ಬೆಂಗಳೂರು: ಸಿ.ಎ.ಕಾರ್ತಿಕ್ (30 ಮತ್ತು 32ಕ್ಕೆ3) ಅವರ ಆಲ್‌ರೌಂಡ್ ಆಟದ ನೆರವಿನಿಂದ ಮೈಸೂರು ವಾರಿಯರ್ಸ್ ತಂಡ, ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿ ಪಂದ್ಯದಲ್ಲಿ ಗುರುವಾರ ಶಿವಮೊಗ್ಗ ಲಯನ್ಸ್ ತಂಡವನ್ನು 28 ರನ್‌ಗಳಿಂದ ಸೋಲಿಸಿತು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬ್ಯಾಟ್ ಮಾಡಲು ಕಳಿಸಲ್ಪಟ್ಟ ಮೈಸೂರು ವಾರಿಯರ್ಸ್ 7 ವಿಕೆಟ್‌ಗೆ 179 ರನ್‌ಗಳ ಹೋರಾಟದ ಮೊತ್ತ ಗಳಿಸಿತು. ಇದಕ್ಕೆ ಉತ್ತರವಾಗಿ ಶಿವಮೊಗ್ಗ ಲಯನ್ಸ್ 9 ವಿಕೆಟ್‌ಗೆ 151 ರನ್ ಗಳಿಸಲಷ್ಟೇ ಶಕ್ತವಾಯಿತು. ನಾಲ್ಕನೇ ಗೆಲುವಿನೊಡನೆ ಮೈಸೂರು ಎಂಟು ಪಾಯಿಂಟ್ಸ್ ಗಳಿಸಿತು. ಆರು ಪಂದ್ಯಗಳನ್ನು ಆಡಿರುವ ಶಿವಮೊಗ್ಗ ಇನ್ನೂ ಪಾಯಿಂಟ್ಸ್ ಖಾತೆ ತೆರೆದಿಲ್ಲ.
ಆರಂಭ ಆಟಗಾರ ಸಿ.ಎ.ಕಾರ್ತಿಕ್ 30 ರನ್ (23ಎ) ಗಳಿಸಿದರೆ, ನಾಯಕ ಕರುಣ್ ನಾಯರ್ 45 (23ಎ, 4x6, 6x2) ಅಗ್ರ ಕ್ರಮಾಂಕದಲ್ಲಿ ಉಪಯುಕ್ತ ಕೊಡುಗೆ ನೀಡಿದರು. ವಿಕೆಟ್ ಕೀಪರ್ ಸುಮಿತ್ ಕುಮಾರ್ (28, 23), ಮನೋಜ್ ಭಾಂಡಗೆ (23, 7ಎ) ಮತ್ತು ಜೆ.ಸುಚಿತ್ (ಅಜೇಯ 22, 8ಎ) ಕೊನೆಯಲ್ಲಿ ಬಿರುಸಿನ ಆಟದಿಂದ ತಂಡ ಉತ್ತಮ ಮೊತ್ತ ಕಲೆಹಾಕಲು ನೆರವಾದರು. ವೇಗದ ಬೌಲರ್ ಎಚ್.ಎಸ್.ಶರತ್ 29 ರನ್ನಿಗೆ 4 ವಿಕೆಟ್ ಪಡೆದರು.
ಶಿವಮೊಗ್ಗ ಲಯನ್ಸ್ ಪರ ನಾಯಕ ನಿಹಾಲ್ ಉಳ್ಳಾಲ್ (46, 38ಎ) ಮತ್ತು ಅಭಿನವ್ ಮನೋಹರ್ (46, 29ಎ, 4x3, 6x4) ಮಾತ್ರ ಹೋರಾಟ ತೋರಿದರು. ವೇಗದ ಬೌಲರ್ ವಿದ್ಯಾಧರ ಪಾಟೀಲ ಮೊದಲ ಓವರ್‌ನಲ್ಲೇ ಸತತ ಎಸೆತಗಳಲ್ಲಿ ಮೋಹಿತ್ ಬಿ.ಎ. ಮತ್ತು ಧೀರಜ್ ಮೋಹನ್ (0) ವಿಕೆಟ್‌ಗಳನ್ನು ಪಡೆದರು. ನಿಹಾಲ್ ಮತ್ತು ಉತ್ತಮ ಲಯದಲ್ಲಿರುವ ಅಭಿನವ್ ಜೋಡಿ ಐದನೇ ವಿಕೆಟ್‌ಗೆ 70 ರನ್ (43ಎ) ಸೇರಿಸಿ ಸ್ಥಿರತೆ ಒದಗಿಸಿದರು. ಉಳಿದ ಬ್ಯಾಟರ್‌ಗಳು ಉತ್ತಮ ಪ್ರದರ್ಶನ ನೀಡಲು ವಿಫಲರಾದರು.
ಸಂಕ್ಷಿಪ್ತ ಸ್ಕೋರು: ಮೈಸೂರು ವಾರಿಯರ್ಸ್: 20 ಓವರುಗಳಲ್ಲಿ 7 ವಿಕೆಟ್‌ಗೆ 179 (ಕಾರ್ತಿಕ್ ಸಿ.ಎ. 30, ಕರುಣ್ ನಾಯರ್ 45, ಸುಮಿತ್ ಕುಮಾರ್ 28, ಮನೋಜ್ ಭಾಂಡಗೆ 23, ಜೆ.ಸುಚಿತ್ ಔಟಾಗದೇ 22; ಎಸ್.ಎಸ್.ಶರತ್ 29ಕ್ಕೆ4); ಶಿವಮೊಗ್ಗ ಲಯನ್ಸ್: 20 ಓವರುಗಳಲ್ಲಿ 9 ವಿಕೆಟ್‌ಗೆ 151 (ನಿಹಾಲ್ ಉಳ್ಳಾಲ್ 46, ಅಭಿನವ್ ಮನೋಹರ್ 46; ವಿದ್ಯಾಧರ ಪಾಟೀಲ 29ಕ್ಕೆ3, ಸಿ.ಎ.ಕಾರ್ತಿಕ್ 31ಕ್ಕೆ3). ಪಂದ್ಯದ ಆಟಗಾರ: ಸಿ.ಎ.ಕಾರ್ತಿಕ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.