ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2022: ರಾಹುಲ್–ಏಡನ್ ಅಮೋಘ ಜೊತೆಯಾಟ

ಸನ್‌ರೈಸರ್ಸ್ ಹೈದರಾಬಾದ್‌ಗೆ ಮಣಿದ ಕೋಲ್ಕತ್ತ ನೈಟ್ ರೈಡರ್ಸ್‌: ಮಿಂಚಿದ ನಟರಾಜನ್, ಉಮ್ರಾನ್
Last Updated 15 ಏಪ್ರಿಲ್ 2022, 19:59 IST
ಅಕ್ಷರ ಗಾತ್ರ

ಮುಂಬೈ: ಕ್ರೀಸ್‌ನಲ್ಲಿ ಭ‌ದ್ರವಾಗಿ ನೆಲೆಯೂರಿದ ರಾಹುಲ್ ತ್ರಿಪಾಠಿ ಮತ್ತು ಏಡನ್ ಮರ್ಕರಮ್ ಅವರ ಅಮೋಘ ಜೊತೆಯಾಟ ಸನ್‌ರೈಸರ್ಸ್ ಹೈದರಾಬಾದ್‌ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟಿತು.

ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಸನ್‌ರೈಸರ್ಸ್‌ 7 ವಿಕೆಟ್‌ಗಳಿಂದ ಕೋಲ್ಕತ್ತ ನೈಟ್ ರೈಡರ್ಸ್ ಎದುರು ಜಯ ಗಳಿಸಿತು. ಈ ಮೂಲಕ ಗೆಲುವಿನ ಹ್ಯಾಟ್ರಿಕ್ ಸಾಧಿಸಿತು.

176 ರನ್‌ಗಳ ಜಯ ಗುರಿ ಬೆ‌ನ್ನತ್ತಿದ ಸನ್‌ರೈಸರ್ಸ್ 3 ರನ್ ಗಳಿಸುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. 39 ರನ್‌ ಗಳಿಸಿದ್ದಾಗ ಮತ್ತೊಂದು ಆಘಾತಕ್ಕೆ ಒಳಗಾಯಿತು. ಈ ವೇಳೆ ರಾಹುಲ್ (71; 37 ಎಸೆತ, 4 ಬೌಂಡರಿ, 6 ಸಿಕ್ಸರ್) ಮತ್ತು ಏಡನ್ (68; 36 ಎ, 4 ಬೌಂ, 6 ಸಿ) ಜೊತೆಗೂಡಿ 94 ರನ್‌ಗಳನ್ನು ಸೇರಿಸಿದರು. ರಾಹುಲ್ ಔಟಾದ ನಂತರವೂ ಏಡನ್ ಆಟ ಮುಂದುವರಿಯಿತು.

ಪ್ಯಾಟ್ ಕಮಿನ್ಸ್ ಹಾಕಿದ 18ನೇ ಓವರ್‌ನ ಕೊನೆಯ ಮೂರು ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ಸತತ ಎರಡು ಸಿಕ್ಸರ್ ಸಿಡಿಸಿ ಮರ್ಕರಮ್ ತಂಡಕ್ಕೆ ಸುಲಭ ಜಯ ತಂದುಕೊಟ್ಟರು. 13 ಎಸೆತ ಬಾಕಿ ಇರುವಾಗಲೇ ತಂಡ 3 ವಿಕೆಟ್ ಕಳೆದುಕೊಂಡು 176 ರನ್ ಗಳಿಸಿತು.

ನಟರಾಜನ್‌, ಜಾನ್ಸೆನ್ ಪರಿಣಾಮಕಾರಿ ದಾಳಿ

ಟಾಸ್ ಗೆದ್ದ ಸನ್‌ರೈಸರ್ಸ್ ತಂಡ ಫೀಲ್ಡಿಂಗ್ ಆ‌ಯ್ಕೆ ಮಾಡಿಕೊಂಡಿತು. ವೇಗಿಗಳಾದ ಟಿ.ನಟರಾಜನ್, ಮಾರ್ಕೊ ಜಾನ್ಸೆನ್ ಮತ್ತು ಉಮ್ರಾನ್ ಮಲಿಕ್ ದಾಳಿಗೆ ಕೋಲ್ಕತ್ತ ಆರಂಭದಲ್ಲೇ ಆಘಾತ ಅನುಭವಿಸಿತು. ಈ ಸಂದರ್ಭದಲ್ಲಿನಿತೀಶ್ ರಾಣಾ ಮತ್ತು ಆ್ಯಂಡ್ರೆ ರಸೆಲ್ ಆಸರೆಯಾದರು. ಹೀಗಾಗಿ ತಂಡಕ್ಕೆ8 ವಿಕೆಟ್‌ ಕಳೆದುಕೊಂಡು 175 ರನ್ ಗಳಿಸಲು ಸಾಧ್ಯವಾಯಿತು.

31 ರನ್ ಗಳಿಸುವಷ್ಟರಲ್ಲಿ ಆರಂಭಿಕ ಜೋಡಿ ಆ್ಯರನ್ ಫಿಂಚ್ ಮತ್ತು ವೆಂಕಟೇಶ್ ಅಯ್ಯರ್, ನಾಲ್ಕನೇ ಕ್ರಮಾಂಕದ ಸುನಿಲ್ ನಾರಾಯಣ್ ಮರಳಿದ್ದರು. ಈ ಸಂದರ್ಭದಲ್ಲಿ ನಾಯಕ ಶ್ರೇಯಸ್ ಅಯ್ಯರ್ ಜೊತೆಗೂಡಿದ ನಿತೀಶ್ ರಾಣಾ, ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದರು. 39 ರನ್‌ಗಳ ಜೊತೆಯಾಟವಾಡಿದ ಶ್ರೇಯಸ್ ಅವರು ಉಮ್ರಾನ್ ಮಲಿಕ್ ವೇಗದ ದಾಳಿಗೆ ವಿಕೆಟ್ ಕಳೆದುಕೊಂಡರು.

ಶೆಲ್ಡನ್ ಜಾಕ್ಸನ್ ಜೊತೆಗೂಡಿ ನಿತೀಶ್ ರಾಣಾ ಬ್ಯಾಟಿಂಗ್ ವೈಭವ ಮುಂದುವರಿಸಿದರು. ಇಬ್ಬರೂ ಸೇರಿ ತಂಡದ ಮೊತ್ತವನ್ನು ಮೂರಂಕಿ ದಾಟಿಸಿದರು. ಜಾಕ್ಸನ್ ಔಟಾದ ನಂತರ ನಿತೀಶ್ ಭರ್ಜರಿ ಆಟ ಮುಂದುವರಿಸಿದರು. 15ನೇ ಓವರ್‌ನಲ್ಲಿ ನಟರಾಜನ್ ಅವರ ಎಸೆತವನ್ನು ಸ್ಕ್ವೇರ್ ಲೆಗ್‌ ಕಡೆಗೆ ತಳ್ಳಿ ಒಂದು ರನ್ ಗಳಿಸಿದ ರಾಣಾ 14ನೇ ಅರ್ಧಶತಕ ಪೂರೈಸಿದರು. ನಟರಾಜನ್ ಅವರ ಮುಂದಿನ ಓವರ್‌ನ ಮೊದಲ ಎಸೆತದಲ್ಲಿ ಬೌಂಡರಿ ಗಳಿಸಿದ ರಾಣಾ ಎರಡನೇ ಎಸೆತದಲ್ಲಿ ವಿಕೆಟ್ ಕಳೆದುಕೊಂಡರು. ನಂತರ ರಸೆಲ್ ಬೌಂಡರಿ ಮತ್ತು ಸಿಕ್ಸರ್‌ಗಳ ಮೂಲಕ ರಂಜಿಸಿದರು. ಸುಚಿತ್ ಹಾಕಿದ ಇನಿಂಗ್ಸ್‌ನ ಕೊನೆಯ ಓವರ್‌ನ ಕೊನೆಯ ಮೂರು ಎಸೆತಗಳಲ್ಲಿ ಎರಡು ಸಿಕ್ಸರ್ ಮತ್ತು ಬೌಂಡರಿ ಸಿಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT