ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Karnataka Budget: ಹನುಮನ ಜನ್ಮಸ್ಥಳ ಅಂಜನಾದ್ರಿ ಅಭಿವೃದ್ಧಿಗೆ ₹100 ಕೋಟಿ ಮೀಸಲು

Published 16 ಫೆಬ್ರುವರಿ 2024, 11:11 IST
Last Updated 16 ಫೆಬ್ರುವರಿ 2024, 11:11 IST
ಅಕ್ಷರ ಗಾತ್ರ

ಬೆಂಗಳೂರು: ಹನುಮನ ಜನ್ಮಸ್ಥಳ ಎಂದು ನಂಬಲಾಗಿರುವ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ₹100 ಕೋಟಿ ವಿನಿಯೋಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

2024–25ನೇ ಸಾಲಿನ ರಾಜ್ಯ ಬಜೆಟ್‌ ಮಂಡನೆ ಮಾಡಿರುವ ಸಿದ್ದರಾಮಯ್ಯ, ರಾಜ್ಯ ಪ್ರವಾಸದೋದ್ಯಮ ಅಭಿವೃದ್ದಿಗೆ ಪ್ರಸ್ತುತ ಜಾರಿಯಲ್ಲಿರುವ ಕರ್ನಾಟಕ ಪ್ರವಾಸೋದ್ಯಮ ನೀತಿಯನ್ನು ಮತ್ತಷ್ಟು ಹೂಡಿಕೆದಾರರ ಹಾಗೂ ಪ್ರವಾಸಿಗರ ಸ್ನೇಹಿಯಾಗಿ ಮಾಡಲಾಗುವುದು ಎಂದರು.

‘ಪೌರಾಣಿಕ ಹಾಗೂ ಐತಿಹಾಸಿಕವಾಗಿ ಪ್ರಖ್ಯಾತಿ ಹೊಂದಿರುವ ಅಂಜನಾದ್ರಿ ಬೆಟ್ಟ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರವಾಸಿ ಸೌಲಭ್ಯ ಅಭಿವೃದ್ಧಿಪಡಿಸಲು ಅನುದಾನ ಬಿಡುಗಡೆ ಮಾಡಲಾಗುವುದು’ ಎಂದು ಹೇಳಿದರು.

2023ರ ಬಜೆಟ್‌ನಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸರ್ಕಾರ ಅಂಜನಾದ್ರಿ ಅಭಿವೃದ್ದಿ ₹120 ಕೋಟಿ ಮೀಸಲಿಟ್ಟಿತ್ತು. ಈ ಯೋಜನೆಯನ್ನೇ ಸಿದ್ದರಾಮಯ್ಯ ಸರ್ಕಾರ ಮುಂದುವರಿಸಿಕೊಂಡು ಹೋಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಕೊಪ್ಪಳ ಜಿಲ್ಲೆಯ ಆನೆಗುಂದಿಗೆ ಸಮೀಪದಲ್ಲಿರುವ ಅಂಜನಾದ್ರಿ ಬೆಟ್ಟಕ್ಕೆ ಸಾಕಷ್ಟು ಭಕ್ತರು ಭೇಟಿ ನೀಡುತ್ತಿದ್ದಾರೆ. ಪುರಾಣಗಳ ಪ್ರಕಾರ ಈ ಸ್ಥಳವೇ ಕಿಷ್ಕಿಂದೆ ಎಂದು ನಂಬಲಾಗಿದೆ.

ಇತರ ಪ್ರಮುಖ ಘೋಷಣೆಗಳು....

  • ಗೋಕಾಕ ಜಲಪಾತವನ್ನು ಪ್ರೇಕ್ಷಣೀಯ ಸ್ಥಳವಾಗಿ ಅಭಿವೃದ್ಧಿ ಪಡಿಸಲಾಗುವುದು.

  • ರಾಜ್ಯದ 530 ಸಂರಕ್ಷಿತ ಸ್ಮಾರಕಗಳನ್ನು 3ಡಿ ಲೇಸರ್‌ ಸ್ಕ್ಯಾನಿಂಗ್‌ ಮೂಲಕ ಡಿಜಿಟಲ್ ದಾಖಲೀಕರಣ.

  • ಗದಗ ಜಿಲ್ಲೆಯ ಕಪ್ಪತ್ತಗುಡ್ಡದಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಾಗುವುದು

  • ಬೀದರ್‌ ಹಾಗೂ ವಿಜಯಪುರದಲ್ಲಿ ಕರೇಜ್‌ ಎಂದು ಪ್ರಸಿದ್ಧವಾಗಿರುವ ಪುರಾತನ ನೀರು ಸರಬರಾಜು ವ್ಯವಸ್ಥೆಯನ್ನು ₹15 ಕೋಟಿ ವೆಚ್ಚದಲ್ಲಿ ಪುನಶ್ಚೇತನಗೊಳಿಸಲಾಗುವುದು.

  • ರೇಣುಕಾ ಯಲ್ಲಮ್ಮ ಕ್ಷೇತ್ರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯನ್ನು ರಚಿಸಿ ಅಧಿಸೂಚನೆ ಹೊರಡಿಸಲಾಗಿದೆ.

  • ಬಂಡೀಪುರ, ದಾಂಡೇಲಿ ಮತ್ತು ಕಬಿನಿಯಲ್ಲಿ ₹25 ಕೋಟಿ ವೆಚ್ಚದಲ್ಲಿ ಇಂಟರ್‌ಪ್ರಿಟೇಷನ್‌ ಸೆಂಟರ್‌ಗಳ ನಿರ್ಮಾಣ.

  • ರಾಷ್ಟ್ರಕೂಟರ ಕಾಲದಲ್ಲಿ ಕರ್ನಾಟಕದ ಮೊಟ್ಟ ಮೊದಲ ವಿಶ್ವವಿದ್ಯಾಲಯವನ್ನು ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲ್ಲೂಕಿನ ನಾಗಾವಿಯಲ್ಲಿ ಸ್ಥಾಪಿಸಲಾಗಿತ್ತು ಎಂಬುದು ಸ್ಥಳೀಯರ ನಂಬಿಕೆ. ಅಲ್ಲಿನ ಪ್ರಾಚ್ಯಾವೇಶಗಳ ಸಂಶೋಧನೆ ಮತ್ತು ಸಂರಕ್ಷಣೆಗಾಗಿ ನೆರವು ನೀಡಲು ಎಎಸ್‌ಐಗೆ ಶಿಫಾರಸ್ಸು ಮಾಡಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT