ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Budget ಭಾಷಣದಲ್ಲಿ ಬಳಸಿದ ವಚನ, ಕವಿಗಳ ವಾಣಿ, ಚಿಂತಕರ ನುಡಿ, ಸಿನಿಮಾ ಹಾಡುಗಳಿವು

Published 16 ಫೆಬ್ರುವರಿ 2024, 10:48 IST
Last Updated 16 ಫೆಬ್ರುವರಿ 2024, 10:48 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿದ ದಾಖಲೆಯ 15ನೇ ಬಾರಿಯ ರಾಜ್ಯ ಬಜೆಟ್‌ ಭಾಷಣದಲ್ಲಿ ವಚನಕರಾರ ಸಾಲುಗಳು, ಕವಿಗಳ ವಾಣಿ, ಚಿಂತಕರ ನುಡಿ, ಸಿನಿಮಾ ಹಾಡುಗಳ ಸಾಲುಗಳು ಆಯಾ ಸಂದರ್ಭದಲ್ಲಿ ಹಾದುಹೋದವು.

ಗ್ಯಾರಂಟಿ ಯೋಜನೆಗಳ ಕುರಿತು ಮಾತು ಆರಂಭಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರನಟ ಡಾ. ರಾಜಕುಮಾರ್ ಅಭಿನಯದ ಬಂಗಾರದ ಮನುಷ್ಯ ಚಿತ್ರದ ಗೀತೆಯ ಸಾಲುಗಳನ್ನು ಬಳಸಿದ್ದು ಹೀಗೆ...

ಆಗದು ಎಂದು; ಕೈಲಾಗದು ಎಂದು  ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ ಮನಸೊಂದಿದ್ದರೆ ಮಾರ್ಗವು ಉಂಟು ಕೆಚ್ಚೆದೆ ಇರಬೇಕೆಂದು
– ಬಂಗಾರದ ಮನುಷ್ಯ ಚಿತ್ರದಿಂದ

‘ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಂಡ ಕೇಂದ್ರ ಸರ್ಕಾರ ಮಾಡದ ಕೆಲಸವನ್ನು ರಾಜ್ಯ ಸರ್ಕಾರ ಕೈಗೆತ್ತಿಕೊಂಡಿದೆ’ ಎಂದು ಗುಡುಗಿದ ಸಿದ್ದರಾಮಯ್ಯವರು ಕುವೆಂಪು ಅವರ ಮಾತಿನ ಸಾಲುಗಳನ್ನು ಬಳಸಿಕೊಂಡರು.

ಸರ್ವೋದಯ ದೃಷ್ಟಿ ಮತ್ತು ಸಮನ್ವಯ ದೃಷ್ಟಿ ಎಲ್ಲೆಲ್ಲೂ ತಾಂಡವವಾಡಬೇಕು. ಮತ ಮತಗಳಲ್ಲಿ, ಸಾಹಿತ್ಯ ಸಾಹಿತ್ಯಗಳಲ್ಲಿ ಸಮಾಜ, ಸಮಾಜಗಳಲ್ಲಿ– ಅಷ್ಟೇ ಏಕೆ? ರಾಜಕೀಯ ಕ್ಷೇತ್ರದಲ್ಲಿ ಆರ್ಥಿಕ ಕ್ಷೇತ್ರದಲ್ಲಿ, ಸರ್ವತ್ರ ಅದು ವ್ಯಾಪಿಸಬೇಕು. ಅತ್ಯಂತ ಕೀಳಾದವನಿಗೂ ಮೇಲಾಗುವ ಅವಕಾಶವಾಗಬೇಕು. ಇವೆರಡನ್ನೂ ಒಳಗೊಂಡ ಆಧ್ಯಾತ್ಮಿಕ ದೃಷ್ಟಿಯೇ ಪೂರ್ಣದೃಷ್ಟಿ.
– ಕವೆಂಪು

‘ಗ್ಯಾರಂಟಿ ಯೋಜನೆಗಳಿಗೆ ಹಣವಿಲ್ಲ ಎಂದ ಸುಳ್ಳು ಸುದ್ದಿಗಳನ್ನು ಹರಡಿ ನಮ್ಮ ಸ್ಥೈರ್ಯ ಕುಗ್ಗಿಸುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ವಚನಗಳ ಮೂಲಕವೇ ಉತ್ತರಿಸಿದರು.

ಮನ ಶುದ್ಧವಿಲ್ಲದವಂತೆ ದ್ರವ್ಯದ ಬಡತನವಲ್ಲದೆ ಚಿತ್ತಶುದ್ಧದಲ್ಲಿ ಕಾಯಕವ ಮಾಡುವಲ್ಲಿ ಸದ್ಭಕ್ತಂಗೆ ಎತ್ತ ನೋಡಿದಡತ್ತ ಲಕ್ಷ್ಮಿ ತಾನಾಗಿಪ್ಪಳು ಮಾರಯ್ಯ ಪ್ರಿಯ ಅಮರೇಶ್ವರ ಲಿಂಗದ ಸೇವೆಯುಳ್ಳನ್ನಕ್ಕರ
– ಆಯ್ದಕ್ಕಿ ಲಕ್ಕಮ್ಮ

ಜಿಎಸ್‌ಟಿ ತೆರಿಗೆ ಸಂಗ್ರಹದಲ್ಲಿ ದೇಶದಲ್ಲೇ ಕರ್ನಾಟಕ 2ನೇ ಸ್ಥಾನದಲ್ಲಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಇದು ಶೇ 12ರಷ್ಟು ಹೆಚ್ಚಾಗಿದೆ. ಗ್ಯಾರಂಟಿ ಯೋಜನೆಯಿಂದ ಜನರ ಆದಾಯ ಹೆಚ್ಚಾಗಿದ್ದು, ಇದು ಆರ್ಥಿಕತೆ ಉತ್ತೇಜಿಸುತ್ತಿದೆ ಎಂದು ಹೇಳಿದ ಸಿದ್ದರಾಮಯ್ಯ ಅವರು ಇತ್ತೀಚೆಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿಗೆ ಭಾಜನರಾದ ಬಿಹಾರದ ಮಾಜಿ ಮುಖ್ಯಮಂತ್ರಿ ದಿ. ಕರ್ಪೂರಿ ಠಾಕೂರ್ ಅವರ ಮಾತುಗಳನ್ನು ಉಲ್ಲೇಖಿಸಿದರು.

ಕೇಂದ್ರ ಹಾಗೂ ರಾಜ್ಯಗಳ ಸಂಬಂಧ ನೌಕರ ಹಾಗೂ ಯಜಮಾನರ ಸಂಬಂಧಗಳಾಗದೆ ಸಂವಿಧಾನದತ್ತ ಅಧಿಕಾರ ವ್ಯಾಪ್ತಿಯೊಳಗೆ ಸ್ವಾಯತ್ತ ಘಟಕಗಳಾಗಿರಬೇಕು. ರಾಜ್ಯಗಳ ಜೊತೆ ಸಮಾನತೆಯ ಆಧಾರದಲ್ಲಿ ವ್ಯವಹರಿಸಬೇಕು
– ಕರ್ಪೂರಿ ಠಾಕೂರ್, ಬಿಹಾರದ ಮಾಜಿ ಮುಖ್ಯಮಂತ್ರಿ

ಕೃಷಿ ವಲಯದ ಯೋಜನೆಗಳ ಘೋಷಣೆಗೆ ಕವಿ ಡಾ. ಸಿದ್ದಲಿಂಗಯ್ಯ ಅವರ ಮಾತುಗಳನ್ನು ಬಳಸಿಕೊಂಡರು...

ಹೊಲವನುತ್ತು ಬಿತ್ತೋರು  ಬೆಳೆಯ ಕುಯ್ದು ಬೆವರೋರು ಬಿಸಿಲಿನಲ್ಲಿ ಬೇಯೋರು ನನ್ನ ಜನಗಳು
- ಡಾ. ಸಿದ್ದಲಿಂಗಯ್ಯ

ಆಯವ್ಯಯದಲ್ಲಿ ಶಿಕ್ಷಣ ಇಲಾಖೆ ಕುರಿತ ಯೋಜನೆಗಳ ಪ್ರಕಟಣೆ ಸಂದರ್ಭದಲ್ಲಿ ಕನ್ನಡದ ಕಬೀರ ಎಂದೇ ಕರೆಯಲಾಗುವ ಇಬ್ರಾಹಿಂ ಸುತಾರ ಅವರ ಮಾತುಗಳ ಸಾಲುಗಳನ್ನು ಸಿದ್ದರಾಮಯ್ಯ ಉಲ್ಲೇಖಿಸಿದರು.

ಶಾಲೆಯ ಮಕ್ಕಳಿಗೆ ನಮ್ಮ ರಾಷ್ಟ್ರಧರ್ಮ ಯಾವುದು ಎಂದು ಕೇಳಿದರೆ, ಭಾವೈಕ್ಯತೆಯೇ, ಸಾಮರಸ್ಯವೇ, ಪ್ರಜಾಪ್ರಭುತ್ವವೇ ನಮ್ಮ ರಾಷ್ಟ್ರಧರ್ಮ ಎಂದು ಹೇಳಿ. ಸಂವಿಧಾನವೇ ರಾಷ್ಟ್ರೀಯ ಗ್ರಂಥ ಎಂದು ನಮ್ಮ ಮಕ್ಕಳಿಗೆ ಹೇಳಿಕೊಡಿ.
– ಇಬ್ರಾಹಿಂ ಸುತಾರ, ಕನ್ನಡದ ಕಬೀರ

ಸಮಾಜ ಕಲ್ಯಾಣ ಇಲಾಖೆಯ ಆಯವ್ಯಯ ಮಂಡನೆಗೂ ಮೊದಲು ಇತ್ತೀಚೆಗೆ ಬಿಡುಗಡೆಯಾದ ಕನ್ನಡದ ಡೇರ್ ಡೆವಿಲ್ ಮುಸ್ತಫಾ ಚಿತ್ರದ ಗೀತೆಯ ಸಾಲುಗಳನ್ನು ಸಿದ್ದರಾಮಯ್ಯ ಬಳಸಿಕೊಂಡರು.

ಒಂದು ತೋಟದಲ್ಲಿ ನೂರು ಹೂವು ಅರಳಲಿ ಎಲ್ಲಾ ಕೂಡಿ ಆಡುವಂಥ ಗಾಳಿ ಬೀಸಲಿ
– ಡೇರ್‌ ಡೆವಿಲ್ ಮುಸ್ತಫಾ ಚಿತ್ರದಿಂದ

ತಂತ್ರಜ್ಞಾನ ಕ್ಷೇತ್ರದ ಪ್ರಸ್ತಾಪದ ಸಂದರ್ಭದಲ್ಲಿ ...

ನಾವು ನಾವೀನ್ಯತೆ ಮತ್ತು ತಂತ್ರಜ್ಞಾನಕ್ಕೆ ಪೂರಕ ವಾತಾವರಣ ಅಭಿವೃದ್ಧಿಪಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ವಿನೂತನ ಕಾರ್ಯಶೈಲಿ ಹಾಗೂ ಚಿಂತನಾ ಕ್ರಮದ ಅಗತ್ಯವಿದೆ. ನಮ್ಮ ಪರಿಸರವೇ ನಾವೀನ್ಯತೆಯನ್ನು ಉತ್ತೇಜಿಸುವಂತಿರಬೇಕು.
– ಪ್ರೊ. ಸಿ.ಎನ್.ಆರ್. ರಾವ್

ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಂಬಂಧಿಸಿದಂತೆ ಮಾತು ಆರಂಭಿಸಿದ ಮುಖ್ಯಮಂತ್ರಿ ಸಿದ್ದರಾಯಮ್ಮ 12ನೇ ಶತಮಾನದಲ್ಲಿ ಸಾಮಾಜಿಕ ಮತ್ತು ಲಿಂಗ ಸಮಾನತೆಗಾಗಿ ಮತ್ತು ವರ್ಗಭೇದ ಹಾಗೂ ವರ್ಣಭೇದ ವಿರುದ್ಧವಾಗಿ ಶೋಷಿತ ವರ್ಗದ ಜನರಲ್ಲಿ ಆತ್ಮಸ್ಥೈರ್ಯ ತುಂಬಿದ ಬಸವಣ್ಣ ಅವರ ವಚನದ ಸಾಲುಗಳನ್ನು ನೆನೆದರು.

ಇವನಾರವ ಇವನಾರವ ಎಂದೆನಿಸದಿರಯ್ಯ ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ
– ನಾಯಕ ಬಸವಣ್ಣ
ಪ್ರತಿಯೊಬ್ಬರ ಕಣ್ಣೀರನ್ನು ಒರೆಸುವುದು ಮಹಾತ್ಮಾ ಗಾಂಧೀಜಿಯವರ ಆಶಯವಾಗಿದೆ. ಇದು ನಮ್ಮ ಇತಿಮಿತಿಯನ್ನು ಮೀರಿದ್ದಾಗಿರಬಹುದು. ಆದರೆ, ಕಣ್ಣೀರು ಮತ್ತು ಬವಣೆಗಳು ಇರುವವರೆಗೆ ನಮ್ಮ ಕಾರ್ಯ ಪೂರ್ಣಗೊಳ್ಳುವುದಿಲ್ಲ.
– ಜವಾಹರಲಾಲ್ ನೆಹರು

‘ಅಂತಿಮವಾಗಿ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಆಶಯದಂತೆ ಹಣದುಬ್ಬರ, ಹೆಚ್ಚುತ್ತಿರುವ ಅಸಮಾನತೆ ಹಾಗೂ ನಿರುದ್ಯೋಗದಿಂದ ಜರ್ಜರಿತವಾಗಿರುವ ಜನಸಾಮಾನ್ಯರು, ಮಹಿಳೆಯರು, ರೈತರು, ಯುವಜನತೆ ಮತ್ತು ಸಮಾಜದ ಕಟ್ಟಕಡೆಯ ವರ್ಗಗಳಿಗೆ ಅಗತ್ಯವಿರುವ ಬೆಂಬಲವನ್ನು ಒದಗಿಸಲು ಹಾಗೂ ಸಮಗ್ರ ಮತ್ತು ಸಮೃದ್ಧ ಕರ್ನಾಟಕವನ್ನು ಕಲ್ಪಿಸುವ ದೃಷ್ಟಿಕೋನದೊಂದಿಗೆ ಕಲ್ಯಾಣ ಆಧಾರಿತ ಬಜೆಟ್ ಮಂಡಿಸಿದ್ದೇನೆ’ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಅವರು ತಮ್ಮ 3 ಗಂಟೆಗೂ ಹೆಚ್ಚು ಕಾಲ ಓದಿದ ಬಜೆಟ್ ಪೂರ್ಣಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT