ಶುಕ್ರವಾರ, ಸೆಪ್ಟೆಂಬರ್ 17, 2021
30 °C

ರಿಷಭ್‌ ಪಂತ್‌ಗೆ ಪೃಥ್ವಿ ‘ಶಾ’ಹಬ್ಬಾಸ್‌ಗಿರಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಿಶಾಖಪಟ್ಟಣ: ತಂಡದ ಸಹ ಆಟಗಾರ ರಿಷಭ್ ಪಂತ್ ಬಗ್ಗೆ ಮೆಚ್ಚುಗೆಯ ನುಡಿಗಳನ್ನಾಡಿರುವ ಯುವ ಆಟಗಾರ ಪೃಥ್ವಿ ಶಾ ‘ರಿಷಭ್ ಹೊಸ ಪೀಳಿಗೆಯ ಆಟಗಾರರ ಪೈಕಿ ಉತ್ತಮ ಫಿನಿಷರ್’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಬುಧವಾರ ರಾತ್ರಿ ಇಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಎದುರು ನಡೆದಿದ್ದ ಎಲಿಮಿನೇಟರ್ ಪಂದ್ಯದಲ್ಲಿ ಪೃಥ್ವಿ ಶಾ (58; 38 ಎಸೆತ, 2 ಸಿಕ್ಸರ್‌, 6 ಬೌಂಡರಿ) ಮತ್ತು ರಿಷಭ್ ಪಂತ್ (49; 21 ಎ, 5 ಸಿ, 2 ಬೌಂ) ಅವರ ಅಮೋಘ ಆಟದ ಬಲದಿಂದ ಕ್ಯಾಪಿಟಲ್ಸ್ ಎರಡು ವಿಕೆಟ್‌ಗಳಿಂದ ಗೆದ್ದಿತ್ತು.

163 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಕ್ಯಾಪಿಟಲ್ಸ್‌ 19.5 ಓವರ್‌ಗಳಲ್ಲಿ ಜಯದ ನಗೆ ಸೂಸಿತ್ತು. ಮೊದಲ ವಿಕೆಟ್‌ಗೆ ಪೃಥ್ವಿ ಶಾ ಮತ್ತು ಶಿಖರ್ ಧವನ್‌ 66 ರನ್ ಸೇರಿಸಿದ್ದರು. ನಂತರ ಸತತವಾಗಿ ವಿಕೆಟ್‌ಗಳು ಉರುಳಿದ್ದರಿಂದ ತಂಡ ಆತಂಕಕ್ಕೆ ಒಳಗಾಗಿತ್ತು. ಆರನೇ ವಿಕೆಟ್‌ಗೆ 40 ರನ್ ಸೇರಿಸಿದ ಪಂತ್‌ ಮತ್ತು ರೂದರ್‌ಫಾರ್ಡ್‌ 19ನೇ ಓವರ್‌ನಲ್ಲಿ ಓಟಾಗಿದ್ದರು. ಈ ಸಂದರ್ಭದಲ್ಲಿ ತಂಡ ಒತ್ತಡಕ್ಕೆ ಒಳಗಾಯಿತು. ಆದರೆ ಕೀಮೊ ಪೌಲ್ ಮತ್ತು ಟ್ರೆಂಟ್ ಬೌಲ್ಟ್‌ ಪರಿಸ್ಥಿತಿಯನ್ನು ತಾಳ್ಮೆಯಿಂದ ನಿಭಾಯಿಸಿದ್ದರು.

‘ಐಪಿಎಲ್‌ ಪಂದ್ಯಗಳಲ್ಲಿ ಒತ್ತಡ ನಿಭಾಯಿಸಿ ಆಡುವುದು ಮುಖ್ಯ. ಪಂತ್ ಮೇಲೆ ಇರಿಸಿದ್ದ ಭರವಸೆ ಹುಸಿಯಾಗಲಿಲ್ಲ. ತಂಡದಲ್ಲಿ ಉತ್ತಮ ಆರಂಭ ನೀಡಲು ನಾನು ಪ್ರಯತ್ನಿಸುತ್ತೇನೆ. ಇದು ಸಾಧ್ಯವಾದರೆ ಮುಂದಿನ ಕೆಲಸವನ್ನು ಪಂತ್ ಸಮರ್ಥವಾಗಿ ನಿಭಾಯಿಸುತ್ತಾರೆ. ಸನ್‌ರೈಸರ್ಸ್ ಎದುರಿನ ಪಂದ್ಯದಲ್ಲಿ ಕೊನೆಯ ವರೆಗೂ ಕ್ರೀಸ್‌ನಲ್ಲಿ ಉಳಿಯಲು ಪಂತ್‌ಗೆ ಸಾಧ್ಯವಾಗಲಿಲ್ಲ. ಆದರೆ ಅವರು ಉತ್ತಮ ಭೂಮಿಕೆ ಒದಗಿಸಿದ್ದರು. ಕೀಮೊ ಪೌಲ್ ಅಂತಿಮವಾಗಿ ಪಂದ್ಯ ಗೆಲ್ಲಿಸಿಕೊಟ್ಟರು’ ಎಂದು ಶಾ ಹೇಳಿದರು.

‘ಟ್ವೆಂಟಿ–20 ಪಂದ್ಯಗಳಲ್ಲಿ ಮೊದಲ ಆರು ಓವರ್‌ಗಳು ನಿರ್ಣಾಯಕ. ಈ ಹಂತದಲ್ಲಿ ಸಾಕಷ್ಟು ರನ್‌ಗಳನ್ನು ಕಲೆ ಹಾಕಿದರೆ ಮುಂದಿನ ಹಾದಿ ಸುಗಮವಾಗುತ್ತದೆ. ಸನ್‌ರೈಸರ್ಸ್ ವಿರುದ್ಧ ತಂಡದ ಆರಂಭ ಉತ್ತಮವಾಗಿತ್ತು ನಿಜ. ಆದರೆ ಬ್ಯಾಟಿಂಗ್ ಮುಂದುವರಿಸುವುದು ಕಷ್ಟಕರವಾಗಿತ್ತು. ಬೌಲರ್‌ಗಳು ‘ಕಟರ್‌’ ದಾಳಿ ನಡೆಸುತ್ತಿದ್ದರು. ಆದರೆ ಎದೆಗುಂದದ ರಿಷಭ್‌ ದಿಟ್ಟ ಬ್ಯಾಟಿಂಗ್ ಮಾಡಿದರು. ಹೀಗಾಗಿ ಅವರು ಅಭಿನಂದನೆಗೆ ಅರ್ಹರು’ ಎಂದು ಶಾ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು