ಗುರುವಾರ , ಫೆಬ್ರವರಿ 27, 2020
19 °C
‘ಎ’ ಪ್ಲಸ್‌ ದರ್ಜೆಯಲ್ಲಿ ಕೊಹ್ಲಿ, ರೋಹಿತ್‌, ಬೂಮ್ರಾ

ಗುತ್ತಿಗೆ ಪಟ್ಟಿ: ಧೋನಿಗೆ ಕೊಕ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ : ಹಿರಿಯ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರನ್ನು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ಕೇಂದ್ರಿಯ ಗುತ್ತಿಗೆ ಆಟಗಾರರ ಪಟ್ಟಿಯಿಂದ ಕೈಬಿಡಲಾಗಿದೆ. ಆ ಮೂಲಕ ಭಾರತ ತಂಡದ ಮಾಜಿ ನಾಯಕನ ಕ್ರಿಕೆಟ್‌ ಭವಿಷ್ಯದ ಬಗ್ಗೆ ಮತ್ತಷ್ಟು ಅನುಮಾನಗಳೆದ್ದಿವೆ.

ಕಳೆದ ವರ್ಷ ಇಂಗ್ಲೆಂಡ್‌ನಲ್ಲಿ ನಡೆದ ಏಕದಿನ ವಿಶ್ವಕಪ್‌ ಸೆಮಿಫೈನಲ್‌ (ಜುಲೈ 9ರಂದು ನ್ಯೂಜಿಲೆಂಡ್‌ ವಿರುದ್ಧ) ಪಂದ್ಯದಲ್ಲಿ ಅವರು ಕೊನೆಯ ಬಾರಿ ಭಾರತ ತಂಡದಲ್ಲಿ ಆಡಿದ್ದರು. ಮಂಡಳಿಯು ಅಕ್ಟೋಬರ್‌ 2019 ರಿಂದ 2020ರವರೆಗಿನ ಅವಧಿಗೆ ಗುತ್ತಿಗೆ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಧೋನಿ ಹೆಸರಿಲ್ಲ.

ಈ ಹಿಂದೆ ಧೋನಿ ‘ಎ’ ದರ್ಜೆಯಲ್ಲಿ ಇದ್ದರು. ಈ ವಿಭಾಗದಡಿ ಬರುವ ಆಟಗಾರರಿಗೆ ವರ್ಷಕ್ಕೆ ₹5 ಕೋಟಿಯವರೆಗೆ ನೀಡಲಾಗುತ್ತಿತ್ತು.

ನಾಯಕ ವಿರಾಟ್‌ ಕೊಹ್ಲಿ, ಉಪನಾಯಕ ರೋಹಿತ್‌ ಶರ್ಮಾ ಮತ್ತು ಅಗ್ರಮಾನ್ಯ ವೇಗಿ ಜಸ್‌ಪ್ರೀತ್‌ ಬೂಮ್ರಾ ಅತ್ಯುನ್ನತ ದರ್ಜೆ (ಎ+)ಯಲ್ಲಿ ಮುಂದುವರಿಯಲಿದ್ದು ವರ್ಷಕ್ಕೆ ಏಳು ಕೋಟಿ ರೂಪಾಯಿ ಪಡೆಯಲಿದ್ದಾರೆ. ಕರ್ನಾಟಕದ ಕೆ.ಎಲ್‌.ರಾಹುಲ್‌ ‘ಬಿ’ ದರ್ಜೆಯಿಂದ ‘ಎ’ಗೆ ಬಡ್ತಿ ಪಡೆದಿದ್ದಾರೆ.

ಧೋನಿ ಅವರನ್ನು ಪಟ್ಟಿಯಿಂದ ಕೈಬಿಟ್ಟಿದು ಅನಿರೀಕ್ಷಿತವೇನೂ ಆಗಿರ ಲಿಲ್ಲ. ಸುಮಾರು ಆರು ತಿಂಗಳಿಂದ ಅವರು ಆಡಿರಲಿಲ್ಲ. ‘ವಿಶ್ರಾಂತಿ’ಯಲ್ಲಿರುವ ಅವರು ತಮ್ಮ ಮುಂದಿನ ಯೋಜ ನೆಗಳ ಬಗ್ಗೆ ಇದುವರೆಗೆ ಬಾಯಿಬಿಟ್ಟಿಲ್ಲ.

‘ಧೋನಿ ಅವರ ಏಕದಿನ ಕ್ರಿಕೆಟ್‌ ಜೀವನ ಶೀಘ್ರದಲ್ಲೇ ಅಂತ್ಯಗೊಳ್ಳಲಿದೆ. ಆದರೆ ಅವರು ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಟಿ–20 ವಿಶ್ವಕಪ್‌ ತಂಡದ ಆಯ್ಕೆಗೆ ರೇಸ್‌ನಲ್ಲಿರುತ್ತಾರೆ’ ಎಂದು ಮುಖ್ಯ ತರಬೇತುದಾರ ರವಿ ಶಾಸ್ತ್ರಿ ಇತ್ತೀಚೆಗೆ ಹೇಳಿದ್ದರು.

ಹೋದ ವರ್ಷ ಟೆಸ್ಟ್‌ಗೆ ಪದಾರ್ಪಣೆ ಮಾಡಿದ ನಂತರ ಉತ್ತಮ ಪ್ರದರ್ಶನ ನೀಡಿರುವ ಆರಂಭ ಆಟಗಾರ, ಕರ್ನಾಟಕದ  ಮಯಂಕ್‌ ಅಗರವಾಲ್‌ ಅವರು ‘ಬಿ’ ದರ್ಜೆಯಲ್ಲಿದ್ದಾರೆ. 

ದಿನೇಶ್ ಕಾರ್ತಿಕ್‌ ಮತ್ತು ನಿವೃತ್ತರಾದ ಬ್ಯಾಟ್ಸ್‌ಮನ್‌ ಅಂಬಟಿ ರಾಯುಡು ಅವರನ್ನೂ ಗುತ್ತಿಗೆ ಆಟಗಾರರ ಪಟ್ಟಿಯಿಂದ ಕೈಬಿಡಲಾಗಿದೆ.

 

ಗುತ್ತಿಗೆ ಆಟಗಾರರ ಗ್ರೇಡ್‌ ಇಂತಿದೆ:

ಗ್ರೇಡ್‌ ‘ಎ’+: ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ, ಜಸ್‌ಪ್ರೀತ್‌ ಬೂಮ್ರಾ

ಗ್ರೇಡ್‌ ‘ಎ’: ರವಿಚಂದ್ರನ್‌ ಅಶ್ವಿನ್‌, ರವೀಂದ್ರ ಜಡೇಜ, ಭುವನೇಶ್ವರ ಕುಮಾರ್‌, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಕೆ.ಎಲ್‌.ರಾಹುಲ್‌, ಶಿಖರ್‌ ಧವನ್‌, ಮೊಹಮ್ಮದ್‌ ಶಮಿ, ಇಶಾಂತ್‌ ಶರ್ಮಾ, ಕುಲದೀಪ್‌ ಯಾದವ್‌ ಮತ್ತು ರಿಷಭ್‌ ಪಂತ್‌.

ಗ್ರೇಡ್‌ ‘ಬಿ’ ವೃದ್ಧಿಮಾನ್‌ ಸಹಾ, ಉಮೇಶ್‌ ಯಾದವ್‌, ಯಜುವೇಂದ್ರ ಚಾಹಲ್‌, ಹಾರ್ದಿಕ್ ಪಾಂಡ್ಯ ಮತ್ತು ಮಯಂಕ್‌ ಅಗರವಾಲ್‌

ಗ್ರೇಡ್‌ ‘ಸಿ’: ಕೇದಾರ್‌ ಜಾಧವ್‌, ನವದೀಪ್‌ ಸೈನಿ, ದೀಪಕ್‌ ಚಾಹರ್‌, ಮನೀಶ್‌ ಪಾಂಡೆ, ಹನುಮ ವಿಹಾರಿ, ಶಾರ್ದೂಲ್‌ ಠಾಕೂರ್‌, ಶ್ರೇಯಸ್‌ ಅಯ್ಯರ್‌ ಮತ್ತು ವಾಷಿಂಗ್ಟನ್‌ ಸುಂದರ್‌.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು