ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಟರ ಘಟ್ಟದಲ್ಲಿ ಮನೀಷ್–ವಿನಯ್ ಮುಖಾಮುಖಿ

ವಿಜಯ್ ಹಜಾರೆ ಕ್ರಿಕೆಟ್ ಟ್ರೋಫಿ: ಪ್ಲೇಟ್‌ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ಪುದುಚೇರಿ
Last Updated 17 ಅಕ್ಟೋಬರ್ 2019, 20:12 IST
ಅಕ್ಷರ ಗಾತ್ರ

ಬೆಂಗಳೂರು: ಹೋದ ವರ್ಷ ಕರ್ನಾಟಕ ತಂಡದಲ್ಲಿ ಜೊತೆಯಾಗಿ ಆಡಿದ್ದ ಮನೀಷ್ ಪಾಂಡೆ ಮತ್ತು ಆರ್. ವಿನಯಕುಮಾರ್ ಈ ಬಾರಿ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಮುಖಾಮುಖಿಯಾಗಲಿದ್ದಾರೆ.

ಈ ಬಾರಿಯ ಟೂರ್ನಿಯಲ್ಲಿ ವಿನಯಕುಮಾರ್ ನಾಯಕತ್ವದ ಪುದುಚೇರಿ ತಂಡವು ಗುರುವಾರ ಪ್ಲೇಟ್‌ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಎಂಟರ ಘಟ್ಟಕ್ಕೆ ಅವಕಾಶ ಗಿಟ್ಟಿಸಿದೆ. ಇದರೊಂದಿಗೆ ಇದೇ 20ರಂದು ನಡೆಯಲಿರುವ ಮೊದಲ ಕ್ವಾರ್ಟರ್‌ಫೈನಲ್‌ನಲ್ಲಿ ಪಾಂಡೆ ನಾಯಕತ್ವದ ಕರ್ನಾಟಕ ತಂಡವನ್ನು ಎದುರಿಸಲಿದೆ.

ಡೆಹ್ರಾಡೂನ್‌ನಲ್ಲಿ ನಡೆದ ಪ್ಲೇಟ್ ಗುಂಪಿನ ಕೊನೆಯ ಪಂದ್ಯದಲ್ಲಿ ಪುದುಚೇರಿ ತಂಡವು 5 ವಿಕೆಟ್‌ಗಳಿಂದ ಅಸ್ಸಾಂ ತಂಡದ ವಿರುದ್ಧ ಜಯಿಸಿತು. ಒಟ್ಟು 32 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದು. ಎಂಟರ ಘಟ್ಟಕ್ಕೆ ಸಾಗಿತು. ಎ ಗುಂಪಿನಲ್ಲಿ 28 ಪಾಯಿಂಟ್ ಗಳಿಸಿರುವ ಕರ್ನಾಟಕ ಅಗ್ರಸ್ಥಾನದಲ್ಲಿದೆ.

ಹೋದ ವರ್ಷದ ವಿಜಯ್ ಹಜಾರೆ ಟೂರ್ನಿಯಲ್ಲಿ ವಿನಯಕುಮಾರ್ ಅವರು ಕರ್ನಾಟಕ ತಂಡದ ನಾಯಕತ್ವದಿಂದ ಹಿಂದೆ ಸರಿದಿದ್ದರು. ಆಗ ಪಾಂಡೆ ನಾಯಕತ್ವ ವಹಿಸಿಕೊಂಡಿದ್ದರು. ಅದರ ನಂತರ ರಣಜಿ ಟೂರ್ನಿಯಲ್ಲಿ ವಿನಯ್ ಉತ್ತಮವಾಗಿ ಆಡಿದ್ದರು. ಆದರೆ, ಈಚೆಗೆ ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿ ನಡೆದ ಸಂದರ್ಭದಲ್ಲಿ ಅವರು ರಾಜ್ಯ ತಂಡಕ್ಕೆ ವಿದಾಯ ಘೋಷಿಸಿದ್ದರು. ಪುದುಚೇರಿ ಸೇರಿಕೊಂಡಿದ್ದರು. ಕರ್ನಾಟಕದವರೇ ಆದ ಜೆ. ಅರುಣಕುಮಾರ್ ಅವರು ಆ ತಂಡಕ್ಕೆ ಕೋಚ್ ಆಗಿದ್ದಾರೆ.

ವಿನಯ್ ನಾಯಕತ್ವದಲ್ಲಿ ಕರ್ನಾಟಕ ತಂಡವು ಎರಡು ಬಾರಿ ವಿಜಯ್ ಹಜಾರೆ ಮತ್ತು ರಣಜಿ ಟ್ರೋಫಿ ಗಳನ್ನು ಗೆದ್ದುಕೊಂಡಿತ್ತು. ಅವರು ಇದೇ ಮೊದಲ ಸಲ ತಮ್ಮ ತವರಿನ ತಂಡದ ವಿರುದ್ಧ ಕಣಕ್ಕಿಳಿಯಲಿದ್ದಾರೆ.

ಬಿನ್ನಿ ಆಲ್‌ರೌಂಡ್: ಸ್ಟುವರ್ಟ್‌ ಬಿನ್ನಿ (61 ಮತ್ತು 47ಕ್ಕೆ2) ಅವರ ಆಲ್‌ರೌಂಡ್ ಆಟದ ಬಲದಿಂದ ನಾಗಾಲ್ಯಾಂಡ್ ತಂಡವು ಮಣಿಪುರದ ವಿರುದ್ಧ 5 ರನ್‌ಗಳಿಂದ ಜಯಿಸಿತು.

ಸಂಕ್ಷಿಪ್ತ ಸ್ಕೋರು

ಪ್ಲೇಟ್ ಗುಂಪು: ಅಸ್ಸಾಂ: 36.1 ಓವರ್‌ಗಳಲ್ಲಿ 115 (ಅಶಿತ್ ರಾಜೀವ್ 17ಕ್ಕೆ4, ಸುರೇಶ್ ಕುಮಾರ್ 19ಕ್ಕೆ2, ಸಾಗರ್ ಉದೇಶಿ 20ಕ್ಕೆ2); ಪುದುಚೇರಿ: 22 ಓವರ್‌ಗಳಲ್ಲಿ 5ಕ್ಕೆ116 (ಪಾರಸ್ ಡೋಗ್ರಾ 44, ಪ್ರೀತಂ ದಾಸ್ 39ಕ್ಕೆ2), ಫಲಿತಾಂಶ: ಪುದುಚೇರಿಗೆ 5 ವಿಕೆಟ್‌ಗಳ ಜಯ ಮತ್ತು ನಾಲ್ಕು ಪಾಯಿಂಟ್ಸ್

ಉತ್ತರಾಖಂಡ: 50 ಓವರ್‌ಗಳಲ್ಲಿ 8ಕ್ಕೆ253 (ತನ್ಮಯ್ ಶ್ರೀವಾಸ್ತವ್ 102, ಅವನೀಶ್ ಸುಧಾ 78, ಜಸ್ಕರಣ್ ಸಿಂಗ್ 44ಕ್ಕೆ4) ಚಂಡೀಗಡ: 49 ಓವರ್‌ಗಳಲ್ಲಿ 8ಕ್ಕೆ254 (ಉದಯ್ ಕೌಲ್ 102, ಗೌರವ್ ಪುರಿ 45, ಧನರಾಜ್ ಶರ್ಮಾ 70ಕ್ಕೆ4) ಚಂಡೀಗಡ ತಂಡಕ್ಕೆ 2 ವಿಕೆಟ್‌ಗಳ ಜಯ. ನಾಲ್ಕು ಪಾಯಿಂಟ್ಸ್‌.

ನಾಗಾಲ್ಯಾಂಡ್: 48.2 ಓವರ್‌ಗಳಲ್ಲಿ 240 (ಯೋಗೇಶ್ ಟಕಾವಳೆ 90, ಸ್ಟುವರ್ಟ್ ಬಿನ್ನಿ 61, ಬಿಶ್ವರ್‌ಜೀತ್ ಕೊಂಥಾವುಜಾಮ್ 54ಕ್ಕೆ7) ಮಣಿಪುರ: 50 ಓವರ್‌ಗಳಲ್ಲಿ 8ಕ್ಕೆ235 (ಅಲ್ ಬಶೀದ್ ಮೊಹಮ್ಮದ್ 100, ಜಾನ್ಸನ್ ಸಿಂಗ್ 50, ಇಮ್ಲಿವತಿ ಲೆಮ್ತೂರ್ 41ಕ್ಕೆ2, ಸ್ಟುವರ್ಟ್ ಬಿನ್ನಿ 47ಕ್ಕೆ2 ಶ್ರೀಕಾಂತ್ ಮುಂಢೆ 50ಕ್ಕ2) ಫಲಿತಾಂಶ; ನಾಗಾಲ್ಯಾಂಡ್ ತಂಡಕ್ಕೆ ಐದು ರನ್‌ಗಳ ಜಯ ಮತ್ತು 4 ಪಾಯಿಂಟ್ಸ್‌.

ಕ್ವಾರ್ಟರ್‌ಫೈನಲ್ ವೇಳಾಪಟ್ಟಿ : ಕರ್ನಾಟಕ–ಪುದುಚೇರಿ (ಅ.20), ದೆಹಲಿ–ಗುಜರಾತ್ (ಅ.20), ಪಂಜಾಬ್–ತಮಿಳುನಾಡು (ಅ.21), ಛತ್ತೀಸಗಡ–ಮುಂಬೈ (ಅ.21).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT