ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿನ್‌ ತೆಂಡೂಲ್ಕರ್‌ಗೆ ಪ್ರತಿಷ್ಠಿತ ಲಾರೆಸ್‌ ಕ್ರೀಡಾ ಪ್ರಶಸ್ತಿ ಗೌರವ

ಸೋಮವಾರ ರಾತ್ರಿ ನಡೆದ ವರ್ಣರಂಜಿತ ಸಮಾರಂಭ
Last Updated 18 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಬರ್ಲಿನ್‌: ಭಾರತದ ಹಿರಿಯ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ ಅವರು ಪ್ರತಿಷ್ಠಿತ ಲಾರೆಸ್‌ ಕ್ರೀಡಾ ಪ್ರಶಸ್ತಿ ಪಡೆದಿದ್ದಾರೆ.

ಭಾರತ ತಂಡವು 2011ರಲ್ಲಿ ಏಕದಿನ ವಿಶ್ವಕಪ್‌ ಗೆದ್ದ ಬಳಿಕ ಸಹ ಆಟಗಾರರು ಸಚಿನ್‌ ಅವರನ್ನು ಹೆಗಲ ಮೇಲೆ ಹೊತ್ತು ಕ್ರೀಡಾಂಗಣ ಸುತ್ತು ಹಾಕಿದ್ದರು. ಈ ಘಳಿಗೆಗೆ ‘ಲಾರೆಸ್‌ ಸ್ಪೋರ್ಟಿಗ್‌ ಮೋಮೆಂಟ್ 2000–2020 (ಕ್ರೀಡಾ ಕ್ಷಣ)’ ಪುರಸ್ಕಾರ ಒಲಿದಿದೆ.

ಸೋಮವಾರ ರಾತ್ರಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಆಸ್ಟ್ರೇಲಿಯಾದ ಹಿರಿಯ ಕ್ರಿಕೆಟಿಗ ಸ್ಟೀವ್ ವಾ ಅವರು ಸಚಿನ್‌ಗೆ ಪ್ರಶಸ್ತಿ ಪ್ರದಾನ ಮಾಡಿದರು.

‘ಇದು ವಿಶೇಷ ಕ್ಷಣ. ವಿಶ್ವಕಪ್‌ನಲ್ಲಿ ಪ್ರಶಸ್ತಿ ಗೆದ್ದದ್ದು ಅವಿಸ್ಮರಣೀಯ ಸಾಧನೆ. ಆಗ ಆದ ಸಂತಸ ಪದಗಳಿಗೆ ನಿಲುಕದ್ದು. ಆ ಸಾಧನೆಯನ್ನು ಇಡೀ ದೇಶವೇ ಸಂಭ್ರಮಿಸಿತ್ತು’ ಎಂದು ಸಚಿನ್‌ ಹೇಳಿದ್ದಾರೆ.

‘1983ರ ವಿಶ್ವಕಪ್‌ನಲ್ಲಿ ಭಾರತವು ಟ್ರೋಫಿ ಗೆದ್ದಾಗ ದೇಶದೆಲ್ಲೆಡೆ ಸಂಭ್ರಮಾಚರಣೆ ನಡೆದಿತ್ತು. ಆಗ ನನಗೆ 10 ವರ್ಷ ವಯಸ್ಸು. ಕಪಿಲ್‌ ದೇವ್‌ ಪಡೆ ವಿಶ್ವಕಪ್‌ ಜಯಿಸಿದ್ದಕ್ಕಾಗಿ ಜನ ಅಷ್ಟೊಂದು ಸಂಭ್ರಮಿಸುತ್ತಿದ್ದಾರೆ ಎಂಬುದು ತಿಳಿದಿರಲಿಲ್ಲ. ಹೀಗಿದ್ದರೂ ಅವರ ಖುಷಿಯಯಲ್ಲಿ ಭಾಗಿಯಾಗಿದ್ದೆ’ ಎಂದು ಬಾಲ್ಯದ ದಿನಗಳನ್ನು ಮೆಲುಕು ಹಾಕಿದ್ದಾರೆ.

‘ಸತತ ಐದು ಬಾರಿ ವಿಶ್ವಕಪ್‌ನಲ್ಲಿ ಆಡಿದರೂ ಪ್ರಶಸ್ತಿ ಎತ್ತಿಹಿಡಿಯುವ ಕನಸು ಕೈಗೂಡಿರಲಿಲ್ಲ. ಹಾಗಂತ ಎದೆಗುಂದಲಿಲ್ಲ. 22 ವರ್ಷಗಳ ಕ್ರೀಡಾ ಬದುಕಿನ ಬಹುದೊಡ್ಡ ಕನಸು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಸಾಕಾರವಾಯಿತು. ವಿಶ್ವಕಪ್‌ ಟ್ರೋಫಿ ಎತ್ತಿ ಹಿಡಿದಿದ್ದು ನನ್ನ ಜೀವನದ ಅತ್ಯಂತ ಹೆಮ್ಮೆಯ ಕ್ಷಣ’ ಎಂದಿದ್ದಾರೆ.

ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ, ಸಚಿನ್‌ ಅವರನ್ನು ಅಭಿನಂದಿಸಿದ್ದಾರೆ.

‘ಪ್ರತಿಷ್ಠಿತ ಲಾರೆಸ್‌ ಪ್ರಶಸ್ತಿ ಪಡೆದಿದ್ದಕ್ಕೆ ಅಭಿನಂದನೆಗಳು ಸಚಿನ್‌ ಪಾಜಿ. ಇದು ಅವಿಸ್ಮರಣೀಯ ಕ್ಷಣ. ನಿಮ್ಮ ಸಾಧನೆ ಇಡಿ ದೇಶವೇ ಹೆಮ್ಮೆ ಪಡುವಂತಹದ್ದು’ ಎಂದು ಟ್ವೀಟ್‌ ಮಾಡಿದ್ದಾರೆ.

ಮೆಸ್ಸಿಗೆ ಗೌರವ: ಅರ್ಜೆಂಟೀನಾದ ಫುಟ್‌ಬಾಲ್‌ ತಾರೆ ಲಯೊನೆಲ್‌ ಮೆಸ್ಸಿ ಮತ್ತು ಬ್ರಿಟನ್‌ನ ಫಾರ್ಮುಲಾ ಒನ್‌ ಚಾಲಕ ಲೂಯಿಸ್‌ ಹ್ಯಾಮಿಲ್ಟನ್‌ ಅವರು ‘ವರ್ಷದ ಶ್ರೇಷ್ಠ ಕ್ರೀಡಾಪಟು’ ಗೌರವ ಪಡೆದಿದ್ದಾರೆ. ಇಬ್ಬರಿಗೂ ಸಮಾನ ಮತಗಳು ಲಭಿಸಿದ್ದರಿಂದ ಜಂಟಿಯಾಗಿ ಪ್ರಶಸ್ತಿ ನೀಡಲಾಗಿದೆ. ಮೆಸ್ಸಿ ಅವರು ಅನಿವಾರ್ಯ ಕಾರಣಗಳಿಂದಾಗಿ ಸಮಾರಂಭಕ್ಕೆ ಹಾಜರಾಗಲಿಲ್ಲ.

ಮೆಸ್ಸಿ ಮತ್ತು ಹ್ಯಾಮಿಲ್ಟನ್‌ ಅವರು ಪ್ರಶಸ್ತಿಯ ಹಾದಿಯಲ್ಲಿ ಅಮೆರಿಕದ ಗಾಲ್ಫರ್‌ ಟೈಗರ್‌ ವುಡ್ಸ್‌, ಕೀನ್ಯಾದ ಮ್ಯಾರಥಾನ್‌ ಓಟಗಾರ ಎಲ್ಯೂಡ್‌ ಕಿಪ್‌ಚೋಗ್‌, ಸ್ಪೇನ್‌ನ ಟೆನಿಸ್‌ ತಾರೆ ರಫೆಲ್‌ ನಡಾಲ್‌ ಮತ್ತು ಮೋಟೊ ಜಿಪಿ ಚಾಂಪಿಯನ್‌ ಮಾರ್ಕ್‌ ಮಾರ್ಕ್ವೆಜ್‌ ಅವರನ್ನು ಹಿಂದಿಕ್ಕಿದರು.

ಅಮೆರಿಕದ ಜಿಮ್ನಾಸ್ಟಿಕ್‌ ಪಟು ಸಿಮೊನಾ ಬೈಲ್ಸ್‌ ಅವರು ‘ವರ್ಷದ ಶ್ರೇಷ್ಠ ಮಹಿಳಾ ಕ್ರೀಡಾಪಟು’ ಪ್ರಶಸ್ತಿ ಪಡೆದರು. ಅವರಿಗೆ ಲಭಿಸಿದ ಮೂರನೇ ಪ್ರಶಸ್ತಿ ಇದಾಗಿದೆ. 2017 ಮತ್ತು 2019ರಲ್ಲೂ ಅವರು ಈ ಗೌರವಕ್ಕೆ ಪಾತ್ರರಾಗಿದ್ದರು.

ಸಿಮೊನಾ ಅವರು ಜಮೈಕಾದ ಸ್ಪ್ರಿಂಟರ್‌ ಶೆಲ್ಲಿ ಆ್ಯನ್‌ ಫ್ರೇಸರ್‌, ಅಮೆರಿಕದ ಫುಟ್‌ಬಾಲ್‌ ಆಟಗಾರ್ತಿ ಮೇಗನ್‌ ರಾಪಿನೋ, ಜಪಾನ್‌ನ ಟೆನಿಸ್‌ ಆಟಗಾರ್ತಿ ನವೊಮಿ ಒಸಾಕ, ಅಮೆರಿಕದ ಟ್ರ್ಯಾಕ್‌ ಮತ್ತು ಫೀಲ್ಡ್‌ ಅಥ್ಲೀಟ್‌ ಅಲಿಸನ್‌ ಫೆಲಿಕ್ಸ್‌ ಮತ್ತು ಸ್ಕೀಯಿಂಗ್‌ ಪಟು ಮೈಕೆಲಾ ಶಿಫ್ರಿನ್‌ ಅವರಿಗಿಂತಲೂ ಹೆಚ್ಚು ಮತಗಳನ್ನು ಪಡೆದರು.

ಇತ್ತೀಚೆಗೆ ಹೆಲಿಕಾಪ್ಟರ್‌ ದುರಂತದಲ್ಲಿ ನಿಧನರಾದ ಅಮೆರಿಕದ ಬ್ಯಾಸ್ಕೆಟ್‌ಬಾಲ್‌ ಆಟಗಾರ ಕೋಬಿ ಬ್ರಯಾಂಟ್‌ ಅವರಿಗೆ ಕಾರ್ಯಕ್ರಮದ ವೇಳೆ ಗೌರವ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT