ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಸ್ಟ್‌ ಕೇಂದ್ರಗಳು ಐದಕ್ಕೆ ಸೀಮಿತಗೊಳ್ಳಲಿ: ಕೊಹ್ಲಿ

ಇಂಗ್ಲೆಂಡ್‌, ಆಸ್ಟ್ರೇಲಿಯಾ ಮಾದರಿಗೆ ಸಲಹೆ
Last Updated 22 ಅಕ್ಟೋಬರ್ 2019, 17:44 IST
ಅಕ್ಷರ ಗಾತ್ರ

ರಾಂಚಿ: ‘ಭಾರತದಲ್ಲೂ ಐದು ಟೆಸ್ಟ್‌ ಕೇಂದ್ರಗಳನ್ನು ಗುರುತಿಸಿ ಅಲ್ಲಿಯೇ ಪ್ರವಾಸಿ ತಂಡಗಳ ವಿರುದ್ಧ ಶಾಶ್ವತವಾಗಿ ಪಂದ್ಯಗಳನ್ನು ನಡೆಸಬೇಕು. ಈ ನಿಟ್ಟಿನಲ್ಲಿ ಯೋಚಿಸಲು ಬಿಸಿಸಿಐಗೆ ಇದು ಸಕಾಲ’ ಎಂದು ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಅಭಿಪ್ರಾಯಪಟ್ಟರು.

ಇಂಗ್ಲೆಂಡ್‌, ಆಸ್ಟ್ರೇಲಿಯಾದಲ್ಲಿ ಮಾತ್ರ ಈ ರೀತಿ ಶಾಶ್ವತ ಟೆಸ್ಟ್‌ ಕೇಂದ್ರಗಳಿವೆ.ಆಸ್ಟ್ರೇಲಿಯಾದಲ್ಲಿ ಪ್ರವಾಸಿ ತಂಡಗಳು ಮೆಲ್ಬರ್ನ್‌, ಸಿಡ್ನಿ, ಪರ್ತ್‌, ಬ್ರಿಸ್ಬೇನ್‌, ಅಡಿಲೇಡ್‌– ಈ ಐದು ಕಡೆ ಮಾತ್ರ ಪಂದ್ಯಗಳನ್ನು ನಡೆಯುತ್ತವೆ. ಇಂಗ್ಲೆಂಡ್‌ನಲ್ಲಿ ಏಳು ಕಡೆ (ಲಾರ್ಡ್ಸ್‌, ಓವಲ್‌, ಟ್ರೆಂಟ್‌ಬ್ರಿಜ್‌, ಓಲ್ಡ್‌ ಟ್ರಾಫರ್ಡ್‌, ಎಜ್‌ಬಾಸ್ಟನ್‌, ಸೌತಾಂಪ್ಟನ್‌ ಮತ್ತು ಹೆಡಿಂಗ್ಲೇ) ಮಾತ್ರ ಟೆಸ್ಟ್‌ ಪಂದ್ಯಗಳು ನಡೆಯುತ್ತವೆ.

ರಾಂಚಿಯಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯಕ್ಕೆ ಪ್ರೇಕ್ಷಕರ ನಿರುತ್ಸಾಹದ ಪ್ರತಿಕ್ರಿಯೆ ಬಗ್ಗೆ ಕೇಳಿದಾಗ, ‘ಇದರ ಬಗ್ಗೆ ದೀರ್ಘ ಸಮಯದಿಂದ ಚರ್ಚಿಸಲಾಗುತ್ತಿದೆ. ನನ್ನ ಪ್ರಕಾರ ದೇಶದಲ್ಲಿ ಐದು ಟೆಸ್ಟ್‌ ಕೇಂದ್ರಗಳಿದ್ದರೆ ಸಾಕು’ ಎಂದು ಉತ್ತರಿಸಿದರು.

‘ಟೆಸ್ಟ್‌ ಕ್ರಿಕೆಟ್‌ ಜೀವಂತಿಕೆ ಮತ್ತು ಕುತೂಹಲ ಉಳಿಸಿಕೊಳ್ಳಬೇಕಾದರೆ, ಗರಿಷ್ಠ ಐದು ಟೆಸ್ಟ್‌ ಕೇಂದ್ರಗಳಿದ್ದರೆ ಮಾತ್ರ ಸಾಕು. ದೇಶದ ಹಲವು ಕಡೆ ಕ್ರೀಡಾಂಗಣಗಳು ಇದ್ದರೆ ಜನರು ಬರಬಹುದು ಅಥವಾ ಬರದೇ ಇರಬಹುದು’ ಎಂದರು. ದೇಶದಲ್ಲಿ ಈಗ 15 ಟೆಸ್ಟ್‌ ಕೇಂದ್ರಗಳಿವೆ.

‘ಟಿ–20 ಮತ್ತು ಏಕದಿನ ಪಂದ್ಯ ಗಳನ್ನು ರೊಟೇಷನ್‌ ಮಾದರಿಯಲ್ಲಿ ನಡೆಸಿದರೆ ಸಮಸ್ಯೆಯಿಲ್ಲ’ ಎಂದರು.

‘ಭಾರತ ಪ್ರವಾಸದಿಂದ ಮನಕ್ಷೋಭೆ’

ಭಾರತ ಕ್ರಿಕೆಟ್‌ ತಂಡದ ನಿರ್ದಯ ಪ್ರದರ್ಶನದಿಂದ ದಕ್ಷಿಣ ಆಫ್ರಿಕಾ ಮನೋಬಲಕ್ಕೆ ಪೆಟ್ಟುಬಿದ್ದಿದೆ. ‘ತಂಡ ಈಗ ಮನಕ್ಷೋಭೆಯಿಂದ ತವರಿಗೆ ಮರಳಲಿದೆ’ ಎಂದು ನಾಯಕ ಫಾಫ್‌ ಡುಪ್ಲೆಸಿ ಹೇಳಿದ್ದಾರೆ.

ಟೆಸ್ಟ್‌ ಸರಣಿಯ ಮೂರೂ ಪಂದ್ಯಗಳನ್ನು ಭಾರತ ಭಾರಿ ಅಂತರದಿಂದ ಗೆದ್ದುಕೊಂಡಿತ್ತು. ‘ಇಂಥ ನಿರಾಶಾದಾಯಕ ಪ್ರವಾಸದಿಂದ ಮನಸ್ಸಿಗೆ ಗಾಯ ಉಂಟಾಗುತ್ತದೆ. ಇದು ಬೇಗ ವಾಸಿಯಾವುದೂ ಕಷ್ಟ’ ಎಂದು ಮಂಗಳವಾರದ ಸೋಲಿನ ನಂತರ ಅವರು ಪ್ರತಿಕ್ರಿಯಿಸಿದರು.

‘ಭಾರತ ತಂಡ ಆಕ್ರಮಣಕಾರಿಯಾಗಿ ಆಡಿ ನಮ್ಮ ವಿರುದ್ಧ ಪ್ರತೀ ಪಂದ್ಯದಲ್ಲಿ ಬೃಹತ್‌ ಮೊತ್ತ ಪೇರಿಸಿತು. ಇದು ನಮ್ಮನ್ನು ಜರ್ಝರಿತಗೊಳಿಸಿತು. ಕೊನೆಯಲ್ಲಂತೂ ನಮ್ಮ ಬ್ಯಾಟ್ಸಮನ್ನರ ಮನೋಬಲವೇ ಕುಸಿದುಹೋಯಿತು’ ಎಂದು ಹೇಳಿದರು.

ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಡುಪ್ಲೆಸಿ, ‘ನಾವು ಸೂಕ್ತ ಯೋಜನೆಯನ್ನೂ ರೂಪಿಸಿಲ್ಲ ಎಂಬುದನ್ನುಈ ಪ್ರವಾಸ ತೆರೆದಿಟ್ಟಿತು. ಶ್ರೇಷ್ಠ ಆಟಗಾರರಾದ ಹಾಶಿಂ ಆಮ್ಲ, ಎ.ಬಿ.ಡಿ ವಿಲಿಯರ್ಸ್‌, ನಿವೃತ್ತರಾದ ನಂತರ ಭವಿಷ್ಯದ ಕಡೆ ಯೋಚನೆ ಮಾಡಲೇ ಇಲ್ಲ’ ಎಂದು ಹೇಳಿದರು.ಹಿರಿಯ ವೇಗಿ ಡೇಲ್‌ ಸ್ಟೇನ್‌ ಅವರ ನಿವೃತ್ತಿ ಕೂಡ ಕಾಡುತ್ತಿರುವುದಾಗಿ ತಿಳಿಸಿದರು.

‘ಸರಿಯಾದ ಯೋಜನೆ ರೂಪಿಸುವಲ್ಲಿ ನಾವು ಎಡವಿದ್ದೇವೆ. ನಾಲ್ಕೈದು ಒಳ್ಳೆಯ ಆಟಗಾರರು ಏಕಕಾಲಕ್ಕೆ ನಿರ್ಗಮಿಸುವ ಹಂತದಲ್ಲಿದ್ದಾಗ ಸೂಕ್ತ ಬದಲಾವಣೆಯ ಬಗ್ಗೆ ಯೋಚನೆ ಮಾಡಬೇಕಾಗಿತ್ತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT