ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL-2020 | ರಾಜಸ್ಥಾನ ರಾಯಲ್ಸ್ – ಸನ್‌ರೈಸರ್ಸ್‌ ಹೈದರಾಬಾದ್ ಮುಖಾಮುಖಿ

Last Updated 21 ಅಕ್ಟೋಬರ್ 2020, 20:40 IST
ಅಕ್ಷರ ಗಾತ್ರ

ದುಬೈ: ಈ ಸಲದ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯು ಈಗ ರೋಚಕ ಘಟ್ಟ ತಲುಪಿದೆ.

ಪ್ಲೇಆಫ್‌ ಪ್ರವೇಶಕ್ಕಾಗಿ ಸಾಮರ್ಥ್ಯ ಮೀರಿ ಹೋರಾಡುವ ಸ್ಥಿತಿ ಪ್ರತಿಯೊಂದು ತಂಡದ ಮುಂದೂ ಇದೆ. ಅದರಲ್ಲೂ ಆಸ್ಟ್ರೇಲಿಯಾದ ’ಆಪ್ತಮಿತ್ರ‘ರಾದ ಡೇವಿಡ್ ವಾರ್ನರ್ ಮತ್ತು ಸ್ಟೀವನ್ ಸ್ಮಿತ್ ನಾಯಕತ್ವ ವಹಿಸಿರುವ ತಂಡಗಳ ಮುಂದೂ ಈಗ ಕಠಿಣ ಹಾದಿ ಇದೆ.

ವಾರ್ನರ್‌ ನಾಯಕತ್ವದ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಸ್ಮಿತ್ ಮುಂದಾಳತ್ವದ ರಾಜಸ್ಥಾನ ರಾಯಲ್ಸ್‌ ತಂಡಗಳು ಗುರುವಾರ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಗೆದ್ದ ತಂಡಕ್ಕೆ ಪ್ಲೇ ಆಫ್‌ನತ್ತ ಸಾಗಲು ಹೆಚ್ಚು ಅವಕಾಶ ಸಿಗಲಿದೆ.

ಇದುವರೆಗೆ ಹತ್ತು ಪಂದ್ಯಗಳನ್ನು ಆಡಿರುವ ರಾಜಸ್ಥಾನ ತಂಡವು ಆರರಲ್ಲಿ ಸೋತು ನಾಲ್ಕರಲ್ಲಿ ಗೆದ್ದಿದೆ. ಒಂಬತ್ತು ಪಂದ್ಯಗಳಲ್ಲಿ ಆಡಿರುವ ವಾರ್ನರ್ ಬಳಗವು ಮೂರು ಗೆದ್ದು ಉಳಿದಿದ್ದರಲ್ಲಿ ಸೋತಿದೆ.ಟೂರ್ನಿಯ ಆರಂಭದ ಕೆಲವು ಪಂದ್ಯಗಳಲ್ಲಿ ಅಬ್ಬರಿಸಿದ ಸಂಜು ಸ್ಯಾಮ್ಸನ್, ನಂತರದ ಪಂದ್ಯಗಳಲ್ಲಿ ತಣ್ಣಗಾಗಿರುವುದು ರಾಯಲ್ಸ್‌ಗೆ ಬಗೆಹರಿಯದ ಸಮಸ್ಯೆಯಾಗಿದೆ. ಆದರೆ ಕಳೆದ ಪಂದ್ಯದಲ್ಲಿ ಜೋಸ್ ಬಟ್ಲರ್ ಅರ್ಧಶತಕ ಹೊಡೆದಿದ್ದು ಆಶಾದಾಯಕ ಬೆಳವಣಿಗೆ. ಬೆನ್ ಸ್ಟೋಕ್ಸ್‌, ರಾಬಿನ್ ಉತ್ತಪ್ಪ, ನಾಯಕ ಸ್ಮಿತ್ ಅವರು ತಮ್ಮ ಲಯವನ್ನು ನಿರಂತರವಾಗಿ ಕಾಪಾಡಿಕೊಂಡರೆ ತಂಡದ ಶಕ್ತಿ ಹೆಚ್ಚುತ್ತದೆ.

ಕೆಳಕ್ರಮಾಂಕದಲ್ಲಿ ರಾಹುಲ್ ತೆವಾಟಿಯಾ ಅವರ ಮೇಲೆ ತಂಡಕ್ಕೆ ಹೆಚ್ಚು ಭರವಸೆ ಇದೆ. ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಮಿಂಚುತ್ತಿರುವ ಜೋಫ್ರಾ ಆರ್ಚರ್ ಮತ್ತು ಶ್ರೇಯಸ್ ಗೋಪಾಲ್ ರಾಯಲ್ಸ್‌ ತಂಡಕ್ಕೆ ಗೆಲುವು ಕೊಡಿಸಬಲ್ಲ ಸಮರ್ಥರು.

ಆದರೆ ಹೈದರಾಬಾದ್ ತಂಡದ ಬೌಲಿಂಗ್ ಪಡೆಯು ಭುವನೇಶ್ವರ್ ಕುಮಾರ್ ಕೊರತೆಯನ್ನು ಎದುರಿಸುತ್ತಿದೆ. ಸಂದೀಪ್ ಶರ್ಮಾ, ವಿಜಯ ಶಂಕರ್, ರಶೀದ್ ಖಾನ್ ಅವರಿಂದಲೇ ಹೆಚ್ಚಿನ ನಿರೀಕ್ಷೆ ಇದೆ. ಬೌಲರ್‌ಗಳಿಗೆ ಹೆಚ್ಚು ನೆರವಾಗುತ್ತಿರುವ ಪಿಚ್‌ನಲ್ಲಿ ವಾರ್ನರ್, ಕೇನ್ ವಿಲಿಯಮ್ಸನ್, ಜಾನಿ ಬೆಸ್ಟೊ ಮತ್ತು ಮನೀಷ್ ಪಾಂಡೆ ಅವರ ಬ್ಯಾಟಿಂಗ್‌ಗೆ ಕಠಿಣ ಸವಾಲು ಎದುರಾಗುವುದು ಖಚಿತ. ಆದರೆ ಎರಡೂ ತಂಡಗಳಿಗೂ ಗೆಲುವು ಅನಿವಾರ್ಯವಾಗಿರುವುದರಿಂದ ಪಂದ್ಯವು ರೋಚಕವಾಗುವ ಸಾಧ್ಯತೆಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT