ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಜ್ರಗಳ ಊರಿನಲ್ಲಿ ಮಿಥುನ್ ಹೈ ಫೈವ್

ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ 20 ಕ್ರಿಕೆಟ್
Last Updated 30 ನವೆಂಬರ್ 2019, 4:12 IST
ಅಕ್ಷರ ಗಾತ್ರ

ಸೂರತ್: ಹ್ಯಾಟ್ರಿಕ್ ಸಹಿತ ಐದು ವಿಕೆಟ್‌ಗಳನ್ನು ಒಂದೇ ಓವರ್‌ನಲ್ಲಿ ಗಳಿಸಿದ ಕರ್ನಾಟಕದ ಅಭಿಮನ್ಯು ಮಿಥುನ್ ಸೈಯದ್ ಮುಷ್ತಾಕ್ ಅಲಿ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯಲ್ಲಿ ನೂತನ ದಾಖಲೆ ಬರೆದರು.

ಲಾಲ್‌ಭಾಯಿ ಕಂಟ್ರ್ಯಾಕ್ಟರ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಸೆಮಿಫೈನಲ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹರಿಯಾಣ ತಂಡದ ಬ್ಯಾಟ್ಸ್‌ಮನ್‌ಗಳು ಅಬ್ಬರಿಸಿದರು. ಇನ್ನೂರಕ್ಕಿಂತ ಹೆಚ್ಚಿನಮೊತ್ತ ಗಳಿಸುವ ಹಾದಿಯಲ್ಲಿದ್ದ ತಂಡವನ್ನು ಮಿಥುನ್ ತಡೆದರು. ಇನಿಂಗ್ಸ್‌ನ ಕೊನೆಯ ಓವರ್‌ ಬೌಲಿಂಗ್ ಮಾಡಿದ ‘ಪೀಣ್ಯ ಎಕ್ಸ್‌ಪ್ರೆಸ್’ ಸತತ ನಾಲ್ಕು ಎಸೆತಗಳಲ್ಲಿಯೂ ವಿಕೆಟ್ ಗಳಿಸಿದರು. ಆದರೆ ಐದನೇ ಎಸೆತವು ವೈಡ್ ಹಾಕಿದರು.

ನಂತರದ ಎಸೆತದಲ್ಲಿ ಬ್ಯಾಟ್ಸ್‌ಮನ್ ಜಯಂತ್ ಯಾದವ್ ರಕ್ಷಣಾತ್ಮಕವಾಗಿ ಆಡಿ ಒಂದು ರನ್ ಗಳಿಸಿದರು. ಆದರೆ ಕೊನೆಯ ಎಸೆತದಲ್ಲಿಯೂ ಮತ್ತೊಂದು ವಿಕೆಟ್ ಗಳಿಸಿದ ಮಿಥುನ್ ಕುಣಿದಾಡಿದರು. ಒಂದೇ ಓವರ್‌ನಲ್ಲಿ ಹ್ಯಾಟ್ರಿಕ್ ಸಮೇತ ಐದು ವಿಕೆಟ್‌ಗಳ ಗೊಂಚಲು ಗಳಿಸಿದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಹರಿಯಾಣ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗೆ 194 ರನ್ ಗಳಿಸಿತು. ತಂಡದ ಆರಂಭಿಕ ಬ್ಯಾಟ್ಸ್‌ಮನ್ ಚೈತನ್ಯ ಬಿಷ್ಣೊಯಿ (55; 35ಎಸೆತ, 7ಬೌಂಡರಿ, 1ಸಿಕ್ಸರ್) ಮತ್ತು ಹರ್ಷಲ್ ಪಟೇಲ್ (34; 20ಎಸೆತ, 6ಬೌಂಡರಿ, 1ಸಿಕ್ಸರ್) ಮೊದಲ ವಿಕೆಟ್‌ಗೆ ಕೇವಲ ಅರು ಓವರ್‌ಗಳಲ್ಲಿ 67 ರನ್‌ಗಳನ್ನು ಸೇರಿಸಿದರು.

ಇವರ ನಂತರ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ ಹಿಮಾಂಶು ರಾಣಾ (61; 34ಎಸೆತ, 6ಬೌಂಡರಿ, 2ಸಿಕ್ಸರ್) ಮತ್ತು ರಾಹುಲ್ ತೆವಾಟಿಯಾ (32ಲ 20ಎಸೆತ, 6ಬೌಂಡರಿ) ಜೊತೆಯಾಟದಲ್ಲಿ 80 ರನ್‌ ಗಳಿಸಿದರು. ಇದರಿಂದಾಗಿ ತಂಡವು ಇನ್ನೂರಕ್ಕಿಂತ ಹೆಚ್ಚಿನ ಮೊತ್ತ ಗಳಿಸುವ ಭರವಸೆ ಮೂಡಿಸಿತ್ತು. ಆದರೆ, ಮಿಥುನ್ ಬೌಲಿಂಗ್ ಮುಂದೆ ಹರಿಯಾಣದ ಆಸೆ ಈಡೇರಲಿಲ್ಲ.

ಸಂಕ್ಷಿಪ್ತ ಸ್ಕೋರು: ಹರಿಯಾಣ:20 ಓವರ್‌ಗಳಲ್ಲಿ 8ಕ್ಕೆ194 (ಚೈತನ್ಯ ಬಿಷ್ಣೋಯಿ 55, ಹರ್ಷಲ್ ಪಟೇಲ್ 34, ಹಿಮಾಂಶು ರಾಣಾ 61, ರಾಹುಲ್ ತೆವಾಟಿಯಾ 32, ಅಭಿಮನ್ಯು ಮಿಥುನ್ 39ಕ್ಕೆ5, ಶ್ರೇಯಸ್ ಗೋಪಾಲ್ 23ಕ್ಕೆ2) ಕರ್ನಾಟಕ ಎದುರಿನ ಪಂದ್ಯ.

ಮೂರು ಮಾದರಿಗಳ ಹ್ಯಾಟ್ರಿಕ್ ಸಾಧಕ ಮಿಥುನ್

ಬೆಂಗಳೂರು: ಸೂರತ್‌ನಲ್ಲಿ ಶುಕ್ರವಾರ ಸೈಯದ್ ಮುಷ್ತಾಕ್ ಅಲಿ ಟ್ವೆಂಟಿ–20 ಟೂರ್ನಿಯ ಸೆಮಿಫೈನಲ್‌ನಲ್ಲಿ ಒಂದೇ ಓವರ್‌ನಲ್ಲಿ ಹ್ಯಾಟ್ರಿಕ್ ಸಹಿತ ಐದು ವಿಕೆಟ್ ಗಳಿಸಿದ ಅಭಿಮನ್ಯು ಮಿಥುನ್ ವಿನೂತನ ದಾಖಲೆ ಬರೆದರು.

‘ದೇಶಿ ಕ್ರಿಕೆಟ್‌ನ ಮೂರು ಮಾದರಿಗಳಲ್ಲಿಯೂ ಹ್ಯಾಟ್ರಿಕ್ ಸಾಧಿಸಿದ ಏಕೈಕ ಆಟಗಾರ ಮಿಥುನ್. ಅವರು 2009ರಲ್ಲಿ ಮೀರತ್‌ನಲ್ಲಿ ನಡೆದಿದ್ದ ರಣಜಿ ಟ್ರೋಫಿ ಟೂರ್ನಿಯ ಉತ್ತರಪ್ರದೇಶದ ಪಂದ್ಯದ ಎದುರು ಪದಾರ್ಪಣೆ ಮಾಡಿದ್ದರು. ಆ ಪಂದ್ಯದಲ್ಲಿಯೇ ಅವರು ಹ್ಯಾಟ್ರಿಕ್ ಸಾಧನೆ ಮಾಡಿದ್ದರು. ಹೋದ ಅಕ್ಟೋಬರ್‌ 25ರಂದು ಅವರು ಬೆಂಗಳೂರಿನಲ್ಲಿ ನಡೆದಿದ್ದ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ತಮಿಳುನಾಡು ವಿರುದ್ಧ ಹ್ಯಾಟ್ರಿಕ್ ಸಾಧನೆ ಮಾಡಿದ್ದರು. ‌ಒಂದು ತಿಂಗಳ ನಂತರ ಇಲ್ಲಿ ಮತ್ತೊಂದು ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ’ ಎಂದು ಕ್ರಿಕೆಟ್ ಅಂಕಿ ಸಂಖ್ಯೆ ಲೇಖಕ ಚನ್ನಗಿರಿ ಕೇಶವಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಹೋದ ಸಲದ ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಕರ್ನಾಟಕದ ಶ್ರೇಯಸ್ ಗೋಪಾಲ್ ಹ್ಯಾಟ್ರಿಕ್ ಸಾಧನೆ ಮಾಡಿದ್ದರು. ಆದರೆ ಈ ಸಲ ಮಿಥುನ್ ಸತತ ನಾಲ್ಕು ವಿಕೆಟ್ ಮತ್ತು ಒಂದೇ ಓವರ್‌ನಲ್ಲಿ ಐದು ವಿಕೆಟ್ ಗಳಿಸಿ ಹೊಸ ದಾಖಲೆ ಬರೆದರು.

ಪೀಣ್ಯ ಎಕ್ಸ್‌ಪ್ರೆಸ್‌ ಎಂದೇ ಖ್ಯಾತರಾಗಿರುವ ಬಲಗೈ ಮಧ್ಯಮವೇಗಿ ಮಿಥುನ್ ಭಾರತ ತಂಡದಲ್ಲಿ ನಾಲ್ಕು ಟೆಸ್ಟ್ ಮತ್ತು ಐದು ಏಕದಿನ ಪಂದ್ಯಗಳನ್ನೂ ಆಡಿದ್ದಾರೆ. ಒಟ್ಟು 95 ಪ್ರಥಮ ದರ್ಜೆ ಪಂದ್ಯಗಳಲ್ಲಿ ಆಡಿರುವ ಅವರು 304 ವಿಕೆಟ್ ಗಳಿಸಿದ್ದಾರೆ. 91 ಲಿಸ್ಟ್ ‘ಎ’ ಪಂದ್ಯಗಳಲ್ಲಿ ಆಡಿ 128 ವಿಕೆಟ್‌ಗಳನ್ನು ಗಳಿಸಿದ್ದಾರೆ.

ಟ್ವೆಂಟಿ–20 ಯಲ್ಲಿ ಮಿಥುನ್ ಸಾಧನೆ

ಪಂದ್ಯ; 68

ವಿಕೆಟ್: 65

ಕೊಟ್ಟ ರನ್: 1833

ಶ್ರೇಷ್ಠ: 37ಕ್ಕೆ5

ಪಂಚಗುಚ್ಛ: 2

ವಯಸ್ಸು: 30

ಸ್ಕೋರು
ಹರಿಯಾಣ

8ಕ್ಕೆ194 (20 ಓವರ್‌ಗಳಲ್ಲಿ)

ಚೈತನ್ಯ ಬಿಷ್ಣೋಯಿ ರನ್‌ಔಟ್ (ಮನೀಷ್ ಪಾಂಡೆ) 55

ಹರ್ಷಲ್ ಪಟೇಲ್ ಸಿ ಕರುಣ್ ನಾಯರ್ ಬಿ ಶ್ರೇಯಸ್ ಗೋಪಾಲ್ 34

ಶಿವಂ ಚೌಹಾಣ್ ಎಲ್‌ಬಿಡಬ್ಲ್ಯು ಶ್ರೇಯಸ್ ಗೋಪಾಲ್ 06

ಹಿಮಾಂಶು ರಾಣಾ ಸಿ ಮಯಂಕ್ ಅಗರವಾಲ್ ಬಿ ಅಭಿಮನ್ಯು ಮಿಥುನ್ 61

ರಾಹುಲ್ ತೆವಾಟಿಯಾ ಸಿ ಕರುಣ್ ನಾಯರ್ ಬಿ ಅಭಿಮನ್ಯು ಮಿಥುನ್ 32

ಸುಮಿತ್ ಕುಮಾರ್ ಸಿ ರೋಹನ್ ಕದಂ ಬಿ ಅಭಿಮನ್ಯು ಮಿಥುನ್ 00

ಜಿತೇಶ್ ಸರೊಹಾ ಔಟಾಗದೆ 01

ಅಮಿತ್ ಮಿಶ್ರಾ ಸಿ ಗೌತಮ್ ಬಿ ಅಭಿಮನ್ಯು ಮಿಥುನ್ 00

ಜಯಂತ್ ಯಾದವ್ ಸಿ ಕೆ.ಎಲ್.ರಾಹುಲ್ ಬಿ ಅಭಿಮನ್ಯು ಮಿಥುನ್ 00

ಇತರೆ: (ವೈಡ್ 3, ಲೆಗ್‌ಬೈ 2) 05

ವಿಕೆಟ್ ಪತನ: 1–67 (ಹರ್ಷಲ್;6.4), 2–75 (ಶಿವಂ; 8.1), 3–112 (ಚೈತನ್ಯ;12.3), 4–192 (ಹಿಮಾಂಶು; 19.1), 5–192 (ರಾಹುಲ್;19.2), 6–192 (ಸುಮಿತ್; 19.3), 7–192 (ಮಿಶ್ರಾ;19.4), 8–194 (ಜಯಂತ್;19.6)

ಬೌಲಿಂಗ್

ಅಭಿಮನ್ಯು ಮಿಥುನ್ 4–0–39–5, ರೋನಿತ್ ಮೋರೆ 4–0–51–0, ಕೌಶಿಕ್ ವಾಸುಕಿ 4–0–41–0, ಕೃಷ್ಣಪ್ಪ ಗೌತಮ್ 4–0–38–0, ಶ್ರೇಯಸ್ ಗೋಪಾಲ್ 4–0–23–2.

ಕರ್ನಾಟಕ

2ಕ್ಕೆ 195 (15 ಓವರ್‌ಗಳಲ್ಲಿ)

ಕೆ.ಎಲ್. ರಾಹುಲ್ ಸಿ ಚೈತನ್ಯ ಬಿಷ್ಣೋಯಿ ಬಿ ಜಯಂತ್ ಯಾದವ್ 66

ದೇವದತ್ತ ಪಡಿಕ್ಕಲ್ ಸಿ ಚೈತನ್ಯ ಬಿಷ್ಣೋಯಿ ಬಿ ಹರ್ಷಲ್ ಪಟೇಲ್ 87

ಮಯಂಕ್ ಅಗರವಾಲ್ ಔಟಾಗದೆ 30

ಮನೀಷ್ ಪಾಂಡೆ ಔಟಾಗದೆ 03

ಇತರೆ: (ವೈಡ್ 8, ಲೆಗ್‌ಬೈ 1) 9

ವಿಕೆಟ್ ಪತನ
1–125 (ರಾಹುಲ್; 9.3), 2–182 (ದೇವದತ್ತ; 13.5).

ಬೌಲಿಂಗ್ ವಿವರ

ಹರ್ಷಲ್ ಪಟೇಲ್ 3–0–28–1, ಆಶಿಶ್ ಹೂಡಾ 2–0–31–0, ಯಜುವೇಂದ್ರ ಚಾಹಲ್ 3–0–40–0, ಸುಮಿತ್ ಕುಮಾರ್ 1–0–14–0, ಜಯಂತ್ ಯಾದವ್ 3–0–45–1, ಅಮಿತ್ ಮಿಶ್ರಾ 3–0–36–0.

ಫಲಿತಾಂಶ: ಕರ್ನಾಟಕ ತಂಡಕ್ಕೆ 8 ವಿಕೆಟ್‌ಗಳ ಜಯ. ಫೈನಲ್‌ಗೆ ಪ್ರವೇಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT