ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಟ್ರೋಫಿ ಕ್ರಿಕೆಟ್: ನಾಲ್ಕರ ಘಟ್ಟದ ಸನಿಹ ಕರ್ನಾಟಕ

ಉತ್ತರಾಖಂಡದ ಎದುರು ಕರ್ನಾಟಕದ ಆರ್ಭಟ; ವಿದ್ವತ್‌ಗೆ ಎರಡು ವಿಕೆಟ್
Last Updated 3 ಫೆಬ್ರುವರಿ 2023, 4:43 IST
ಅಕ್ಷರ ಗಾತ್ರ

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ಸಂಜೆ ಮಧ್ಯಮವೇಗಿ ವಿದ್ವತ್ ಕಾವೇರಪ್ಪ ಮತ್ತು ಎಂ.ವೆಂಕಟೇಶ್ ಅವರು ಕರ್ನಾಟಕ ತಂಡವು ಈ ವರ್ಷದ ರಣಜಿ ಟ್ರೋಫಿ ಟೂರ್ನಿಯ ಸೆಮಿಫೈನಲ್ ಪ್ರವೇಶದ ಹಾದಿಯನ್ನು ಮತ್ತಷ್ಟು ಸುಗಮಗೊಳಿಸಿದರು.

ಇಲ್ಲಿ ನಡೆಯುತ್ತಿರುವ ಕ್ವಾರ್ಟರ್‌ಫೈನಲ್ ಪಂದ್ಯದ ಮೂರನೇ ದಿನ ಕರ್ನಾಟಕವು ಮೊದಲ ಇನಿಂಗ್ಸ್‌ನಲ್ಲಿ 162.5 ಓವರ್‌ಗಳಲ್ಲಿ 606 ರನ್ ಗಳಿಸಿತು. ಇದರೊಂದಿಗೆ 490 ರನ್‌ಗಳ ಮುನ್ನಡೆ ಪಡೆಯಿತು.

ಅದಕ್ಕುತ್ತರವಾಗಿ ಎರಡನೇ ಇನಿಂಗ್ಸ್ ಆರಂಭಿಸಿದ ಉತ್ತರಾಖಂಡ ತಂಡವು ದಿನದಾಟದ ಮುಕ್ತಾಯಕ್ಕೆ 41 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 106 ರನ್ ಗಳಿಸಿತು. ವಿದ್ವತ್ (22ಕ್ಕೆ2) ಮತ್ತು ಪದಾರ್ಪಣೆ ಪಂದ್ಯ ಆಡುತ್ತಿರುವ ವೆಂಕಟೇಶ್ ಒಂದು ವಿಕೆಟ್ ಗಳಿಸಿದರು. ಆರಂಭಿಕ ಜೋಡಿ ಅವನೀಶ್ ಸುಧಾ ಮತ್ತು ನಾಯಕ ಜೀವನ್‌ಜ್ಯೋತ್ ಸಿಂಗ್ (24; 57ಎ) ಅವರ ವಿಕೆಟ್‌ಗಳನ್ನು ವಿದ್ವತ್ ಕಬಳಿಸಿದರು. ಕುನಾಲ್ ಚಾಂಡೇಲಾ ಅವರಿಗೆ ವೆಂಕಟೇಶ್ ಪೆವಿಲಿಯನ್ ದಾರಿ ತೋರಿದರು.

ಈ ಸಂದರ್ಭದಲ್ಲಿ ಜೊತೆಗೂಡಿದ ದಿಕ್ಷಾಂಶು ನೇಗಿ ಹಾಗೂ ಸ್ವಪ್ನಿಲ್ ಸಿಂಗ್ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 50 ರನ್‌ ಸೇರಿಸಿ ವಿಕೆಟ್ ಪತನ ತಡೆದರು. ತಲಾ 27 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.

ಪಂದ್ಯದಲ್ಲಿ ಇನ್ನೂ ಎರಡು ದಿನಗಳು ಬಾಕಿಯಿವೆ. ಉತ್ತರಾಖಂಡ ತಂಡಕ್ಕೆ ಆತಿಥೇಯರ ಮೊದಲ ಇನಿಂಗ್ಸ್ ಮುನ್ನಡೆಯನ್ನು ಚುಕ್ತಾ ಮಾಡಲು ಇನ್ನೂ 384 ರನ್‌ಗಳ ಅಗತ್ಯವಿದೆ. ವೇಗವಾಗಿ ಆಡಿ ಈ ಮೊತ್ತ ಚುಕ್ತಾ ಮಾಡಿ ಕರ್ನಾಟಕಕ್ಕೆ ಗುರಿಯೊಡ್ಡಿ ಆಲೌಟ್ ಮಾಡಿ ಜಯಿಸಿದರೆ ಮಾತ್ರ ಉತ್ತರಾಖಂಡಕ್ಕೆ ನಾಲ್ಕರ ಘಟ್ಟ ಪ್ರವೇಶಿಸಲು ಸಾಧ್ಯವಿದೆ. ಒಂದೊಮ್ಮೆ ಪ್ರವಾಸಿಗರು ರಕ್ಷಣಾತ್ಮಕವಾಗಿ ಆಡಿ ಡ್ರಾ ಮಾಡಿಕೊಂಡರೂ ಮೊದಲ ಇನಿಂಗ್ಸ್ ಮುನ್ನಡೆ ಗಳಿಸಿರುವ ಕರ್ನಾಟಕ ಸೆಮಿಫೈನಲ್ ಪ್ರವೇಶಿಸುವುದು. ಆದರೆ ನಿಖರ ದಾಳಿ ನಡೆಸುತ್ತಿರುವ ಆತಿಥೇಯ ಬೌಲರ್‌ಗಳ ಎದುರು ಈಗ ಉಳಿದಿರುವ ಏಳು ಬ್ಯಾಟರ್‌ಗಳು ಎಷ್ಟು ದೀರ್ಘ ಸಮಯದವರೆಗೆ ಆಡುವರು ಎಂಬುದರ ಮೇಲೆ ಫಲಿತಾಂಶ ನಿರ್ಧಾರವಾಗಲಿದೆ.

ಶ್ರೇಯಸ್ ವೈಯಕ್ತಿಕ ಶ್ರೇಷ್ಠ: ಬುಧವಾರ ದಿನದಾಟದ ಕೊನೆಗೆ ಶತಕ ಗಳಿಸಿ ಕ್ರೀಸ್‌ನಲ್ಲಿದ್ದ ಶ್ರೇಯಸ್ ಗೋಪಾಲ್ ಮೂರನೇ ದಿನವೂ ಬ್ಯಾಟಿಂಗ್‌ನಲ್ಲಿ ಮಿಂಚಿದರು.

ಭೋಜನ ವಿರಾಮಕ್ಕೂ ಮುನ್ನವೇ ಡಿಕ್ಲೇರ್ ಮಾಡಿಕೊಂಡು ಉತ್ತರಾಖಂಡವನ್ನು ಕಟ್ಟಿಹಾಕುವ ಪ್ರಯತ್ನ ಮಾಡುವ ಅವಕಾಶ ಕರ್ನಾಟಕಕ್ಕೆ ಇತ್ತು. ಆದರೆ, ಆತಿಥೇಯರು ‘ಬ್ಯಾಟಿಂಗ್ ಅಭ್ಯಾಸ’ಕ್ಕೆ ಮೊರೆಹೋದರು.

ಇದನ್ನು ಬಳಸಿಕೊಂಡ ಶ್ರೇಯಸ್ (ಅಜೇಯ 161; 288ಎ, 4X16, 6X1) ರಣಜಿ ಟ್ರೋಫಿಯಲ್ಲಿ ತಮ್ಮ ವೈಯಕ್ತಿಕ ಸ್ಕೋರ್‌ (ಹಳೆಯದು; ಔಟಾಗದೆ 150) ಉತ್ತಮಪಡಿಸಿಕೊಂಡರು. ಅಲ್ಲದೇ ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮೂರು ಸಾವಿರ ರನ್‌ಗಳ ಗಡಿಯನ್ನೂ ದಾಟಿದರು.

ಆದರೆ ಬಿ.ಆರ್. ಶರತ್ (33) ಮತ್ತು ಕೆ.ಗೌತಮ್ (39) ಅವರು ಅರ್ಧಶತಕವನ್ನು ಪೂರೈಸಲಿಲ್ಲ. ಮೊದಲ ಇನಿಂಗ್ಸ್‌ನಲ್ಲಿ ಐದು ವಿಕೆಟ್ ಗಳಿಸಿದ್ದ ವೆಂಕಟೇಶ್ ಬ್ಯಾಟಿಂಗ್‌ನಲ್ಲಿ 15 ರನ್ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT