ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಆಫ್ರಿಕಾ-ಪಾಕಿಸ್ತಾನ ಎರಡನೇ ಟೆಸ್ಟ್‌: ಆ್ಯನ್ರಿಚ್‌ಗೆ ಐದು ವಿಕೆಟ್‌

ಪಾಕಿಸ್ತಾನದ ಪರ ಅರ್ಧಶತಕ ಗಳಿಸಿದ ಫಹೀಂ ಅಶ್ರಫ್‌; ಎರಡು ವಿಕೆಟ್‌ ಉರುಳಿಸಿದ ಹಸನ್ ಅಲಿ
Last Updated 5 ಫೆಬ್ರುವರಿ 2021, 14:04 IST
ಅಕ್ಷರ ಗಾತ್ರ

ರಾವಲ್ಪಿಂಡಿ: ಐದು ವಿಕೆಟ್ ಉರುಳಿಸಿದ ವೇಗಿ ಆ್ಯನ್ರಿಚ್ ನೊರ್ಕಯೆ ಅವರ ದಾಳಿಗೆ ಕುಸಿದರೂ ತಿರುಗೇಟು ನೀಡಿದ ಆತಿಥೇಯ ಪಾಕಿಸ್ತಾನ ತಂಡ ಇಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ಎದುರಿನ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನ ಮೇಲುಗೈ ಸಾಧಿಸಿದೆ. ಪಾಕಿಸ್ತಾನದ 272 ರನ್‌ಗಳಿಗೆ ಉತ್ತರವಾಗಿ ದಿನದಾಟದ ಅಂತ್ಯಕ್ಕೆ ಪ್ರವಾಸಿ ತಂಡ ನಾಲ್ಕು ವಿಕೆಟ್ ಕಳೆದುಕೊಂಡು 106 ರನ್ ಗಳಿಸಿದೆ.

ದಕ್ಷಿಣ ಆಫ್ರಿಕಾದ ಆರಂಭಿಕ ಬ್ಯಾಟ್ಸ್‌ಮನ್ ಡೀನ್ ಎಲ್ಗರ್ ಅವರನ್ನು ಹಸನ್ ಅಲಿ ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ ಮುಷ್ಠಿಯಲ್ಲಿ ಬಂದಿಯಾಗಿಸಿದಾಗ ತಂಡದ ಮೊತ್ತ ಕೇವಲ 26 ಆಗಿತ್ತು. ಮುಂದಿನ ಎಸೆತದಲ್ಲಿ ವ್ಯಾನ್ ಡೆರ್ ಡುಸೆನ್ ಅವರನ್ನು ಬೌಲ್ಡ್ ಮಾಡಿದ ಹಸನ್ ಅಲಿ ಪಾಕಿಸ್ತಾನ ಪಾಳಯದಲ್ಲಿ ಸಂಭ್ರಮ ಉಕ್ಕಿಸಿದರು. ಕರಾಚಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಕೇವಲ 23 ಮತ್ತು 17 ರನ್ ಗಳಿಸಿದ್ದ ಅನುಭವಿ ಆಟಗಾರ ಫಾಫ್ ಡು ಪ್ಲೆಸಿ ಇಲ್ಲಿಯೂ ವೈಫಲ್ಯ ಕಂಡರು. ವೇಗಿ ಫಹೀಂ ಅಶ್ರಫ್ ಎಸೆತದಲ್ಲಿ ಕೆಟ್ಟ ಹೊಡೆತಕ್ಕೆ ಮುಂದಾದ ಪ್ಲೆಸಿ ವಿಕೆಟ್ ಕೀಪರ್‌ಗೆ ಕ್ಯಾಚ್ ನೀಡಿದರು.

ದಿನದಾಟದ ಮುಕ್ತಾಯಕ್ಕೆ ನಾಲ್ಕು ಓವರ್ ಬಾಕಿ ಇರುವಾಗ ಆರಂಭಿಕ ಬ್ಯಾಟ್ಸ್‌ಮನ್ ಏಡನ್ ಮರ್ಕರಂ ವಿಕೆಟ್ ಕಳೆದುಕೊಂಡರು. 60 ಎಸೆತಗಳಲ್ಲಿ 32 ರನ್‌ ಗಳಿಸಿದ್ದ ಅವರ ಇನಿಂಗ್ಸ್‌ಗೆ ಸ್ಪಿನ್ನರ್ ನೌಮನ್ ಅಲಿ ಅಂತ್ಯ ಹಾಡಿದರು. ನಾಯಕ ಕ್ವಿಂಟನ್ ಡಿ ಕಾಕ್ ಮತ್ತು ತೆಂಬಾ ಬವುಮಾ ಕ್ರೀಸ್‌ನಲ್ಲಿದ್ದು 25 ರನ್‌ಗಳ ಜೊತೆಯಾಟವಾಡಿ ಭರವಸೆ ಮೂಡಿಸಿದ್ದಾರೆ.

ಮಳೆ ಅಡ್ಡಿಪಡಿಸಿದ ಮೊದಲ ದಿನ ಪಾಕಿಸ್ತಾನ ಮೂರು ವಿಕೆಟ್ ಕಳೆದುಕೊಂಡು 145 ರನ್ ಗಳಿಸಿತ್ತು. ಶುಕ್ರವಾರ ನೊರ್ಕಯೆ ದಾಳಿಗೆ ನಲುಗಿ ಬೇಗನೇ ಆಲೌಟಾಯಿತು. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ನೊರ್ಕಯೆಗೆ ಲಭಿಸಿದ ಮೂರನೇ ಐದು ವಿಕೆಟ್ ಗೊಂಚಲು ಆಗಿದೆ. ದಿನದಾಟದ ಎರಡನೇ ಎಸೆತದಲ್ಲಿ ಬಾಬರ್ ಆಜಂ ಅವರನ್ನು ಪೆವಿಲಿಯನ್‌ಗೆ ಅಟ್ಟಿದ ನೊರ್ಕಯೆ ಚಹಾ ವಿರಾಮಕ್ಕೂ ಅರ್ಧ ತಾಸು ಮೊದಲು ಆತಿಥೇಯರ ಇನಿಂಗ್ಸ್‌ಗೆ ಕೊನೆ ಹಾಡಲು ನೆರವಾದರು. ಕೇಶವ್ ಮಹಾರಾಜ್ ಕೂಡ ಉತ್ತಮ ದಾಳಿ ಸಂಘಟಿಸಿದರು.

ದಕ್ಷಿಣ ಆಫ್ರಿಕಾ ಬೌಲರ್‌ಗಳ ಕರಾರುವಾಕ್ ದಾಳಿಯ ಹೊರತಾಗಿಯೂ ಫವಾದ್ ಆಲಂ (45; 155 ಎಸೆತ, 5 ಬೌಂಡರಿ), ಬಾಬರ್ ಆಜಂ (77; 127 ಎ, 12 ಬೌಂ) ಮತ್ತು ಫಹೀಂ ಅಶ್ರಫ್‌ (78; 160 ಎ, 12 ಬೌಂ) ಅಮೋಘ ಬ್ಯಾಟಿಂಗ್ ಮೂಲಕ ತಂಡ ಗೌರವಾರ್ಹ ಮೊತ್ತ ಗಳಿಸಲು ನೆರವಾದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌, ಪಾಕಿಸ್ತಾನ: (ಗುರುವಾರ 58 ಓವರ್‌ಗಳಲ್ಲಿ 3ಕ್ಕೆ145): 114.3 ಓವರ್‌ಗಳಲ್ಲಿ 272 (ಬಾಬರ್ ಆಜಂ 77, ಫವಾದ್ ಆಲಂ 45, ಫಾಹಿಂ ಅಶ್ರಫ್‌ ಔಟಾಗದೆ 78; ಆ್ಯನ್ರಿಚ್ ನೊರ್ಕಯೆ 56ಕ್ಕೆ5, ಕೇಶವ್ ಮಹಾರಾಜ್ 90ಕ್ಕೆ3, ವಿಯಾನ್ ಮಲ್ಡರ್ 40ಕ್ಕೆ1); ದಕ್ಷಿಣ ಆಫ್ರಿಕಾ: 28 ಓವರ್‌ಗಳಲ್ಲಿ 4ಕ್ಕೆ 106 (ಏಡನ್ ಮರ್ಕರಂ 32, ತೆಂಬಾ ಬವುಮಾ ಬ್ಯಾಟಿಂಗ್ 15, ಕ್ವಿಂಟನ್ ಡಿ ಕಾಕ್ ಬ್ಯಾಟಿಂಗ್ 24; ಹಸನ್ ಅಲಿ 29ಕ್ಕೆ2, ಫಹೀಂ ಅಶ್ರಫ್ 16ಕ್ಕೆ1, ನೌಮನ್ ಅಲಿ 19ಕ್ಕೆ1).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT