ಎಲ್ಲವೂ ಮುಗಿದು ಹೋಗಿಲ್ಲ: ಅಜಿಂಕ್ಯ ರಹಾನೆ ಅನಿಸಿಕೆ

ಶನಿವಾರ, ಏಪ್ರಿಲ್ 20, 2019
31 °C

ಎಲ್ಲವೂ ಮುಗಿದು ಹೋಗಿಲ್ಲ: ಅಜಿಂಕ್ಯ ರಹಾನೆ ಅನಿಸಿಕೆ

Published:
Updated:
Prajavani

ಜೈಪುರ: ‘ನಾವು ನಾಲ್ಕು ಪಂದ್ಯಗಳನ್ನು ಸೋತಿರಬಹುದು. ಹಾಗಂತ ಎಲ್ಲವೂ ಮುಗಿದು ಹೋಯಿತು ಎಂದು ಭಾವಿಸುವುದಿಲ್ಲ. ಪ್ಲೇ ಆಫ್ ಪ್ರವೇಶಿಸಲು ಇನ್ನೂ ಅವಕಾಶ ಇದೆ. ಅದಕ್ಕಾಗಿ ಮುಂದಿನ ಪಂದ್ಯಗಳಲ್ಲಿ ಪರಿಣಾಮಕಾರಿ ಸಾಮರ್ಥ್ಯ ತೋರಬೇಕು’ ಎಂದು ರಾಜಸ್ಥಾನ್‌ ರಾಯಲ್ಸ್‌ ತಂಡದ ನಾಯಕ ಅಜಿಂಕ್ಯ ರಹಾನೆ ಹೇಳಿದ್ದಾರೆ.

ಭಾನುವಾರ ತವರಿನ ಅಂಗಳದಲ್ಲಿ ನಡೆದಿದ್ದ ಹೋರಾಟದಲ್ಲಿ ರಾಜಸ್ಥಾನ್‌ ತಂಡ ಕೋಲ್ಕತ್ತ ನೈಟ್‌ ರೈಡರ್ಸ್‌ ಎದುರು ಸೋತಿತ್ತು.

ಪಂದ್ಯದ ನಂತರ ಮಾತನಾಡಿದ ರಹಾನೆ ‘ನಾವು ಹತಾಶರಾಗಬೇಕಿಲ್ಲ. ಐದು ಪಂದ್ಯಗಳ ಪೈಕಿ ಒಂದರಲ್ಲಿ ಗೆದ್ದಿದ್ದೇವೆ. ನಾಲ್ಕು ಪಂದ್ಯಗಳ ಪೈಕಿ ಒಂದರಲ್ಲಿ ಹೀನಾಯವಾಗಿ ಸೋತಿದ್ದೇವೆ. ಉಳಿದ ಮೂರರಲ್ಲಿ ಛಲದಿಂದ ಹೋರಾಡಿದ್ದೇವೆ’ ಎಂದರು.

‘ಯೋಜನೆಗಳನ್ನು ಕಾರ್ಯಗತಗೊಳಿಸಲು ನಾವು ವಿಫಲರಾಗುತ್ತಿದ್ದೇವೆ. ಒಂದು ತಂಡವಾಗಿ ಆಡಿದರೆ ಉಳಿದ ಪಂದ್ಯಗಳಲ್ಲಿ ಸುಲಭವಾಗಿ ಗೆಲ್ಲಬಹುದು’ ಎಂದಿದ್ದಾರೆ.

‘ಬ್ಯಾಟ್ಸ್‌ಮನ್‌ಗಳು ಆಟಕ್ಕೆ ಕುದುರಿಕೊಂಡ ಬಳಿಕ ಸಾಧ್ಯವಾದಷ್ಟು ಹೆಚ್ಚು ಸಮಯ ಕ್ರೀಸ್‌ನಲ್ಲಿ ಇರಲು ಪ್ರಯತ್ನಿಸಬೇಕು. ಬೌಲರ್‌ಗಳೂ ಯೋಜನಾಬದ್ಧವಾಗಿ ಬೌಲಿಂಗ್ ಮಾಡಲು ಪ್ರಯತ್ನಿಸಬೇಕು. ಪಿಚ್‌ನ ಗುಣ ಏನು, ಎದುರಾಳಿ ಬ್ಯಾಟ್ಸ್‌ಮನ್‌ನ ದೌರ್ಬಲ್ಯ ಏನು ಎಂಬುದನ್ನು ಗಮನದಲ್ಲಿಟ್ಟುಕೊಂಡು ಎಸೆತಗಳನ್ನು ಹಾಕಬೇಕು’ ಎಂದು ಹೇಳಿದರು.

‘ಕೋಲ್ಕತ್ತ ಎದುರಿನ ಪಂದ್ಯದಲ್ಲಿ 150ರಿಂದ 160ರನ್‌ ಗಳಿಸಬೇಕೆಂಬ ಗುರಿ ಇಟ್ಟುಕೊಂಡಿದ್ದೆವು. ಆದರೆ ಅದನ್ನು ಸಾಧಿಸಲಾಗಲಿಲ್ಲ. 140ರನ್‌ ಗಳಿಸಲು ಪರದಾಡುವಂತಾಯಿತು. ತವರಿನಲ್ಲಿ ಆಡುವಾಗ ನಮ್ಮ ಬೌಲರ್‌ಗಳು ಇನ್ನಷ್ಟು ಪರಿಣಾಮಕಾರಿ ಸಾಮರ್ಥ್ಯ ತೋರಬೇಕು. ಸರಿಯಾದ ಗತಿಯಲ್ಲಿ ಚೆಂಡನ್ನು ಹಾಕಲು ಪ್ರಯತ್ನಿಸಬೇಕು’ ಎಂದು ತಿಳಿಸಿದರು.

‘ಧವಳ್‌ ಕುಲಕರ್ಣಿ ಅವರ ಎಸೆತ ಕೆಕೆಆರ್‌ ತಂಡದ ಕ್ರಿಸ್‌ ಲಿನ್‌ ಬ್ಯಾಟಿನ ಒಳ ಅಂಚನ್ನು ಸವರಿ ವಿಕೆಟ್‌ಗೆ ತಾಗಿತ್ತು. ಆದರೆ ಬೇಲ್ಸ್‌ ಕೆಳಗೆ ಬೀಳಲಿಲ್ಲ. ಹೀಗಾಗಿ ಅಂಪೈರ್‌ ಔಟ್‌ ನೀಡಲಿಲ್ಲ. ಚೆಂಡು ವಿಕೆಟ್‌ಗೆ ತಾಗಿ ಬೌಂಡರಿ ಗೆರೆ ದಾಟಿದ್ದರಿಂದ ಎದುರಾಳಿ ತಂಡದ ಖಾತೆಗೆ ನಾಲ್ಕು ರನ್‌ ಸೇರ್ಪಡೆಯಾದವು. ಆ ಎಸೆತವನ್ನು ‘ಡೆಡ್‌ ಬಾಲ್‌’ ಎಂದು ಪರಿಗಣಿಸುವಂತೆ ಅಂಗಳದ ಅಂಪೈರ್‌ಗೆ ಹೇಳಿದೆ. ಅವರು ನನ್ನ ಮನವಿಯನ್ನು ಪುರಸ್ಕರಿಸಲಿಲ್ಲ’ ಎಂದೂ ರಹಾನೆ ನುಡಿದರು.

‘ಬೆನ್‌ ಸ್ಟೋಕ್ಸ್‌ ವಿಶ್ವ ಶ್ರೇಷ್ಠ ಆಲ್‌ರೌಂಡರ್‌. ಅಮೋಘ ಆಟದ ಮೂಲಕ ಪಂದ್ಯದ ಚಿತ್ರಣವನ್ನೇ ಬದಲಿಸುವ ಸಾಮರ್ಥ್ಯ ಅವರಲ್ಲಿದೆ. ಆದರೆ ಈ ಬಾರಿ ನಿರೀಕ್ಷಿತ ರೀತಿಯಲ್ಲಿ ಆಡಲು ಅವರಿಗೆ ಆಗುತ್ತಿಲ್ಲ. ಮುಂದಿನ ಪಂದ್ಯಗಳಲ್ಲಿ ಖಂಡಿತವಾಗಿಯೂ ನೈಜ ಆಟ ಆಡಲಿದ್ದಾರೆ’ ಎಂದು ಸ್ಟೋಕ್ಸ್‌ ವೈಫಲ್ಯವನ್ನು ಸಮರ್ಥಿಸಿಕೊಂಡರು.

ಕಾರ್ತಿಕ್ ಮೆಚ್ಚುಗೆ: ತಂಡದ ಆಟಗಾರರ ಆಲ್‌ರೌಂಡ್‌ ಸಾಮರ್ಥ್ಯದ ಬಗ್ಗೆ ಕೋಲ್ಕತ್ತ ನೈಟ್‌ರೈಡರ್ಸ್‌ ನಾಯಕ ದಿನೇಶ್‌ ಕಾರ್ತಿಕ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ನಾವು ಎಲ್ಲಾ ಪಂದ್ಯಗಳಲ್ಲೂ ಒಂದು ತಂಡವಾಗಿ ಹೋರಾಡುತ್ತಿದ್ದೇವೆ. ಬೌಲರ್‌ಗಳು ಮತ್ತು ಬ್ಯಾಟ್ಸ್‌ಮನ್‌ಗಳು ತಮ್ಮ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ’ ಎಂದು ದಿನೇಶ್‌ ಹೇಳಿದ್ದಾರೆ.

‘ಪವರ್‌ ಫ್ಲೇಯಲ್ಲಿ ಹೆಚ್ಚು ರನ್‌ ಗಳಿಸಬೇಕೆಂಬುದು ನಮ್ಮ ಯೋಜನೆಯಾಗಿತ್ತು. ಅದಕ್ಕನುಗುಣವಾಗಿ ಆಡಿದೆವು. ಆರಂಭದಲ್ಲೇ ಹೆಚ್ಚು ರನ್‌ ಕಲೆಹಾಕಿದ್ದರಿಂದ ಗೆಲುವಿನ ಹಾದಿ ಸುಗಮವಾಯಿತು. ರಾಜಸ್ಥಾನ್ ವಿರುದ್ಧ ನನಗೆ ಅದೃಷ್ಟ ಕೈ ಹಿಡಿಯಿತು. ಹೀಗಾಗಿ ಅರ್ಧಶತಕ ಬಾರಿಸಲು ಸಾಧ್ಯವಾಯಿತು’ ಎಂದು ಕೆಕೆಆರ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಕ್ರಿಸ್‌ ಲಿನ್‌ ಖುಷಿ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !