ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಧರ್ ಟ್ರೋಫಿ ಕ್ರಿಕೆಟ್: ಕಣದಲ್ಲಿ ವಿದ್ವತ್, ವೈಶಾಖ

Published 23 ಜುಲೈ 2023, 16:22 IST
Last Updated 23 ಜುಲೈ 2023, 16:22 IST
ಅಕ್ಷರ ಗಾತ್ರ

ಪುದುಚೇರಿ: ನಾಲ್ಕು ವರ್ಷಗಳ ನಂತರ ಮತ್ತೆ ದೇವಧರ್ ಟ್ರೋಫಿ ಕ್ರಿಕೆಟ್ ಟೂರ್ನಿ ಆರಂಭವಾಗಲಿದೆ. ಕರ್ನಾಟಕದ ಉದಯೋನ್ಮುಖ ವೇಗಿಗಳಾದ ವಿದ್ವತ್ ಕಾವೇರಪ್ಪ ಮತ್ತು ವೈಶಾಖ ವಿಜಯಕುಮಾರ್ ಕಣಕ್ಕಿಳಿಯಲಿದ್ದಾರೆ.

ಸೋಮವಾರದಿಂದ 11 ದಿನಗಳ ಕಾಲ ನಿಗದಿಯ ಓವರ್‌ಗಳ ಪಂದ್ಯಗಳು  ನಡೆಯಲಿವೆ. ಲಿಸ್ಟ್‌ ಎ ದರ್ಜೆಯ (ಫಿಫ್ಟಿ–50)ಈ ಟೂರ್ನಿಯಲ್ಲಿ ಪೂರ್ವ, ಪಶ್ಚಿಮ, ದಕ್ಷಿಣ, ಉತ್ತರ, ಕೇಂದ್ರ ಮತ್ತು ಈಶಾನ್ಯ ವಲಯದ ತಂಡಗಳು ಪೈಪೋಟಿ ನಡೆಸಲಿವೆ.

ಇದೇ ವರ್ಷ ಭಾರತದಲ್ಲಿ ಏಕದಿನ ಕ್ರಿಕೆಟ್ ವಿಶ್ವಕಪ್ ನಡೆಯಲಿದೆ. ಅದರಿಂದಾಗಿ ಭಾರತ ತಂಡದ ಕೆಲವು ಅನುಭವಿ ಆಟಗಾರರಿಗೆ ವಿಶ್ವಕಪ್ ಮುನ್ನ ನಡೆಯುವ ಕೆಲವು ಸರಣಿಗಳಲ್ಲಿ ಕಾರ್ಯಭಾರ ಒತ್ತಡದ ನಿವಾರಣೆಗಾಗಿ ವಿಶ್ರಾಂತಿ ಕೊಡುವ ಸಾಧ್ಯತೆಗಳಿವೆ.  ಆದ್ದರಿಂದ ಅವರ ಬದಲಿಗೆ ಯುವ ಆಟಗಾರರಿಗೆ ಆಡಲು ಅವಕಾಶ ಸಿಗುವ ನಿರೀಕ್ಷೆ ಇರುವುದರಿಂದ ಈ ಟೂರ್ನಿ ಬಹಳಷ್ಟು ಮಹತ್ವ ಪಡೆದುಕೊಂಡಿದೆ.

ಅದರಲ್ಲೂ ವೇಗದ ಬೌಲರ್‌ಗಳ ಮೇಲೆ ವಿಶೇಷ ನಿಗಾ ಇದೆ. ಭಾರತ ತಂಡದ ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಅವರಿಗೆ ವಿಶ್ರಾಂತಿ ಕೊಟ್ಟಾಗ ಸಮರ್ಥ ಯುವ ಬೌಲರ್‌ಗಳನ್ನು ಸಿದ್ಧಗೊಳಿಸಲು ಈ ಟೂರ್ನಿ ವೇದಿಕೆಯಾಗಿದೆ.

ಈಚೆಗೆ ಮುಕ್ತಾಯವಾದ ದುಲೀಪ್ ಟ್ರೋಫಿಯಲ್ಲಿ ದಕ್ಷಿಣ ವಲಯ ಚಾಂಪಿಯನ್ ಆಗಲು ವಿದ್ವತ್ ಮತ್ತು ವೈಶಾಖ ಪ್ರಮುಖ ಪಾತ್ರ ವಹಿಸಿದ್ದರು. ಇಬ್ಬರೂ ಜಂಟಿಯಾಗಿ ಒಟ್ಟು 24 ವಿಕೆಟ್‌ ಗಳಿಸಿದ್ದರು. ವಿದ್ವತ್ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು. ದಕ್ಷಿಣ ತಂಡವನ್ನು ಕರ್ನಾಟಕದ ಮಯಂಕ್ ಅಗರವಾಲ್ ಮುನ್ನಡೆಸುವರು. ಬ್ಯಾಟರ್ ದೇವದತ್ತ ಪಡಿಕ್ಕಲ್, ಮಧ್ಯಮವೇಗಿ ವಿ. ಕೌಶಿಕ್ ಕೂಡ ತಂಡದಲ್ಲಿದ್ದಾರೆ.

ರಣಜಿ ಋತುವಿನಲ್ಲಿ ಗೋವಾ ತಂಡವನ್ನು ಪ್ರತಿನಿಧಿಸುತ್ತಿರುವ ಅರ್ಜುನ್ ತೆಂಡೂಲ್ಕರ್ ಕೂಡ ದಕ್ಷಿಣ ವಲಯದಲ್ಲಿದ್ದಾರೆ. ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ಎಡಗೈ ಮಧ್ಯಮವೇಗದ ಆಲ್‌ರೌಂಡರ್ ಆಗಿದ್ದಾರೆ.

ಉತ್ತರಾಖಂಡದ ಮಧ್ಯಮವೇಗಿ ಆಕಾಶ್ ಮಧ್ವಾಲ್ ಕೂಡ ಈ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಐಪಿಎಲ್‌ನಲ್ಲಿ ಅವರು ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಕರ್ನಾಟಕದ ಯುವ ಬ್ಯಾಟರ್ ನಿಕಿನ್ ಜೋಸ್, ಆಲ್‌ರೌಂಡರ್ ಹರ್ಷಿತ್ ರಾಣಾ, ನಿಶಾಂತ್ ಸಿಂಧು ಮತ್ತು ಬಿ ಸಾಯಿ ಸುದರ್ಶನ್ ಕೂಡ ಕಣಕ್ಕಿಳಿಯಲಿದ್ದಾರೆ. ಅವರು ಕೊಲಂಬೊದಲ್ಲಿ ನಡೆದ ಎಮರ್ಜಿಂಗ್ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ಎ ತಂಡದಲ್ಲಿ ಆಡಲು ತೆರಳಿದ್ದರು.

ಸೋಮವಾರದ ಪಂದ್ಯಗಳು

ಪೂರ್ವ ವಲಯ–ಕೇಂದ್ರ ವಲಯ

ಪಶ್ಚಿಮ ವಲಯ–ಈಶಾನ್ಯ ವಲಯ

ಉತ್ತರ ವಲಯ–ದಕ್ಷಿಣ ವಲಯ

ಆರಂಭ: ಬೆಳಿಗ್ಗೆ 9

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT