ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡನೇ ಟೆಸ್ಟ್; ಶಾಹೀನ್ ಮಿಂಚು: ಪಾಕಿಸ್ತಾನ ಜಯಭೇರಿ

ವೆಸ್ಟ್ ಇಂಡೀಸ್‌ಗೆ ಸೋಲು: ಸರಣಿ ಸಮಬಲ
Last Updated 25 ಆಗಸ್ಟ್ 2021, 14:08 IST
ಅಕ್ಷರ ಗಾತ್ರ

ಕಿಂಗ್‌ಸ್ಟನ್, ಜಮೈಕಾ (ಎಪಿ): ಮಳೆಯ ಅಡಚಣೆಯ ನಡುವೆಯೂ ಎಡಗೈ ವೇಗದ ಬೌಲರ್‌ ಶಾಹೀನ್ ಶಾ ಅಫ್ರಿದಿ (94ಕ್ಕೆ 10) ಮಿನುಗಿದರು. ಅವರ ಅಮೋಘ ಬೌಲಿಂಗ್ ನೆರವಿನಿಂದ ಪಾಕಿಸ್ತಾನ ತಂಡವು ಎರಡನೇ ಟೆಸ್ಟ್‌ನಲ್ಲಿ ವೆಸ್ಟ್ ಇಂಡೀಸ್ಅನ್ನು 109 ರನ್‌ಗಳಿಂದ ಪ‍ರಾಭವಗೊಳಿಸಿತು. ಇದರೊಂದಿಗೆ ಸರಣಿಯಲ್ಲಿ 1–1ರ ಸಮಬಲ ಸಾಧಿಸಿತು.

ಗೆಲುವಿಗೆ 329 ರನ್‌ಗಳನ್ನು ಗಳಿಸಬೇಕಿದ್ದ ವೆಸ್ಟ್ ಇಂಡೀಸ್ ತಂಡವು ಎರಡನೇ ಇನಿಂಗ್ಸ್‌ನಲ್ಲಿ 219 ರನ್‌ಗಳಿಗೆ ಎಲ್ಲ ವಿಕೆಟ್ ಒಪ್ಪಿಸಿತು. ಈ ಇನಿಂಗ್ಸ್‌ನಲ್ಲಿ ಶಾಹೀನ್‌ ಅವರು ಎದುರಾಳಿ ತಂಡದ ನಾಲ್ಕು ವಿಕೆಟ್‌ ಉರುಳಿಸಿದರು. ಮೊದಲ ಇನಿಂಗ್ಸ್‌ನಲ್ಲಿ ಅವರು ಜೀವನಶ್ರೇಷ್ಠ (51ಕ್ಕೆ 6) ಸಾಮರ್ಥ್ಯ ತೋರಿದ್ದರು. ಸರಣಿಯಲ್ಲಿ ಒಟ್ಟು 18 ವಿಕೆಟ್‌ ಅವರ ಪಾಲಾದವು.

ನಾಲ್ಕನೇ ದಿನದಾಟದ ಅಂತ್ಯಕ್ಕೆ ಒಂದು ವಿಕೆಟ್‌ಗೆ 49 ರನ್ ಗಳಿಸಿದ್ದ ಆತಿಥೇಯ ತಂಡವು, ಮಂಗಳವಾರ ಐದನೇ ದಿನದಾಟದಲ್ಲಿ ಚಹಾ ವಿರಾಮದ ಅಂತ್ಯಕ್ಕೆ ಏಳು ವಿಕೆಟ್ ಕಳೆದುಕೊಂಡು 159 ರನ್ ಗಳಿಸಿತ್ತು. ಇನ್ನೂ 40 ಓವರ್‌ಗಳು ಬಾಕಿ ಇದ್ದವು. ಈ ವೇಳೆ ಕೆಲಕಾಲ ಮಳೆ ಸುರಿದಿದ್ದರಿಂದ ಸೋಲಿನಿಂದ ವೆಸ್ಟ್ ಇಂಡೀಸ್ ಪಾರಾಗುವ ಅವಕಾಶವಿತ್ತು. ಆದರೆ ಮಳೆ ನಿಂತಿದ್ದು ಪ್ರವಾಸಿ ತಂಡದ ಜಯಕ್ಕೆ ಹಾದಿ ಮಾಡಿಕೊಟ್ಟಿತು.

ವೆಸ್ಟ್ ಇಂಡೀಸ್‌ ಪರ ಎರಡನೇ ಇನಿಂಗ್ಸ್‌ನಲ್ಲಿ ಜೇಸನ್ ಹೋಲ್ಡರ್‌ 47 ರನ್‌ ಗಳಿಸಿದ್ದೇ ಗರಿಷ್ಠ ಮೊತ್ತವಾಯಿತು. ನೂಮಾನ್ ಅಲಿ (52ಕ್ಕೆ 3) ಮತ್ತು ಹಸನ್ ಅಲಿ (37ಕ್ಕೆ 2) ಬೌಲಿಂಗ್‌ನಲ್ಲಿ ಪಾಕಿಸ್ತಾನ ಗೆಲುವಿಗೆ ಕಾಣಿಕೆ ನೀಡಿದರು.

ಮೊದಲ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ ತಂಡವು ಒಂದು ವಿಕೆಟ್‌ನಿಂದ ಜಯ ಗಳಿಸಿತ್ತು.

ಸಂಕ್ಷಿಪ್ತ ಸ್ಕೋರ್‌: ಪಾಕಿಸ್ತಾನ: 9 ವಿಕೆಟ್‌ಗೆ 302 ಡಿಕ್ಲೇರ್‌ ಮತ್ತು 6 ವಿಕೆಟ್‌ಗೆ 176 ಡಿಕ್ಲೇರ್‌. ವೆಸ್ಟ್‌ ಇಂಡೀಸ್‌: 150 ಮತ್ತು 83.2 ಓವರ್‌ಗಳಲ್ಲಿ 219 (ಕ್ರೆಗ್‌ ಬ್ರಾಥ್‌ವೇಟ್‌ 39, ಕೈಲ್ ಮಯರ್ಸ್‌ 32, ಜೇಸನ್ ಹೋಲ್ಡರ್‌ 47, ಜರ್ಮೈನ್ ಬ್ಲಾಕ್‌ವುಡ್‌ 25, ಕೀರನ್ ಪೊವೆಲ್‌ 23; ಶಾಹೀನ್ ಶಾ ಆಫ್ರೀದಿ 43ಕ್ಕೆ 4, ಹಸನ್ ಅಲಿ 37ಕ್ಕೆ 2, ನೂಮಾನ್ ಅಲಿ 52ಕ್ಕೆ 3). ಫಲಿತಾಂಶ: ಪಾಕಿಸ್ತಾನ ತಂಡಕ್ಕೆ 109 ರನ್‌ಗಳ ಜಯ. ಎರಡು ಪಂದ್ಯಗಳ ಸರಣಿ 1–1ರಿಂದ ಸಮಬಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT