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದರು.

ಬೌಲಿಂಗ್ ಜತೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ 3,308 ರನ್‌ಗಳನ್ನೂ ಕಲೆಹಾಕಿದ್ದಾರೆ. ಇದರಲ್ಲಿ ಐದು ಶತಕಗಳೂ ಸೇರಿವೆ. ಮಧ್ಯಮ ಕ್ರಮಾಂಕದಿಂದ ವಿವಿಧ ಹಂತಗಳಲ್ಲಿ ಆಡಿರುವ ಅಶ್ವಿನ್ ಅವರ ವೈಯಕ್ತಿಕ ಗರಿಷ್ಠ ರನ್ ಗಳಿಕೆ 124.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT