ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಫರಾಜ್ ಬಳಗಕ್ಕೆ ಕೇನ್ ಸವಾಲು

ಪ್ರಬಲ ನ್ಯೂಜಿಲೆಂಡ್– ಉತ್ಸಾಹಿ ಪಾಕಿಸ್ತಾನ ಹಣಾಹಣಿ ಇಂದು
Last Updated 25 ಜೂನ್ 2019, 19:03 IST
ಅಕ್ಷರ ಗಾತ್ರ

ಬರ್ಮಿಂಗಂ (ಪಿಟಿಐ): ಗೆಲುವಿನ ಲಯದಲ್ಲಿ ತೇಲುತ್ತಿರುವ ಬಲಿಷ್ಠ ನ್ಯೂಜಿಲೆಂಡ್ ತಂಡವನ್ನು ಬುಧವಾರ ಪಾಕಿಸ್ತಾನ ತಂಡವು ಎದುರಿಸಲಿದೆ.

ಸತತ ಎರಡು ಪಂದ್ಯಗಳಲ್ಲಿ ಶತಕ ಹೊಡೆದು ತಂಡಕ್ಕೆ ಜಯದ ಕಾಣಿಕೆ ನೀಡಿರುವ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ಅವರನ್ನು ಎದುರಿಸುವುದೇ ಈಗ ಪಾಕ್ ತಂಡದ ಮುಂದಿರುವ ದೊಡ್ಡ ಸವಾಲು. ಕೇನ್ ಬಳಗವು ಟೂರ್ನಿಯಲ್ಲಿ ಇದುವರೆಗೆ ಒಂದೂ ಪಂದ್ಯವನ್ನು ಸೋತಿಲ್ಲ. ಆದರೆ ಐದು ಪಂದ್ಯಗಳನ್ನಾಡಿರುವ ಪಾಕ್ ತಂಡವು ಎರಡರಲ್ಲಿ ಮಾತ್ರ ಗೆದ್ದಿದೆ. ಭಾರತದ ಎದುರು ಮ್ಯಾಂಚೆಸ್ಟರ್‌ನಲ್ಲಿ ಸೋತ ನಂತರ ದಕ್ಷಿಣ ಆಫ್ರಿಕಾ ಎದುರು ಮತ್ತೆ ಗೆಲುವಿನ ಲಯಕ್ಕೆ ಮರಳಿತ್ತು. ಇದರಿಂದಾಗಿ ಕಿವೀಸ್ ಎದುರು ಉತ್ತಮವಾಗಿ ಆಡುವ ಭರವಸೆಯಲ್ಲಿ ಸರ್ಫರಾಜ್ ಅಹಮದ್ ಬಳಗವಿದೆ.

ಕಿವೀಸ್ ತಂಡದ ಆರಂಭಿಕ ಜೋಡಿ ಮಾರ್ಟಿನ್ ಗಪ್ಟಿಲ್ ಮತ್ತು ಕಾಲಿನ್ ಮನ್ರೊ ಅವರು ಸ್ಥಿರ ಪ್ರದರ್ಶನ ನೀಡುತ್ತಿಲ್ಲ. ಹೋದ ಪಂದ್ಯದಲ್ಲಿ (ವಿಂಡೀಸ್ ಎದುರು) ಇಬ್ಬರೂ ಸೊನ್ನೆ ಸುತ್ತಿದ್ದರು. ಕೇನ್ ಮತ್ತು ರಾಸ್ ಟೇಲರ್ ಅವರ ಜೊತೆಯಾಟದ ಬಲದಿಂದ ತಂಡವು ಹೋರಾಟದ ಮೊತ್ತ ಗಳಿಸಿತ್ತು. ಬೌಲಿಂಗ್‌ನಲ್ಲಿ ಟ್ರೆಂಟ್ ಬೌಲ್ಟ್ ಮಿಂಚಿದ್ದರು. ಟಿಮ್ ಸೌಥಿ ಮತ್ತು ಲಾಕಿ ಫರ್ಗ್ಯುಸನ್ ಕೂಡ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಎಲ್ಲಕ್ಕಿಂತ ಮಿಗಿಲಾಗಿ ಇನಿಂಗ್ಸ್‌ನ ಕೊನೆಯ ಎಸೆತದವರೆಗೂ ಶಾಂತಚಿತ್ತದಿಂದ ಯೋಜನೆಗಳನ್ನು ಹೆಣೆಯುತ್ತ ಎದುರಾಳಿಗಳನ್ನು ಕಂಗೆಡಿಸುವ ಕೇನ್ ನಾಯಕತ್ವ ತಂಡದ ದೊಡ್ಡ ಶಕ್ತಿ. ತಂಡಕ್ಕೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿಯೇ ಮುಂದುವರೆಯುವ ಗುರಿ ಮಾತ್ರ ಈಗ ಅವರ ಮುಂದಿದೆ. ಸೆಮಿಫೈನಲ್ ಪ್ರವೇಶ ಬಹುತೇಕ ಖಚಿತವಾಗಿದೆ.

ಆದರೆ, ಸರ್ಫರಾಜ್ ಬಳಗವು ನಾಲ್ಕರ ಘಟ್ಟದ ಕನಸು ಜೀವಂತವಾಗಿ ಉಳಿಯಲಿದೆ. ಆದ್ದರಿಂದ ಕಿವೀಸ್ ಸವಾಲನ್ನು ಮೀರಿ ನಿಲ್ಲಬೇಕಿದೆ. ಬ್ಯಾಟಿಂಗ್‌ನಲ್ಲಿ ಬಾಬರ್ ಅಜಂ ಮತ್ತು ಹ್ಯಾರಿಸ್ ಸೊಹೈಲ್ ಅವರು ಚೆನ್ನಾಗಿ ಆಡಿದ್ದಾರೆ. ಆದರೆ ಉಳಿದವರಿಂದ ಸ್ಥಿರವಾದ ಆಟ ಮೂಡಿಬರುತ್ತಿಲ್ಲ. ಬೌಲಿಂಗ್ ವಿಭಾಗವು ಚೆನ್ನಾಗಿದೆ. ಮೊಹಮ್ಮದ್ ಅಮೀರ್, ವಹಾಬ್ ರಿಯಾಜ್ ಅವರು ತಂಡವನ್ನು ಗೆಲುವಿನೆಡೆಗೆ ನಡೆಸುವ ಸಮರ್ಥರಾಗಿದ್ದಾರೆ. ಆದ್ದರಿಂದ ಬೌಲಿಂಗ್‌ ವಿಭಾಗದ ಮೇಲೆಯೇ ಪಾಕ್ ಹೆಚ್ಚು ಅವಲಂಬಿತವಾಗಿದೆ. ಕಿವೀಸ್‌ ತಂಡದ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುವ ಸವಾಲು ಬೌಲರ್‌ಗಳ ಮುಂದಿದೆ.

ತಂಡಗಳು

ನ್ಯೂಜಿಲೆಂಡ್: ಕೇನ್ ವಿಲಿಯಮ್ಸನ್ (ನಾಯಕ), ಟಾಮ್ ಬ್ಲಂಡೆಲ್, ಟ್ರೆಂಟ್ ಬೌಲ್ಟ್, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಲಾಕಿ ಫರ್ಗ್ಯುಸನ್, ಮಾರ್ಟಿನ್ ಗಪ್ಟಿಲ್, ಮ್ಯಾಟ್ ಹೆನ್ರಿ, ಟಾಮ್ ಲಥಾಮ್, ಕಾಲಿನ್ ಮನ್ರೊ, ಜಿಮ್ಮಿ ನಿಶಾಮ್, ಹೆನ್ರಿ ನಿಕೊಲ್ಸ್, ಮಿಷೆಲ್ ಸ್ಯಾಂಟನರ್, ಈಶ್ ಸೋಧಿ, ಟಿಮ್ ಸೌಥಿ, ರಾಸ್ ಟೇಲರ್.

ಪಾಕಿಸ್ತಾನ: ಸರ್ಫರಾಜ್ ಅಹಮದ್ (ನಾಯಕ), ಫಕ್ರ್‌ ಜಮಾನ್, ಶಾಹೀನ್ ಅಫ್ರಿದಿ, ಅಸಿಫ್ ಅಲಿ, ಹಸನ್ ಅಲಿ, ಮೊಹಮ್ಮದ್ ಅಮೀರ್, ಬಾಬರ್ ಅಜಂ, ಮೊಹಮ್ಮದ್ ಹಫೀಜ್, ಇಮಾಮ್ ಉಲ್ ಹಕ್, ಮೊಹಮ್ಮದ್ ಹಸನೈನ್, ಶಾದಾಬ್ ಖಾನ್, ಶೊಯಬ್ ಮಲಿಕ್, ವಹಾಬ್ ರಿಯಾಜ್, ಹ್ಯಾರಿಸ್ ಸೊಹೈಲ್, ಇಮಾದ್ ವಸೀಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT