ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಗಂಗೂಲಿ ಸೂಕ್ತ: ವಿನೋದ್

Last Updated 23 ಅಕ್ಟೋಬರ್ 2019, 16:45 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸ್ಥಾನಕ್ಕೆ ಸೌರವ್ ಗಂಗೂಲಿಯವರೇ ಸೂಕ್ತ ವ್ಯಕ್ತಿಯಾಗಿದ್ದಾರೆ ಎಂದು ಕ್ರಿಕೆಟ್ ಆಡಳಿತಾಧಿಕಾರಿಗಳ ಸಮಿತಿ (ಸಿಒಎ) ಮುಖ್ಯಸ್ಥ ವಿನೋದ್ ರಾಯ್ ಹೇಳಿದ್ಧಾರೆ.

ಬಿಸಿಸಿಐಗೆ ಹೊಸ ಆಡಳಿತ ಸಮಿತಿಯು ಬುಧವಾರ ಅಧಿಕಾರ ವಹಿಸಿಕೊಂಡ ನಂತರ ಸಿಒಎ ಕಾರ್ಯನಿರ್ವಹಣೆ ಅವಧಿಯು ಮುಗಿಯಿತು. ಈ ಸಂದರ್ಭದಲ್ಲಿ ವಿನೋದ್ ತಮ್ಮ 33 ತಿಂಗಳುಗಳ ಕಾರ್ಯನಿರ್ವಹಣೆಯ ಕುರಿತು ವರು ಸಂದರ್ಶನ ನೀಡಿದ್ದಾರೆ.

‘ಗಂಗೂಲಿ ಅವರು ಪ್ರಾಮಾಣಿಕವಾಗಿ ಮಂಡಳಿಯನ್ನು ಮುನ್ನಡೆಸುತ್ತಾರೆನ್ನುವ ವಿಶ್ವಾಸವಿದೆ. ಬಂಗಾಳ ಕ್ರಿಕೆಟ್‌ ಸಂಸ್ಥೆಯನ್ನು ಅವರು ಚೆನ್ನಾಗಿ ನಿರ್ವಹಿಸಿದ್ದಾರೆ. ಆಡಳಿತ ನಿರ್ವಹಣೆ ಗುಣ ಮತ್ತು ನಾಯಕತ್ವ ಸ್ವಭಾವ ಇರುವ ಕ್ರಿಕೆಟಿಗ ಅವರಾಗಿದ್ದಾರೆ’ ಎಂದು ಹೇಳಿದರು.

‘ಕಳೆದ 33 ತಿಂಗಳಲ್ಲಿ ನಿರ್ವಹಿಸಿದ ಕಾರ್ಯವು ನನಗೆ ತೃಪ್ತಿ ತಂದಿದೆ. ದೇಶದ ಕ್ರಿಕೆಟ್‌ ಆಡಳಿತದ ಚುಕ್ಕಾಣಿಯು ದೊಡ್ಡ ಕ್ರಿಕೆಟಿಗರ ಕೈಗೆ ಕೊಟ್ಟಿರುವುದು ಸಂತಸ ತಂದಿದೆ. ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಗಂಗೂಲಿ, ಐಪಿಎಲ್ ಮುಖ್ಯಸ್ಥರಾಗಿ ಬ್ರಿಜೇಶ್ ಪಟೇಲ್, ಅಪೆಕ್ಸ್‌ ಕೌನ್ಸಿಲ್‌ಗೆ ಅನ್ಷುಮನ್ ಗಾಯಕವಾಡ್ ಮತ್ತು ಶಾಂತಾ ರಂಗಸ್ವಾಮಿ ಆಯ್ಕೆಯಾಗಿದ್ದಾರೆ. ಆಟಗಾರರ ಸಮಿತಿಯನ್ನು ರಚಿಸುವಲ್ಲಿ ಯಶಸ್ವಿಯಾಗಿದ್ದೇವೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಹಿತಾಸಕ್ತಿ ಸಂಘರ್ಷ ನಿಯಮದ ಕುರಿತು ಪ್ರತಿಕ್ರಿಯಿಸಿದ ಅವರು, ‘ನಮ್ಮ ಶಿಫಾರಸುಗಳೊಂದಿಗೆ ನ್ಯಾಯಾಲಯವು ನೀಡಿದ ಸೂಚನೆಗಳನ್ನು ಸೇರಿಸಿರುವುದರಿಂದ ನಿಯಮವು ಉತ್ತಮಗೊಂಡಿದೆ. ಕ್ರಿಕೆಟಿಗರ ಕ್ರೀಡಾ ಜೀವನವು ಸಣ್ಣ ಅವಧಿಯದ್ದಾಗಿರುತ್ತದೆ. ಆದರೆ ಅವರು ಪಡೆಯುವ ಜ್ಞಾನ ಮತ್ತು ಅನುಭವ ಮರಳಿ ಕ್ರಿಕೆಟ್‌ಗೆ ಸಿಗುವಂತಾಗಬೇಕು. ವೀಕ್ಷಕ ವಿವರಣೆಗಾರರಾಗಿ ಕಾರ್ಯನಿರ್ವಹಿಸಲು ಅಥವಾ ಐಪಿಎಲ್‌ನಲ್ಲಿ ಕೋಚ್, ಮಾರ್ಗದರ್ಶಕರಾಗಿ ಕೆಲಸ ಮಾಡಲು ನಿರ್ಬಂಧಿಸುವುದೇಕೆ?’ ಎಂದರು.

‘ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಜೊಹ್ರಿ ಅವರ ಮೇಲೆ ಲೈಂಗಿಕ ಹಗರಣವನ್ನು ಸಮರ್ಪಕವಾಗಿ ನಿರ್ವಹಿಸಿದ್ದೇವೆ. ಆ ಕುರಿತು ನಮಗೆ ತೃಪ್ತಿ ಇದೆ. ಸ್ವತಂತ್ರ ವಿಚಾರಣಾ ಸಮಿತಿಯನ್ನು ನೇಮಕ ಮಾಡಲಾಗಿತ್ತು. ಆರೋಪಿ ಮತ್ತು ದೂರುದಾರರು ಇಬ್ಬರಿಗೂ ತಮ್ಮ ಹೇಳಿಕೆಗಳನ್ನು ದಾಖಲಿಸಲು ಮತ್ತು ಸಾಬೀತು ಮಾಡಲು ಅವಕಾಶ ನೀಡಲಾಗಿತ್ತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT