ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಎಲ್‌: ಪ್ಲೇ ಆಫ್‌ ಹಂತಕ್ಕೆ ಬೆಳಗಾವಿ ಪ್ಯಾಂಥರ್ಸ್‌

ಬಿಜಾಪುರ ಬುಲ್ಸ್‌ ವಿರುದ್ಧ 7 ವಿಕೆಟ್‌ ಜಯ
Last Updated 26 ಆಗಸ್ಟ್ 2019, 20:36 IST
ಅಕ್ಷರ ಗಾತ್ರ

ಮೈಸೂರು: ಹಾಲಿ ಚಾಂಪಿಯನ್‌ ಬಿಜಾಪುರ ಬುಲ್ಸ್‌ ವಿರುದ್ಧ ಏಳು ವಿಕೆಟ್‌ಗಳ ಜಯ ಸಾಧಿಸಿದ ಬೆಳಗಾವಿ ಪ್ಯಾಂಥರ್ಸ್‌ ತಂಡ ಕೆಪಿಎಲ್‌ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ ‘ಪ್ಲೇ ಆಫ್‌’ ಹಂತ ಪ್ರವೇಶಿಸಿತು.

ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಪ್ಯಾಂಥರ್ಸ್‌ ಪೂರ್ಣ ಪ್ರಭುತ್ವ ಸಾಧಿಸಿತು. ಮೊದಲು ಬ್ಯಾಟ್‌ ಮಾಡಿದ ಭರತ್‌ ಚಿಪ್ಲಿ ನೇತೃತ್ವದ ಬುಲ್ಸ್‌ ನಿಗದಿತ ಓವರ್‌ಗಳಲ್ಲಿ 8 ವಿಕೆಟ್‌ಗೆ 136 ರನ್‌ ಗಳಿಸಿದರೆ, ಪ್ಯಾಂಥರ್ಸ್ 14 ಎಸೆತಗಳು ಉಳಿದಿರುವಂತೆಯೇ 3 ವಿಕೆಟ್‌ಗೆ 137 ಗಳಿಸಿ ಜಯ ಸಾಧಿಸಿತು.

ಸಾಧಾರಣ ಗುರಿ ಬೆನ್ನಟ್ಟಿದ ಪ್ಯಾಂಥರ್ಸ್, ಅರ್ಷ್‌ದೀಪ್‌ ಸಿಂಗ್‌ (0) ಮತ್ತು ಕಳೆದ ಪಂದ್ಯದ ಹೀರೊ ಸ್ಟಾಲಿನ್‌ ಹೂವರ್‌ (7) ಅವರನ್ನು ಬೇಗನೇ ಕಳೆದುಕೊಂಡು ಅಲ್ಪ ಒತ್ತಡಕ್ಕೆ ಒಳಗಾಯಿತು. ಆದರೆ ಆರ್‌. ಸಮರ್ಥ್‌ (ಅಜೇಯ 50, 45 ಎಸೆತ) ಆಕರ್ಷಕ ಅರ್ಧಶತಕದ ಮೂಲಕ ತಂಡದ ಗೆಲುವಿಗೆ ಕಾರಣರಾದರು.

ಮೊದಲು ದೀಕ್ಷಾನ್ಷು ನೇಗಿ (32 ರನ್, 23 ಎಸೆತ) ಜತೆ ಮೂರನೇ ವಿಕೆಟ್‌ಗೆ 50 ರನ್‌ ಕಲೆಹಾಕಿದ ಅವರು, ಬಳಿಕ ಅಭಿನವ ಮನೋಹರ್ (ಅಜೇಯ 42, 30 ಎಸೆತ) ಜತೆ ಮುರಿಯದ ನಾಲ್ಕನೇ ವಿಕೆಟ್‌ಗೆ 72 ರನ್‌ ಸೇರಿಸಿದರು.

ಲೀಗ್‌ ವ್ಯವಹಾರ ಕೊನೆಗೊಳಿಸಿದ ಪ್ಯಾಂಥರ್ಸ್‌ ಒಟ್ಟು ಏಳು ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನಕ್ಕೇರಿತು. ಮೂರನೇ ಸೋಲು ಅನುಭವಿಸಿದ ಬುಲ್ಸ್‌ ಕೇವಲ ಮೂರು ಪಾಯಿಂಟ್‌ಗಳೊಂದಿಗೆ ಕೊನೆಯ ಸ್ಥಾನದಲ್ಲಿದೆ.

ಮೊದಲು ಬ್ಯಾಟ್‌ ಮಾಡಿದ ಬುಲ್ಸ್‌ ತಂಡದ ಪರ ಭರತ್‌ ಚಿಪ್ಲಿ (33, 29 ಎಸೆತ) ಮತ್ತು ಎನ್‌.ಪಿ.ಭರತ್‌ (ಅಜೇಯ 35, 18 ಎಸೆತ) ಮಾತ್ರ ಅಲ್ಪ ಹೋರಾಟ ನಡೆಸಿದರು.

ಶುಭಾಂಗ್‌ ಹೆಗಡೆ, ಎಂ.ಬಿ. ದರ್ಶನ್ ಹಾಗೂ ಡಿ.ಅವಿನಾಶ್ ಕರಾರುವಾಕ್‌ ಆಗಿ ಬೌಲ್‌ ಮಾಡಿದರು.

ಕಣಕ್ಕಿಳಿಯದ ಪಾಂಡೆ: ಪ್ಯಾಂಥರ್ಸ್‌ ತಂಡದ ನಾಯಕ ಮನೀಷ್‌ ಪಾಂಡೆ ಈ ಪಂದ್ಯದಲ್ಲಿ ಕಣಕ್ಕಿಳಿಯಲಿಲ್ಲ. ಮೀರ್‌ ಕೌನೈನ್‌ ಅಬ್ಬಾಸ್‌ ತಂಡವನ್ನು ಮುನ್ನಡೆಸಿದರು. ಪಾಂಡೆ ಅವರು ದಕ್ಷಿಣ ಆಫ್ರಿಕಾ ‘ಎ’ ವಿರುದ್ಧ ಆಗಸ್ಟ್‌ 29 ರಿಂದ ಆರಂಭವಾಗಲಿರುವ ಏಕದಿನ ಕ್ರಿಕೆಟ್‌ ಟೂರ್ನಿಯಲ್ಲಿ ಭಾರತ ‘ಎ’ ತಂಡವನ್ನು ಮುನ್ನಡೆಸಲಿದ್ದಾರೆ. ಆದ್ದರಿಂದ ವಿಶ್ರಾಂತಿ ಪಡೆಯಲು ನಿರ್ಧರಿಸಿದರು.

ಸಂಕ್ಷಿಪ್ತ ಸ್ಕೋರ್: ಬಿಜಾಪುರ ಬುಲ್ಸ್ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 136 (ಭರತ್‌ ಚಿಪ್ಲಿ 33, ಸುನಿಲ್ ರಾಜು18, ಎನ್‌.ಪಿ.ಭರತ್‌ ಔಟಾಗದೆ 35, ಶುಭಾಂಗ್‌ ಹೆಗಡೆ 17ಕ್ಕೆ 2, ಡಿ.ಅವಿನಾಶ್ 25ಕ್ಕೆ 2, ಎಂ.ಬಿ.ದರ್ಶನ್ 19ಕ್ಕೆ 2)

ಬೆಳಗಾವಿ ಪ್ಯಾಂಥರ್ಸ್ 17.4 ಓವರ್‌ಗಳಲ್ಲಿ 3 ವಿಕೆಟ್‌ಗೆ 137 (ದೀಕ್ಷಾನ್ಷು ನೇಗಿ 32, ಆರ್‌.ಸಮರ್ಥ್‌ ಔಟಾಗದೆ 50, ಅಭಿನವ್‌ ಮನೋಹರ್ ಔಟಾಗದೆ 40, ಎಂ.ಜಿ.ನವೀನ್ 28ಕ್ಕೆ 2)

ಫಲಿತಾಂಶ: ಪ್ಯಾಂಥರ್ಸ್‌ಗೆ 7 ವಿಕೆಟ್‌ ಜಯ
ಪಂದ್ಯಶ್ರೇಷ್ಠ: ಆರ್‌.ಸಮರ್ಥ್

ಇಂದಿನ ಪಂದ್ಯಗಳು
ಹುಬ್ಬಳ್ಳಿ ಟೈಗರ್ಸ್– ಬೆಂಗಳೂರು ಬ್ಲಾಸ್ಟರ್ಸ್
ಮಧ್ಯಾಹ್ನ 3

**
ಶಿವಮೊಗ್ಗ ಲಯನ್ಸ್– ಬಿಜಾಪುರ ಬುಲ್ಸ್
ಸಂಜೆ 7

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT