ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈದರಾಬಾದ್‌ನಲ್ಲಿ ಮೊದಲ ಟೆಸ್ಟ್‌ | ಪಿಚ್‌ ಸ್ಪಿನ್‌ ಸ್ನೇಹಿಯಾಗಬಹುದು: ದ್ರಾವಿಡ್

Published 23 ಜನವರಿ 2024, 23:30 IST
Last Updated 23 ಜನವರಿ 2024, 23:30 IST
ಅಕ್ಷರ ಗಾತ್ರ

ಹೈದರಾಬಾದ್: ಇಂಗ್ಲೆಂಡ್ ವಿರುದ್ಧ ಗುರುವಾರ ಇಲ್ಲಿ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ಇಲ್ಲಿನ ಪಿಚ್‌ ‘ಉತ್ತಮವಾಗಿದೆ’. ಆದರೆ ದಿನಕಳೆದಂತೆ ಪಿಚ್‌ ಸ್ಪಿನ್ನರ್‌ಗಳಿಗೆ ನೆರವಾಗಬಹುದು ಎಂದು ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್‌ ಅಭಿಪ್ರಾಯಪಟ್ಟರು.

ಪಿಚ್‌ನ ಎರಡೂ ಕಡೆ ಗುಡ್‌ ಲೆಂಗ್ತ್‌ ಪ್ರದೇಶ ಸಪಾಟಾಗಿದೆ. ‘ಪಿಚ್‌ ಹೇಗೆ ವರ್ತಿಸಬಹುದು ಎಂಬುದನ್ನು ಈಗಲೇ ಹೇಳುವುದು ಕಷ್ಟ. ಪಂದ್ಯ ಆರಂಭಕ್ಕೆ ಮುನ್ನ ಮತ್ತೊಮ್ಮೆ ಪರಿಶೀಲನೆ ನಡೆಸುತ್ತೇವೆ. ನನಗೆ ಪಿಚ್‌ ಉತ್ತಮವಾಗಿರುವಂತೆ ಕಾಣುತ್ತಿದೆ’ ಎಂದು ಮಂಗಳವಾರ ಮಾಧ್ಯಮ ಸಂವಾದದ ವೇಳೆ ದ್ರಾವಿಡ್‌ ಹೇಳಿದರು.

‘ಆದರೆ ಪಿಚ್‌ ಸ್ಪಿನ್‌ಗೂ ನೆರವಾಗಬಹುದು. ಎಷ್ಟು ಬೇಗ ಎಂದು ಖಚಿತವಾಗಿ ಹೇಳಲಾಗದು. ಪಂದ್ಯ ಸಾಗಿದಂತೆ ಸ್ಪಿನ್ನರ್‌ಸ್ನೇಹಿಯಾಗಬಹುದು’ ಎಂದು ಅವರು ವಿಶ್ಲೇಷಿಸಿದರು.

ಪಿಚ್‌ ವರ್ತನೆ ಬಗ್ಗೆ ಇಂಗ್ಲೆಂಡ್‌ ಪಾಳೆಯದಲ್ಲೂ ಚರ್ಚೆಯಾಗಿದೆ ಎಂದು ಆ ತಂಡದ ವೇಗದ ಬೌಲರ್‌ ಮಾರ್ಕ್‌ ವುಡ್‌ ಒಪ್ಪಿಕೊಂಡರು. ‘ನಿಜ, ಪಿಚ್‌ ಬಗ್ಗೆ ನಮ್ಮಲ್ಲಿ ಚರ್ಚೆಯಾಗಿದೆ. ಆದರೆ ಆ ಬಗ್ಗೆಯೇ ದೀರ್ಘವಾಗಿ ಚರ್ಚಿಸಿ ತಲೆಕೆಡಿಸಿಕೊಳ್ಳಲು ಹೋಗಿಲ್ಲ. ನಮ್ಮ ತಂಡದ ಬಗ್ಗೆ ನಮಗೆ ಆತ್ಮವಿಶ್ವಾಸವಿದ್ದು, ವಿಶೇಷವಾದುದನ್ನು ಸಾಧಿಸುವ ಧೈರ್ಯವಿದೆ. ನಮ್ಮಲ್ಲಿ ಸ್ಪಿನ್ನರ್‌ಗಳಿದ್ದಾರೆ. ವೇಗಿಗಳಿದ್ದಾರೆ. ಉತ್ತಮ ಬ್ಯಾಟರ್‌ಗಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಉತ್ತಮವಾಗಿ ಆಡಿದ ಹಿನ್ನೆಲೆಯಿದೆ’ ಎಂದು ಅವರು ಹೇಳಿದರು.

ಭಾರತ ತಂಡವನ್ನು ತವರಿನಲ್ಲೇ ಸೋಲಿಸಿದ ಕೊನೆಯ ತಂಡ ಇಂಗ್ಲೆಂಡ್‌. 2012ರಲ್ಲಿ ಆಲಿಸ್ಟರ್ ಕುಕ್ ನೇತೃತ್ವದ ಇಂಗ್ಲೆಂಡ್ ತಂಡ 2–1 ರಿಂದ ಭಾರತ ತಂಡವನ್ನು ಸೋಲಿಸಿತ್ತು.

‘ಬಾಝ್‌ಬಾಲ್’ ಶೈಲಿಗೆ ಒತ್ತು: ಇಂಗ್ಲೆಂಡ್‌ ತಂಡ ಈ ಪ್ರವಾಸದಲ್ಲೂ ಆಕ್ರಮಣಕಾರಿ ಶೈಲಿಯ ‘ಬಾಝ್‌ ಬಾಲ್’ ಕ್ರಿಕೆಟ್ ಆಡಲಿದೆ ಎಂದು ವುಡ್‌ ತಿಳಿಸಿದರು.

ಇಂಗ್ಲೆಂಡ್‌ ಕೋಚ್‌ ಆಗಿರುವ ನ್ಯೂಜಿಲೆಂಡ್‌ನ ಮಾಜಿ ನಾಯಕ ಬ್ರೆಂಡನ್ ಮೆಕ್ಕಲಂ, ನಾಯಕ ಬೆನ್ ಸ್ಟೋಕ್ಸ್ ಅವರು ಕಂಡುಕೊಂಡ ಆಕ್ರಮಣಕಾರಿ ಶೈಲಿಯ ಆಟವನ್ನು ‘ಬಾಝ್‌ಬಾಲ್’ ಎನ್ನಲಾಗುತ್ತಿದೆ. ಮೆಕ್ಕಲಂ ಅವರ ಅಡ್ಡಹೆಸರು ಇದು.

ಆದರೆ ಇಂಗ್ಲೆಂಡ್‌ ತಂಡದ ಆಕ್ರಮಣಕಾರಿ ಶೈಲಿಯ ಆಟಕ್ಕೆ ಪ್ರತಿತಂತ್ರ ಹೂಡಲು ತಂಡ ಸಮರ್ಥವಾಗಿದೆ ಎಂಬ ವಿಶ್ವಾಸವಿದೆ ಎಂದು ದ್ರಾವಿಡ್ ಹೇಳಿದರು.

ಅವರು ತುಂಬಾ ಚೆನ್ನಾಗಿ ಆಡಿದ್ದಾರೆ. ಆಕ್ರಮಣಕಾರಿ ರೀತಿಯ ಆಟದಿಂದ ಅವರು ಯಶಸ್ಸನ್ನೂ ಪಡೆದಿದ್ದಾರೆ. ಆದರೆ ಅವರಿಗೆ ಭಾರತದ ಪರಿಸ್ಥಿತಿಯಲ್ಲಿ ಆಡುವುದು ಸವಾಲಾಗಲಿದೆ ಎಂದು ದ್ರಾವಿಡ್ ಹೇಳಿದರು.

ಭಾರತ ತಂಡದ ತಾರಾ ವರ್ಚಸ್ಸಿನ ಆಟಗಾರ ವಿರಾಟ್ ಕೊಹ್ಲಿ ವೈಯಕ್ತಿಕ ಕಾರಣಗಳಿಂದ ಮೊದಲ ಎರಡು ಟೆಸ್ಟ್‌ಗಳಿಂದ ಹಿಂದೆ ಸರಿದಿರುವುದು ಆತಿಥೇಯ ತಂಡಕ್ಕೆ ಸ್ವಲ್ಪ ಹಿನ್ನಡೆ ಎನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT