ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಗ್ಲಾದೇಶ ಎದುರಿನ ಸರಣಿ ಕ್ಲೀನ್ ಸ್ವೀಪ್ ಮಾಡಿದ ಪಾಕಿಸ್ತಾನ

Last Updated 22 ನವೆಂಬರ್ 2021, 13:56 IST
ಅಕ್ಷರ ಗಾತ್ರ

ಢಾಕಾ: ಸುಲಭ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡ ಬಾಂಗ್ಲಾದೇಶ ಎದುರಿನ ಟ್ವೆಂಟಿ–20 ಕ್ರಿಕೆಟ್ ಸರಣಿಯ ಕೊನೆಯ ಪಂದ್ಯದಲ್ಲಿ ಪ್ರಯಾಸದ ಗೆಲುವು ಸಾಧಿಸಿತು. ಈ ಮೂಲಕ ಮೂರು ಪಂದ್ಯಗಳ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿತು.

ಸೋಮವಾರ ನಡೆದ ಪಂದ್ಯದಲ್ಲಿ 125 ರನ್‌ಗಳ ಜಯದ ಗುರಿ ಬೆನ್ನತ್ತಿದ ಪಾಕಿಸ್ತಾನ ಇನಿಂಗ್ಸ್‌ನ ಕೊನೆಯ ಎಸೆತದಲ್ಲಿ ದಡ ಸೇರಿತು. ಆರಂಭಿಕ ಬ್ಯಾಟರ್ ಮೊಹಮ್ಮದ್ ರಿಜ್ವಾನ್ (40; 43 ಎಸೆತ, 2 ಬೌಂಡರಿ, 1 ಸಿಕ್ಸರ್‌) ಮತ್ತು ಮೂರನೇ ಕ್ರಮಾಂಕದ ಹೈದರ್ ಅಲಿ (45; 38 ಎ 3 ಬೌಂ, 2 ಸಿ) ಅವರ ಅಮೋಘ ಆಟದ ನೆರವಿನಿಂದ ತಂಡ ಸುಲಭ ಗೆಲುವಿನತ್ತ ಹೆಜ್ಜೆ ಹಾಕಿತ್ತು. ಆದರೆ ನಂತರ ಸತತವಾಗಿ ವಿಕೆಟ್‌ಗಳು ಉರುಳಿದವು.

ಮಹಮ್ಮದುಲ್ಲ ಹಾಕಿದ ಕೊನೆಯ ಓವರ್‌ನಲ್ಲಿ ತಂಡದ ಗೆಲುವಿಗೆ ಎಂಟು ರನ್ ಅಗತ್ಯವಿತ್ತು. ಮೊದಲ ಎಸೆತದಲ್ಲಿ ರನ್ ಬಿಟ್ಟುಕೊಡದ ಮಹಮ್ಮದುಲ್ಲ ನಂತರದ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಉರುಳಿಸಿದರು.

ಮೂರನೇ ಎಸೆತದಲ್ಲಿ ಇಫ್ತಿಕಾರ್ ಸಿಕ್ಸರ್ ಸಿಡಿಸಿದರು. ನಾಲ್ಕನೇ ಎಸೆತದಲ್ಲಿ ವಿಕೆಟ್ ಗಳಿಸಿ ಬೌಲರ್‌ ತಿರುಗೇಟು ನೀಡಿದರು. ಹೀಗಾಗಿ ಕೊನೆಯ ಪಂದ್ಯ ಕುತೂಹಲ ಉಂಟುಮಾಡಿತು. ಚೆಂಡನ್ನು ಎಕ್ಸ್‌ಟ್ರಾ ಕವರ್ ಮೂಲಕ ಬೌಂಡರಿಗೆ ಅಟ್ಟಿದ ನವಾಜ್ ತಂಡಕ್ಕೆ ಗೆಲುವಿನ ಕಾಣಿಕೆ ನೀಡಿದರು.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ಏಳು ರನ್ ಗಳಿಸುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಆದರೆ ಆರಂಭಿಕ ಬ್ಯಾಟರ್ ಮೊಹಮ್ಮದ್ ನಯೀಮ್ (47; 50 ಎ, 2 ಬೌಂ, 2 ಸಿ) ಅವರ ಏಕಾಂಗಿ ಹೋರಾಟದ ಬಲದಿಂದ ಮೂರಂಕಿ ಗಡಿ ದಾಟಿತು.

ಸಂಕ್ಷಿಪ್ತ ಸ್ಕೋರು: ಬಾಂಗ್ಲಾದೇಶ: 20 ಓವರ್‌ಗಳಲ್ಲಿ 7ಕ್ಕೆ124 (ಮೊಹಮ್ಮದ್ ನಯೀಮ್ 47, ಶಮೀಮ್ ಹೊಸೇನ್ 22, ಅಫೀಫ್ ಹೊಸೇನ್ 20, ಮಹಮ್ಮದುಲ್ಲ 13; ಶಹನವಾಜ್ ದಹಾನಿ 24ಕ್ಕೆ1, ಮೊಹಮ್ಮದ್ ವಾಸಿಂ15ಕ್ಕೆ2, ಹ್ಯಾರಿಸ್ ರವೂಫ್32ಕ್ಕೆ1, ಉಸ್ಮಾನ್ ಖಾದಿರ್35ಕ್ಕೆ2); ಪಾಕಿಸ್ತಾನ: 20 ಓವರ್‌ಗಳಲ್ಲಿ 5ಕ್ಕೆ 127 (ಮೊಹಮ್ಮದ್ ರಿಜ್ವಾನ್ 40, ಹೈದರ್ ಅಲಿ 45; ಶಹೀದುಲ್ ಇಸ್ಲಾಂ 33ಕ್ಕೆ1, ಅಮೀನುಲ್ ಇಸ್ಲಾಂ26ಕ್ಕೆ1, ಮಹಮ್ಮದುಲ್ಲ 10ಕ್ಕೆ3). ಫಲಿತಾಂಶ: ಪಾಕಿಸ್ತಾನಕ್ಕೆ 5 ವಿಕೆಟ್‌ಗಳ ಜಯ; 3–0ಯಿಂದ ಸರಣಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT