ಗುರುವಾರ , ಡಿಸೆಂಬರ್ 1, 2022
27 °C
ಮಹಿಳಾ ಏಷ್ಯಾ ಕಪ್‌ ಟಿ20: ಭಾರತ ಶುಭಾರಂಭ

ಜಯ ತಂದಿತ್ತ ಜೆಮಿಮಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಸಿಲ್ಹೆಟ್‌, ಬಾಂಗ್ಲಾದೇಶ: ಜೆಮಿಮಾ ರಾಡ್ರಿಗಸ್‌ ಅವರ ಬಿರುಸಿನ ಆಟ ಮತ್ತು ಬೌಲರ್‌ಗಳ ಚುರುಕಿನ ದಾಳಿಯ ನೆರವಿನಿಂದ ಭಾರತ ತಂಡ, ಮಹಿಳಾ ಏಷ್ಯಾ ಕಪ್‌ ಟಿ20 ಟೂರ್ನಿಯಲ್ಲಿ ಶುಭಾರಂಭ ಮಾಡಿತು.

ಸಿಲ್ಹೆಟ್‌ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಹರ್ಮನ್‌ಪ್ರೀತ್‌ ಕೌರ್‌ ಬಳಗ 41 ರನ್‌ಗಳಿಂದ ಶ್ರೀಲಂಕಾ ತಂಡವನ್ನು ಮಣಿಸಿತು.

ಮೊದಲು ಬ್ಯಾಟ್‌ ಮಾಡಿದ ಭಾರತ, ಜೆಮಿಮಾ (76 ರನ್‌, 53 ಎ., 4X11, 6X1) ಅವರ ಜವಾಬ್ದಾರಿಯುತ ಆಟದ ನೆರವಿನಿಂದ ನಿಗದಿತ ಓವರ್‌ಗಳಲ್ಲಿ 6 ವಿಕೆಟ್‌ಗೆ 150 ರನ್‌ ಗಳಿಸಿತು. ಲಂಕಾ ತಂಡ 18.2 ಓವರ್‌ಗಳಲ್ಲಿ 109 ರನ್‌ಗಳಿಗೆ ಆಲೌಟಾಯಿತು.

ಸವಾಲಿನ ಗುರಿ ಬೆನ್ನಟ್ಟಿದ ಚಾಮರಿ ಅಟಪಟ್ಟು ಬಳಗದವರು ಡಿ.ಹೇಮಲತಾ, ದೀಪ್ತಿ ಶರ್ಮಾ ಮತ್ತು ಪೂಜಾ ವಸ್ತ್ರಕರ್ ಅವರ ಶಿಸ್ತಿನ ದಾಳಿಯ ಮುಂದೆ ಪರದಾಡಿದರು. ಹರ್ಷಿಕಾ ಸಮರವಿಕ್ರಮ (26) ಮತ್ತು ಹಸಿನಿ ಪೆರೇರಾ (30) ಮಾತ್ರ ಅಲ್ಪ ಪ್ರತಿರೋಧ ತೋರಿದರು.

61 ರನ್‌ ಗಳಿಸುವಷ್ಟರಲ್ಲಿ ಐದು ವಿಕೆಟ್‌ ಕಳೆದುಕೊಂಡ ಲಂಕಾ ತಂಡಕ್ಕೆ ಆ ಬಳಿಕ ಚೇತರಿಸಿಕೊಳ್ಳಲು ಆಗಲಿಲ್ಲ. ಮೂರು ಮಂದಿ ಮಾತ್ರ ಎರಡಂಕಿಯ ಮೊತ್ತ ತಲುಪಿದರು.

ಜೆಮಿಮಾ ಅರ್ಧಶತಕ: ಭಾರತ ತಂಡದ ಆರಂಭ ಉತ್ತಮವಾಗಿರಲಿಲ್ಲ. ಶಫಾಲಿ ವರ್ಮಾ (10) ಮತ್ತು ಸ್ಮೃತಿ ಮಂದನಾ (6) ಅವರು ತಂಡದ ಮೊತ್ತ 23 ಆಗುವಷ್ಟರಲ್ಲಿ ಪೆವಿಲಿಯನ್‌ಗೆ ಮರಳಿದ್ದರು.

ಆದರೆ ಜೆಮಿಮಾ ಮತ್ತು ನಾಯಕಿ ಹರ್ಮನ್‌ಪ್ರೀತ್‌ (33 ರನ್‌, 30 ಎ.) ಮೂರನೇ ವಿಕೆಟ್‌ಗೆ 71 ಎಸೆತಗಳಲ್ಲಿ 92 ರನ್‌ ರನ್‌ ಸೇರಿಸಿ ತಂಡವನ್ನು ಉತ್ತಮ ಮೊತ್ತದತ್ತ ಮುನ್ನಡೆಸಿದರು.

ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ವಾಪಸಾಗಿರುವ ಜೆಮಿಮಾ, ಎದುರಾಳಿ ಬೌಲಿಂಗ್‌ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. ಟಿ20 ಪಂದ್ಯದಲ್ಲಿ ತಮ್ಮ ವೈಯಕ್ತಿಕ ಶ್ರೇಷ್ಠ ಮೊತ್ತ ಗಳಿಸಿದರು.

ಸಂಕ್ಷಿಪ್ತ ಸ್ಕೋರ್‌: ಭಾರತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 150 (ಜೆಮಿಮಾ ರಾಡ್ರಿಗಸ್‌ 76, ಹರ್ಮನ್‌ಪ್ರೀತ್‌ ಕೌರ್‌ 33, ಡಿ.ಹೇಮಲತಾ ಔಟಾಗದೆ 13, ಒಶಾದಿ ರಣಸಿಂಘೆ 32ಕ್ಕೆ 3, ಚಾಮರಿ ಅಟಪಟ್ಟು 8ಕ್ಕೆ 1, ಸುಗಂಧಿಕಾ ಕುಮಾರಿ 26ಕ್ಕೆ 1)

ಶ್ರೀಲಂಕಾ 18.2 ಓವರ್‌ಗಳಲ್ಲಿ 109 (ಹರ್ಷಿಕಾ ಸಮರವಿಕ್ರಮ 26, ಹಸಿನಿ ಪೆರೇರಾ 30, ಒಶಾದಿ ರಣಸಿಂಘೆ 11, ಡಿ.ಹೇಮಲತಾ 15ಕ್ಕೆ 3, ದೀಪ್ತಿ ಶರ್ಮಾ 15ಕ್ಕೆ 2, ಪೂಜಾ ವಸ್ತ್ರಕರ್‌ 12ಕ್ಕೆ 2) ಫಲಿತಾಂಶ: ಭಾರತಕ್ಕೆ 41 ರನ್ ಗೆಲುವು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು