ಸೋಮವಾರ, ಆಗಸ್ಟ್ 8, 2022
21 °C

ಜ.10ರಿಂದ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೊರೊನಾ ವೈರಸ್ ಸೃಷ್ಟಿಸಿದ ಬಿಕ್ಕಟ್ಟಿನಿಂದಾಗಿ ಮುಂದೂಡಲಾಗಿದ್ದ ದೇಶಿ ಕ್ರಿಕೆಟ್ ಋತುವಿಗೆ ಚಾಲನೆ ಕೊಡಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮೊದಲ ಹೆಜ್ಜೆ ಇಟ್ಟಿದೆ.

ಮುಂದಿನ ತಿಂಗಳು (ಜನವರಿ) 10 ರಿಂದ 31ರವರೆಗೆ  ಸೈಯ್ಯದ್ ಮುಷ್ತಾಕ್ ಅಲಿ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಲಿದೆ. ಆರು ರಾಜ್ಯ ಸಂಸ್ಥೆಗಳ ಮೈದಾನದಲ್ಲಿ ಜೀವ ಸುರಕ್ಷಾ ವಾತಾವರಣದಲ್ಲಿ ಈ ಟೂರ್ನಿಯನ್ನು ಸಂಘಟಿಸಲಿದೆ.

ಆಡಲಿರುವ ತಂಡಗಳು ಜನವರಿ 2ರಂದು ತಮಗೆ ನಿಗದಿಪಡಿಸಿದ ತಾಣಗಳಿಗೆ ತೆರಳಬೇಕು ಎಂದೂ ಸೂಚಿಸಲಾಗಿದೆ. ಟೂರ್ನಿಯ ಕುರಿತು  ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಇ –ಮೇಲ್ ರವಾನಿಸಿದ್ದಾರೆ.

ಆದರೆ ಇದರಲ್ಲಿ ಮುಷ್ತಾಕ್ ಅಲಿ ಟೂರ್ನಿ ಕುರಿತು ಮಾತ್ರ ಇದೆ. ರಣಜಿ ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಗಳ ಆಯೋಜನೆ ಬಗ್ಗೆ ಮಾಹಿತಿ ಇಲ್ಲವೆನ್ನಲಾಗಿದೆ.

’ರಾಜ್ಯ ಸಂಸ್ಥೆಗಳು ವ್ಯಕ್ತಪಡಿಸಿದ  ಅಭಿಪ್ರಾಯಗಳನ್ನು ವಿಶ್ಲೇಷಿಸಿದ ನಂತರ 2020–21ರ ದೇಶಿ ಕ್ರಿಕೆಟ್  ಋತುವನ್ನು ಆರಂಭಿಸಲು ಕ್ರಮಕೈಗೊಳ್ಳಲಾಗಿದೆ. ಟಿ20 ಟೂರ್ನಿಯ ಮೂಲಕ ಇದಕ್ಕೆ ಚಾಲನೆ ದೊರೆಯಲಿದೆ‘ ಎಂದು ಶಾ ತಮ್ಮ ಇ ಮೇಲ್‌ನಲ್ಲಿ ಉಲ್ಲೇಖಿಸಿದ್ದಾರೆ.

’ತಂಡಗಳು ತಮಗೆ ನಿಗದಿಪಡಿಸಿರುವ ತಾಣಗಳಿಗೆ ಜನವರಿ 2ರಂದು ವರದಿ ಮಾಡಿಕೊಳ್ಳಬೇಕು. 10ರಿಂದ ಟೂರ್ನಿ ಆರಂಭವಾಗುವುದು. 31ರಂದು ಫೈನಲ್ ಪಂದ್ಯ ನಡೆಯಲಿದೆ‘ ಎಂದೂ ಬರೆದಿದ್ದಾರೆ.

ಮುಷ್ತಾಕ್ ಅಲಿ ಟೂರ್ನಿಯ ಗುಂಪು ಹಂತದ ಪಂದ್ಯಗಳು ಮುಗಿಯುವ ಹೊತ್ತಿಗೆ  ರಣಜಿ ಮತ್ತು ವಿಜಯ್ ಹಜಾರೆ ಟೂರ್ನಿಯ ವೇಳಾಪಟ್ಟಿ ಸಿದ್ಧಪಡಿಸಲು ಚಿಂತನೆ ನಡೆಸಲಾಗುತ್ತಿದೆ.

’ಟಿ20 ಟೂರ್ನಿಯ ಗುಂಪು ಹಂತ ಮುಗಿದ ಕೂಡಲೇ ಇನ್ನುಳಿದ ದೇಶಿ ಟೂರ್ನಿಗಳನ್ನು ಆಯೋಜಿಸುವ ಆಸಕ್ತಿ ಇರುವ ರಾಜ್ಯ ಸಂಸ್ಥೆಗಳು ಮಂಡಳಿಗೆ ಮಾಹಿತಿ ನೀಡಬೇಕು. ಅದಕ್ಕೆ ತಕ್ಕಂತೆ ಸಿದ್ಧತೆಗಳನ್ನು ಮಾಡಲಾಗುವುದು‘ ಎಂದು ಶಾ ಹೇಳಿದ್ದಾರೆ.

ಫೆಬ್ರುವರಿ ತಿಂಗಳಲ್ಲಿ ಐಪಿಎಲ್‌ ಮೇಗಾ ಹರಾಜು ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ. ಅದಕ್ಕೂ ಮುನ್ನವೇ ದೇಶಿ ಟಿ20 ಟೂರ್ನಿಯನ್ನು ನಡೆಸಲು ಬಿಸಿಸಿಐ ನಿರ್ಧರಿಸಿದೆ. ಇದರಲ್ಲಿ ಉತ್ತಮ ಪ್ರತಿಭೆಗಳನ್ನು ಐಪಿಎಲ್ ಗೆ ಸೆಳೆದುಕೊಳ್ಳಲು ಫ್ರ್ಯಾಂಚೈಸಿಗಳಿಗೆ ಅನುಕೂಲವಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು