ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಭಾರತ vs ಇಂಗ್ಲೆಂಡ್ | ನಾಲ್ಕರ ಘಟ್ಟದ ಮೇಲೆ ವಿರಾಟ್ ಬಳಗದ ಕಣ್ಣು

ಕಠಿಣ ಹಾದಿಯಲ್ಲಿ ಇಂಗ್ಲೆಂಡ್; ಅಮೋಘ ಲಯದಲ್ಲಿರುವ ವಿರಾಟ್, ಧೋನಿ; ಭಾರತದ ಗೆಲುವಿಗೆ ಪಾಕ್ ಅಭಿಮಾನಿಗಳ ಹಾರೈಕೆ!
Last Updated 30 ಜೂನ್ 2019, 2:10 IST
ಅಕ್ಷರ ಗಾತ್ರ

ಬರ್ಮಿಂಗಂ: ‘ಇಂಗ್ಲೆಂಡ್ ಎದುರು ಭಾರತ ಗೆಲ್ಲಲಿ ಎಂದು ಪಾಕಿಸ್ತಾನದವರು ಕೂಡ ಹಾರೈಸುತ್ತಿದ್ದಾರೆ. ಇದೊಂದು ಐತಿಹಾಸಿಕ ಕ್ಷಣ. ಇದು ಕ್ರಿಕೆಟ್‌ನ ಸೊಬಗು...’

- ಇಂತಹ ಹತ್ತಾರು ಬಗೆಯ ಸಂದೇಶಗಳ ಭರಾಟೆ ಯು ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿದೆ. ಭಾನುವಾರ ಎಜ್‌ಬಾಸ್ಟನ್‌ನಲ್ಲಿ ನಡೆಯಲಿರುವ ಭಾರತ ಮತ್ತು ಇಂಗ್ಲೆಂಡ್ ನಡುವಣ ಪಂದ್ಯವು ಈಗ ಇದೇ ಕಾರಣಕ್ಕಾಗಿ ಸುದ್ದಿ ಮಾಡುತ್ತಿದೆ.

ಶನಿವಾರ ರಾತ್ರಿ ಅಫ್ಗಾನಿಸ್ತಾನ ಎದುರು ಪಾಕ್ ರೋಚಕ ಜಯ ಸಾಧಿಸಿತು. ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿತು. ಇದರಿಂದಾಗಿ ಪಾಕ್ ಅಭಿಮಾನಿಗಳ ಚಿತ್ತ ಈಗ ಭಾನುವಾರದ ಪಂದ್ಯದತ್ತ ನೆಟ್ಟಿದೆ.

ಅದರಲ್ಲಿ ಆತಿಥೇಯರು ಸೋತರೆ ಪಾಕ್ ತಂಡವು ಸೆಮಿಫೈನಲ್‌ ಪ್ರವೇಶಿಸುವ ಅವಕಾಶ ಹೆಚ್ಚಲಿದೆ. ಆದ್ದರಿಂದಲೇ ಪಾಕಿಸ್ತಾನದ ಹಲವು ದಿಗ್ಗಜ ಕ್ರಿಕೆಟಿಗರೂ ಭಾರತ ಗೆಲ್ಲಬೇಕು ಎಂದು ಆಶಿಸಿದ್ದಾರೆ.

ಜೂನ್‌ 3ರಂದು ಪಾಕ್ ಎದುರು ಸೋತಿದ್ದ ಇಂಗ್ಲೆಂಡ್, ನಂತರದ ಮೂರು ಪಂದ್ಯಗಳಲ್ಲಿ ಗೆದ್ದಿತ್ತು. ಆಗ ಬ್ಯಾಟ್ಸ್‌ಮನ್‌ಗಳು ರನ್‌ಗಳ ಹೊಳೆ ಹರಿಸಿದ್ದರೆ, ವೇಗಿಗಳು ಬಿರುಗಾಳಿ ಎಬ್ಬಿಸಿದ್ದರು. ಆದರೆ ಹೋದ ಎರಡು ಪಂದ್ಯಗಳಲ್ಲಿ ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ಎದುರು ಸೋತು ಕಳೆಗುಂದಿತು. ಇದರಿಂದಾಗಿ ಬಾಂಗ್ಲಾ ಮತ್ತು ಪಾಕ್ ತಂಡಗಳಲ್ಲಿ ನಾಲ್ಕರ ಘಟ್ಟದ ಕನಸು ಕುಡಿಯೊಡೆಯಿತು. ಆದ್ದರಿಂದ ರೌಂಡ್‌ ರಾಬಿನ್ ಲೀಗ್ ರೋಚಕ ಘಟ್ಟ ತಲುಪಿದಂತಾಗಿದೆ.

ಈ ಪೈಪೋಟಿಯಲ್ಲಿ ಭಾರತ ತಂಡವು ‘ಅಜೇಯ’ವಾಗಿ ಮುನ್ನುಗ್ಗುತ್ತಿದೆ. ಕೊಹ್ಲಿ ಪಡೆ ಈ ಪಂದ್ಯದಲ್ಲಿ ಗೆದ್ದರೆ ಸೆಮಿಫೈನಲ್ ಪ್ರವೇಶ ಖಚಿತವಾಗುತ್ತದೆ. ಆಸ್ಟ್ರೇಲಿಯಾ ತಂಡವು ಈಗಾಗಲೇ ಮೊದಲ ಸ್ಥಾನದಲ್ಲಿದೆ. ಆದ್ದರಿಂದ ಈ ಪಂದ್ಯ ವಿರಾಟ್‌ ಬಳಗಕ್ಕೂ ಮಹತ್ವದ್ದು.

ಸತತ ನಾಲ್ಕು ಅರ್ಧಶತಕಗಳನ್ನು ಬಾರಿಸಿ ಅಮೋಘ ಫಾರ್ಮ್‌ನಲ್ಲಿರುವ ವಿರಾಟ್, ಅವಶ್ಯಕತೆಗೆ ತಕ್ಕಂತೆ ಆಡುವ ಅನುಭವಿ ಮಹೇಂದ್ರಸಿಂಗ್ ಧೋನಿ ಮತ್ತು ಸ್ಫೋಟಕ ಶೈಲಿಯ ಆಟಗಾರ ಹಾರ್ದಿಕ್ ಪಾಂಡ್ಯ ಅವರು ಭಾರತ ತಂಡದ ಬ್ಯಾಟಿಂಗ್‌ ಬೆನ್ನೆಲುಬು.

ಕೆ.ಎಲ್. ರಾಹುಲ್ ಮತ್ತು ರೋಹಿತ್ ಶರ್ಮಾ ಅವರ ಜೋಡಿಯು ದೊಡ್ಡ ಮೊತ್ತದ ಆರಂಭ ನೀಡುವಲ್ಲಿ ಕಳೆದ ಎರಡೂ ಪಂದ್ಯಗಳಲ್ಲಿ ಸಫಲವಾಗಿಲ್ಲ. ಶಿಖರ್ ಧವನ್ ಗಾಯಗೊಂಡಿದ್ದರಿಂದ ಇನಿಂಗ್ಸ್‌ ಆರಂಭಿಸುತ್ತಿರುವ ರಾಹುಲ್ ಹೊಸ ಚೆಂಡಿಗೆ ಇನ್ನೂ ಕುದುರಿಕೊಳ್ಳಬೇಕಿದೆ. ಇಂಗ್ಲೆಂಡ್‌ನ ಕ್ರಿಸ್ ವೋಕ್ಸ್‌, ಮಾರ್ಕ್ ವುಡ್ ಮತ್ತು ಶರವೇಗಿ ಜೋಫ್ರಾ ಆರ್ಚರ್ ಅವರನ್ನು ಎದುರಿಸಬೇಕಿದೆ.

ಟೂರ್ನಿಯಲ್ಲಿ ಎರಡು ಶತಕ ಹೊಡೆದಿರುವ ರೋಹಿತ್ ಶರ್ಮಾ ಉತ್ತಮ ಆರಂಭ ನೀಡಿದರೆ ತಂಡಕ್ಕೆ ದೊಡ್ಡ ಮೊತ್ತ ಕಲೆಹಾಕಲು ಅಥವಾ ಬೆನ್ನತ್ತಲು ಶಕ್ತಿ ಲಭಿಸುತ್ತದೆ. ನಾಲ್ಕನೇ ಕ್ರಮಾಂಕದ ಜೂಜಾಟಕ್ಕೆ ಇನ್ನೂ ಪರಿಹಾರ ಸಿಕ್ಕಿಲ್ಲ. ವಿಜಯಶಂಕರ್ ತಮ್ಮ ಸಾಮರ್ಥ್ಯ ತೋರಿಲ್ಲ. ಆದ್ದರಿಂದ ಈ ಪಂದ್ಯದಲ್ಲಿ ರಿಷಭ್ ಪಂತ್‌ಗೆ ಸ್ಥಾನ ಸಿಗಬಹುದೇ ಎಂಬುದನ್ನು ನೋಡಬೇಕು. ಆಲ್‌ರೌಂಡರ್ ಕೇದಾರ್ ಜಾಧವ್ ಅವರಿಗೆ ವಿಶ್ರಾಂತಿ ನೀಡಿದರೆ ಎಡಗೈ ಬೌಲರ್‌ ರವೀಂದ್ರ ಜಡೇಜ ಕಣಕ್ಕಿಳಿಯಬಹುದು. ಉತ್ತಮ ಬೌಲಿಂಗ್ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಬೂಮ್ರಾ, ಸ್ಪಿನ್ನರ್ ಚಾಹಲ್ ಮತ್ತು ಚೈನಾಮನ್ ಬೌಲರ್ ಕುಲದೀಪ್ ಯಾದವ್, ‘ಹ್ಯಾಟ್ರಿಕ್ ಸಾಧಕ’ ಶಮಿ ಅವರಿಗೆ ಇಲ್ಲಿ ಕಠಿಣ ಸವಾಲಿದೆ. ಇಂಗ್ಲೆಂಡ್‌ನ ಜಾನಿ ಬೆಸ್ಟೊ, ಇಯಾನ್ ಮಾರ್ಗನ್, ಬೆನ್ ಸ್ಟೋಕ್ಸ್‌, ಜೋಸ್ ಬಟ್ಲರ್ ಮತ್ತು ಜೋ ರೂಟ್ ಅವರನ್ನು ಕಟ್ಟಿಹಾಕಬೇಕಿದೆ. ಸ್ವಲ್ಪ ಅವಕಾಶ ಸಿಕ್ಕರೂ ರನ್‌ಗಳ ಹೊಳೆಯನ್ನೇ ಹರಿಸುವ ಸಾಮರ್ಥ್ಯ ಇವರಿಗೆ ಇದೆ.1983 ಮತ್ತು 1999ರಲ್ಲಿ ತನ್ನ ತವರಿ ನಲ್ಲಿಯೇ ಇಂಗ್ಲೆಂಡ್ ತಂಡವು ಭಾರತಕ್ಕೆ ಶರಣಾಗಿತ್ತು.

ಅದೇ ದಾಖಲೆ ಯನ್ನು ಮುಂದು ವರಿಸುವ ಛಲದಲ್ಲಿ ವಿರಾಟ್ ಬಳಗವಿದೆ.

ಬೆಂಗಳೂರು ‘ಟೈ’ ಪಂದ್ಯದ ನೆನಪು

ಭಾರತ ಮತ್ತು ಇಂಗ್ಲೆಂಡ್ ತಂಡಗಳು ಇದುವರೆಗೆ ವಿಶ್ವಕಪ್ ಟೂರ್ನಿಗಳಲ್ಲಿ ಏಳು ಬಾರಿ ಮುಖಾಮುಖಿಯಾಗಿವೆ. ಆದರೆ, ಆ ಎಲ್ಲ ಪಂದ್ಯಗಳಲ್ಲಿಯೂ ಅತ್ಯಂತ ರೋಚಕ ರಸದೌತಣ ನೀಡಿದ್ದ 2011ರ ಟೈ ಪಂದ್ಯವನ್ನು ಕ್ರಿಕೆಟ್ ಜಗತ್ತು ಮರೆಯಲು ಸಾಧ್ಯವೇ ಇಲ್ಲ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಆ ಪಂದ್ಯದಲ್ಲಿ ರನ್‌ಗಳ ಹೊಳೆಯೇ ಹರಿದಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡವು 338 ರನ್‌ ಗಳಿಸಿತ್ತು. ಸಚಿನ್ ತೆಂಡೂಲ್ಕರ್ ಶತಕ ಹೊಡೆದಿದ್ದರು. ಇಂಗ್ಲೆಂಡ್ ಬವಲರ್ ಟಿ.ಟಿ. ಬ್ರೆಸ್ನನ್ ಐದು ವಿಕೆಟ್ ಪಡೆದಿದ್ದರು. ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡವು 50 ಓವರ್‌ಗಳಲ್ಲಿ ಎಂಟು ವಿಕೆಟ್‌ಗಳ ನಷ್ಟಕ್ಕೆ 338 ರನ್‌ ಹೊಡೆಯಿತು. ಆ್ಯಂಡ್ರ್ಯೂ ಸ್ಟಾರ್ಸ್ ಅವರು ಶತಕ ಹೊಡೆದರು. ವಿಶ್ವಕಪ್ ಇತಿಹಾಸದಲ್ಲಿ ಅತ್ಯಂತ ರೋಚಕ ಪಂದ್ಯಗಳ ಪಟ್ಟಿಯನ್ನು ಆ ಹಣಾಹಣಿ ಸೇರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT