ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಎಲ್‌: ‘ಪೀಣ್ಯ ಎಕ್ಸ್‌ಪ್ರೆಸ್‌’ ಅಭಿಮನ್ಯು ಮಿಥುನ್‌ ದಾಖಲೆ ಮೊತ್ತಕ್ಕೆ ಹರಾಜು

ಪೂಲ್‌ ‘ಬಿ’ಯಲ್ಲಿ ₹ 5.85 ಲಕ್ಷ ಮೊತ್ತಕ್ಕೆ ಬಿಕರಿಯಾದ ನಿದೀಶ್‌
Last Updated 23 ಜುಲೈ 2018, 10:15 IST
ಅಕ್ಷರ ಗಾತ್ರ

ಬೆಂಗಳೂರು: ಪೀಣ್ಯ ಎಕ್ಸ್‌ಪ್ರೆಸ್ ಖ್ಯಾತಿಯ ವೇಗದ ಬೌಲರ್‌ ಮತ್ತು ಸ್ಫೋಟಕ ಬ್ಯಾಟ್ಸ್‌ಮನ್ ಅಭಿಮನ್ಯು ಮಿಥುನ್‌ ಅವರು ಕರ್ನಾಟಕ ಪ್ರೀಮಿಯರ್ ಲೀಗ್‌ (ಕೆಪಿಎಲ್‌) ಹರಾಜಿನಲ್ಲಿ ಅತಿ ಹೆಚ್ಚು ಮೊತ್ತ ಗಳಿಸಿ ದಾಖಲೆ ಬರೆದರು.

ಚಿನ್ನಸ್ವಾಮಿ ಕ್ರೀಡಾಂಗಣದ ರಾಜ್ಯ ಕ್ರಿಕೆಟ್ ಸಂಸ್ಥೆ ಆವರಣದಲ್ಲಿ ಶನಿವಾರ ನಡೆದ ಹರಾಜು ಪ್ರಕ್ರಿಯೆಯಲ್ಲಿ ಅವರನ್ನು ಶಿವಮೊಗ್ಗ ಲಯನ್ಸ್ ತಂಡ ಖರೀದಿಸಿತು. ಈ ತಂಡ ಅವರಿಗಾಗಿ ₹ 8.30 ಲಕ್ಷ ವ್ಯಯಿಸಿತು. ಇದು ಕೆಪಿಎಲ್‌ನಲ್ಲಿ ಆಟಗಾರನೊಬ್ಬನಿಗೆ ಯಾವುದೇ ಫ್ರಾಂಚೈಸ್ ವೆಚ್ಚ ಮಾಡಿದ ಗರಿಷ್ಠ ಮೊತ್ತವಾಗಿದೆ. ಬಳ್ಳಾರಿ ಟಸ್ಕರ್ಸ್‌ ಮತ್ತು ಬೆಂಗಳೂರು ಬ್ಲಾಸ್ಟರ್ಸ್ ಕೂಡ ಮಿಥುನ್‌ಗಾಗಿ ಸಾಕಷ್ಟು ಬಿಡ್ ಸಲ್ಲಿಸಿತ್ತು. ಕೊನೆಗೆ ಶಿವಮೊಗ್ಗ ಫ್ರಾಂಚೈಸ್‌ಗೆ ಬಿಟ್ಟುಕೊಟ್ಟಿತು.

ಒಂದು ಆವೃತ್ತಿಯ ಬಿಡುವಿನ ನಂತರ ಕೆಪಿಎಲ್‌ಗೆ ಮರಳಿರುವ ಸ್ಫೋಟಕ ಬ್ಯಾಟ್ಸ್‌ ಮನ್ ಮತ್ತು ವಿಕೆಟ್ ಕೀಪರ್ ರಾಬಿನ್‌ ಉತ್ತಪ್ಪ ಅವರ ಬಗ್ಗೆ ತೀವ್ರ ಕುತೂಹಲ ಮೂಡಿತ್ತು. ಅವರನ್ನು ಬೆಂಗಳೂರು ಬ್ಲಾಸ್ಟರ್ಸ್ ತಂಡ ಅವರನ್ನು ₹ 7.90 ಲಕ್ಷ ತೆತ್ತು ತನ್ನ ತೆಕ್ಕೆಗೆ ಸೇರಿಸಿಕೊಂಡಿತು.

ಕಳೆದ ಬಾರಿ ದಾಖಲೆ ಮೊತ್ತಕ್ಕೆ ಹರಾಜಾಗಿದ್ದ ಆಟಗಾರರ ಪೈಕಿ ಒಬ್ಬ ರಾಗಿದ್ದ ಅಮಿತ್ ವರ್ಮಾ ಈ ಬಾರಿಯೂ ಉತ್ತಮ ಬೆಲೆ ಪಡೆದುಕೊಂಡರು. ₹ 7.60 ಲಕ್ಷ ನೀಡಿ ಮೈಸೂರು ವಾರಿಯರ್ಸ್ ತಂಡ ತನ್ನದಾಗಿಸಿಕೊಂಡಿತು. ವೇಗದ ಬೌಲರ್‌ ಟಿ.ಪ್ರದೀ‍ಪ್ ₹.6.50 ಲಕ್ಷ ಮೊತ್ತಕ್ಕೆ ಬಳ್ಳಾರಿ ಟಸ್ಕರ್ಸ್ ಪಾಲಾದರು.

ಪೂಲ್ ‘ಬಿ’ ವಿಭಾಗದಲ್ಲೂ ಆಟಗಾರರು ಉತ್ತಮ ಮೌಲ್ಯ ಪಡೆದುಕೊಂಡರು. ಈ ವಿಭಾಗದಲ್ಲಿ ನಿದೀಶ್‌ ಅತಿ ಹೆಚ್ಚು ಬೆಲೆಗೆ ಹರಾಜಾದರು. ₹ 5.85 ಲಕ್ಷ ನೀಡಿ ಬೆಳಗಾವಿ ಪ್ಯಾಂಥರ್ಸ್‌ ಖರೀದಿಸಿತು.

ಯುವ ಆಟಗಾರರಿಗೆ ಬೇಡಿಕೆ: ಯುವ ಮತ್ತು ಕೆಪಿಎಲ್‌ನಲ್ಲಿ ಪಳಗಿದ ಆಟಗಾರರನ್ನು ತಂಡಗಳ ಪಾಲಾಗಿಸಲು ಎಲ್ಲ ಫ್ರಾಂಚೈಸ್‌ನವರು ಕೂಡ ಮುಗಿ ಬಿದ್ದರು. ಹೀಗಾಗಿ ಕೆ.ಬಿ.ಪವನ್‌, ಅರ್ಜುನ್ ಹೊಯ್ಸಳ, ಸುನಿಲ್ ರಾಜು, ಕೆ.ಪಿ.ಅಪ್ಪಣ್ಣ, ಅಬ್ರಾರ್ ಕಾಜಿ, ಸ್ವಪ್ನಿಲ್ ಯಳವೆ ಮುಂತಾದವರು ಉತ್ತಮ ಬೆಲೆ ಪಡೆದರು. ಭಾರತ ತಂಡದಲ್ಲಿರುವ ಮತ್ತು ಭಾರತ ‘ಎ’ ತಂಡದಲ್ಲಿ ಆಡಲು ಅವಕಾಶ ಪಡೆಯುವ ಹಾದಿಯಲ್ಲಿರುವ ರಾಜ್ಯದ ಕೆಲ ಪ್ರಮುಖ ಆಟಗಾರರತ್ತ ಫ್ರಾಂಚೈಸ್‌ಗಳು ಒಲವು ತೋರಲಿಲ್ಲ. ಮಯಂಕ್‌ ಅಗರವಾಲ್ ಮತ್ತು ಪ್ರಸಿದ್ಧ ಕೃಷ್ಣ ಅವರನ್ನು ಮೊದಲ ಹಂತದಲ್ಲಿ ಖರೀದಿಸದೆ ನಂತರ ಕಡಿಮೆ ಬೆಲೆಗೆ ಪಡೆದುಕೊಂಡರು.

ವಾರಿಯರ್ಸ್‌ಗೆ 16 ಆಟಗಾರರು
ಮೈಸೂರು ವಾರಿಯರ್ಸ್ ಹರಾಜಿನಲ್ಲಿ ಕೇವಲ 12 ಆಟಗಾರರನ್ನು ಮಾತ್ರ ಪಡೆದುಕೊಂಡಿತು. ಉಳಿಸಿಕೊಂಡ ನಾಲ್ವರು ಆಟಗಾರರು ಸೇರಿದಾಗ ತಂಡದ ಬಳಿ ಇರುವುದು 16 ಆಟಗಾರರು ಮಾತ್ರ. ಪ್ರತಿ ತಂಡಕ್ಕೆ 18 ಆಟಗಾರರನ್ನು ಖರೀದಿಸುವ ಅವಕಾಶವಿತ್ತು. ತಂಡದಲ್ಲಿ ಕನಿಷ್ಠ 15 ಆಟಗಾರರು ಇರಬೇಕು. ವಾರಿರ್ಸ್ ಹೊರತುಪಡಿಸಿ ಇತರ ಎಲ್ಲ ಫ್ರಾಂಚೈಸ್‌ಗಳು 18 ಆಟಗಾರರನ್ನು ಹೊಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT