ಬುಧವಾರ, ಮಾರ್ಚ್ 29, 2023
27 °C
ರಣಜಿ: ಕ್ವಾರ್ಟರ್‌ ಫೈನಲ್‌ನಲ್ಲಿ ಎಡವಿದ ಪಂಜಾಬ್

ರಣಜಿ ಕ್ರಿಕೆಟ್‌: ಕರ್ನಾಟಕ– ಸೌರಾಷ್ಟ್ರ ಸೆಮಿ ಸೆಣಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್‌ಕೋಟ್‌: ಸೌರಾಷ್ಟ್ರ ತಂಡದವರು ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಪಂಜಾಬ್‌ ತಂಡವನ್ನು 71 ರನ್‌ಗಳಿಂದ ಮಣಿಸಿ ಸೆಮಿಫೈನಲ್ ಪ್ರವೇಶಿಸಿದರು.

ಫೆ.8 ರಿಂದ 12ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ನಾಲ್ಕರಘಟ್ಟದ ಹಣಾಹಣಿಯಲ್ಲಿ ಸೌರಾಷ್ಟ್ರ ತಂಡ ಕರ್ನಾಟಕವನ್ನು ಎದುರಿಸಲಿದೆ. ಇಂದೋರ್‌ನಲ್ಲಿ ನಡೆಯಲಿರುವ ಇನ್ನೊಂದು ಸೆಮಿಫೈನಲ್‌ನಲ್ಲಿ ಮಧ್ಯಪ್ರದೇಶ– ಬಂಗಾಳ ಪೈಪೋಟಿ ನಡೆಸಲಿವೆ.

ರಾಜ್‌ಕೋಟ್‌ನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 252 ರನ್‌ಗಳ ಗುರಿ ಪಡೆದಿದ್ದ ಪಂಜಾಬ್, ಅಂತಿಮ ದಿನವಾದ ಶನಿವಾರ 180 ರನ್‌ಗಳಿಗೆ ಆಲೌಟಾಯಿತು.

2 ವಿಕೆಟ್‌ಗಳಿಗೆ 52 ರನ್‌ಗಳಿಂದ ಆಟ ಮುಂದುವರಿಸಿದ್ದ ಪಂಜಾಬ್‌ ತಂಡ, ಪಾರ್ಥ್‌ ಭುತ್ (89ಕ್ಕೆ5) ಮತ್ತು ಧರ್ಮೇಂದ್ರಸಿನ್ಹ ಜಡೇಜ (56ಕ್ಕೆ 3) ಅವರ ಬಿಗುವಾದ ದಾಳಿಗೆ ನಲುಗಿತು. ಪುಖ್ರಾಜ್‌ ಮಾನ್‌ (42) ಹಾಗೂ ಮನ್‌ದೀಪ್‌ ಸಿಂಗ್‌ (45) ಹೊರತುಪಡಿಸಿ ಉಳಿದವರಿಗೆ ಸೌರಾಷ್ಟ್ರ ತಂಡದ ಶಿಸ್ತಿನ ಬೌಲಿಂಗ್‌ ಎದುರಿಸಲು ಆಗಲಿಲ್ಲ.

ಮೊದಲ ಇನಿಂಗ್ಸ್‌ನಲ್ಲಿ ಹಿನ್ನಡೆ ಅನುಭವಿಸಿದ್ದರೂ, ಸೌರಾಷ್ಟ್ರ ಅಮೋಘ ರೀತಿಯಲ್ಲಿ ಮರುಹೋರಾಟ ನಡೆಸಿ ಗೆಲುವು ಒಲಿಸಿಕೊಂಡಿತು. ಪಾರ್ಥ್‌ ಅವರ ಆಲ್‌ರೌಂಡ್‌ ಆಟ ತಂಡದ ಜಯದಲ್ಲಿ ನಿರ್ಣಾಯಕ ಪಾತ್ರ ವಹಿಸಿತು.

ಮೊದಲ ಇನಿಂಗ್ಸ್‌ನಲ್ಲಿ ಶತಕ (ಅಜೇಯ 111) ಮತ್ತು ಎರಡನೇ ಇನಿಂಗ್ಸ್‌ನಲ್ಲಿ ಅರ್ಧಶತಕ (51) ಗಳಿಸಿದ್ದ ಅವರು ಬೌಲಿಂಗ್‌ನಲ್ಲೂ ಕೈಚಳಕ ಮೆರೆದು 203 ರನ್‌ಗಳಿಗೆ ಒಟ್ಟು ಎಂಟು ವಿಕೆಟ್‌ ಪಡೆದುಕೊಂಡರು.

ಸಂಕ್ಷಿಪ್ತ ಸ್ಕೋರ್‌: ಮೊದಲ ಇನಿಂಗ್ಸ್: ಸೌರಾಷ್ಟ್ರ: 303. ಪಂಜಾಬ್: 431. ಎರಡನೇ ಇನಿಂಗ್ಸ್: ಸೌರಾಷ್ಟ್ರ: 120.1 ಓವರ್‌ಗಳಲ್ಲಿ 379. ಪಂಜಾಬ್: 89.1 ಓವರ್‌ಗಳಲ್ಲಿ 180 (ಪುಖ್ರಾಜ್‌ ಮಾನ್‌ 42, ಮನ್‌ದೀಪ್‌ ಸಿಂಗ್‌ 45, ಅನ್ಮೋಲ್‌ಪ್ರೀತ್‌ ಸಿಂಗ್ 26, ಪಾರ್ಥ್ ಭುತ್‌ 89ಕ್ಕೆ 5, ಧರ್ಮೇಂದ್ರಸಿನ್ಹ ಜಡೇಜ 56ಕ್ಕೆ 3) ಫಲಿತಾಂಶ: ಸೌರಾಷ್ಟ್ರಕ್ಕೆ 71 ರನ್‌ ಗೆಲುವು

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು