ಶುಕ್ರವಾರ, ಸೆಪ್ಟೆಂಬರ್ 20, 2019
27 °C

ಕ್ಯಾಪಿಟಲ್ಸ್ ತಂಡದ ಸಾಧನೆ ಖುಷಿ ತಂದಿದೆ: ಆಮ್ರೆ

Published:
Updated:
Prajavani

ಹೈದರಾಬಾದ್‌: ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮಾಡಿರುವ ಸಾಧನೆ ತೃಪ್ತಿ ತಂದಿದೆ ಎಂದು ಕೋಚ್‌ ಪ್ರವೀಣ್ ಆಮ್ರೆ ಅಭಿಪ್ರಾಯಪಟ್ಟರು. ಶುಕ್ರವಾರ ನಡೆದ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ತಂಡ ಸೋತ ನಂತರ ಅವರು ಮಾತನಾಡಿದರು.

ಪಂದ್ಯದಲ್ಲಿ ಆರು ವಿಕೆಟ್‌ಗಳಿಂದ ಗೆದ್ದ ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್ ಕಿಂಗ್ಸ್ ಫೈನಲ್‌ಗೆ ಪ್ರವೇಶಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಕ್ಯಾಪಿಟಲ್ಸ್ ಒಂಬತ್ತು ವಿಕೆಟ್ ಕಳೆದುಕೊಂಡು 147 ರನ್ ಗಳಿಸಿತ್ತು. ಕಾಲಿನ್ ಮನ್ರೊ (27) ಮತ್ತು ರಿಷಭ್ ಪಂತ್ (38) ಅವರನ್ನು ಹೊರತುಪಡಿಸಿದರೆ ಇತರ ಯಾರಿಗೂ ಬ್ಯಾಟಿಂಗ್‌ನಲ್ಲಿ ಮಿಂಚಲು ಆಗಲಿಲ್ಲ.

ಆರಂಭಿಕ ಜೋಡಿ ಪೃಥ್ವಿ ಶಾ ಮತ್ತು ಶಿಖರ್ ಧವನ್‌, ನಾಯಕ ಶ್ರೇಯಸ್ ಅಯ್ಯರ್‌ ಮುಂತಾದವರ ವೈಫಲ್ಯ ಕಂಡರು.

ಗುರಿ ಬೆನ್ನತ್ತಿದ ಸೂಪರ್ ಕಿಂಗ್ಸ್ 19 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು. ಫಾಫ್ ಡು ಪ್ಲೆಸಿ ಮತ್ತು ಶೇನ್ ವಾಟ್ಸನ್‌ ತಲಾ 50 ರನ್‌ ಗಳಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಮೊದಲ ವಿಕೆಟ್‌ಗೆ ಇವರಿಬ್ಬರು 81 ರನ್ ಸೇರಿಸಿದರು. ಉಳಿದ ಬ್ಯಾಟ್ಸ್‌ಮನ್‌ಗಳು ಸುಲಭವಾಗಿ ತಂಡವನ್ನು ಗುರಿ ಮುಟ್ಟಿಸಿದರು.

‘ತಂಡ ಈ ಬಾರಿ ಮಾಡಿರುವ ಸಾಧನೆ ಹೆಮ್ಮೆ ಮೂಡಿಸಿದೆ. ರಿಕಿ ಪಾಂಟಿಂಗ್ ಮತ್ತು ಸೌರವ್ ಗಂಗೂಲಿ ಅವರ ಮಾರ್ಗದರ್ಶನ ಇದಕ್ಕೆ ಕಾರಣ. ರಿಷಭ್ ಪಂತ್‌, ಶ್ರೇಯಸ್ ಅಯ್ಯರ್, ಕಗಿಸೊ ರಬಾಡ ಮುಂತಾದವರು ನೆನಪಿನಲ್ಲಿ ಉಳಿಯುವಂಥ ಆಟ ಆಡಿದ್ದಾರೆ’ ಎಂದು ಆಮ್ರೆ ಹೇಳಿದರು.

Post Comments (+)