ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಕ್ರಿಕೆಟ್: ಮನೀಷ್ ಪಾಂಡೆ ಶತಕ, ಕರ್ನಾಟಕದ ಛಲಕ್ಕೆ ಒಲಿದ ಗೆಲುವು

ರಾಜಸ್ಥಾನ ವೀರೋಚಿತ ಹೋರಾಟ; 99 ರನ್‌ ಗಳಿಸಿದ ಲೊಮ್ರೊರ್;
Last Updated 12 ಜನವರಿ 2023, 19:45 IST
ಅಕ್ಷರ ಗಾತ್ರ

ಬೆಂಗಳೂರು: ಆಲೂರಿನ ಕ್ರೀಡಾಂಗಣದಲ್ಲಿ ಗುರುವಾರ ಚುಟುಕು ಕ್ರಿಕೆಟ್ ಅಬ್ಬರ ಮತ್ತು ಟೆಸ್ಟ್‌ ಮಾದರಿಯ ತಾಳ್ಮೆಯ ಆಟಗಳೆರಡೂ ನೋಡುಗರ ಕಣ್ತುಂಬಿದವು.

ಇಲ್ಲಿ ನಡೆದ ರಣಜಿ ಟ್ರೋಫಿ ಸಿ ಗುಂಪಿನ ಪಂದ್ಯದಲ್ಲಿ ಪ್ರವಾಸಿ ರಾಜಸ್ಥಾನ ತಂಡವು ಚುಟುಕು ಕ್ರಿಕೆಟ್ ಮಾದರಿಯಲ್ಲಿ ಬ್ಯಾಟಿಂಗ್ ಮಾಡಿತು. ಮೊದಲ ಇನಿಂಗ್ಸ್‌ನಲ್ಲಿ 129 ರನ್‌ಗಳಿಗೆ ಆಲೌಟ್ ಆಗಿದ್ದ ತಂಡದ ಆಟ ಎರಡನೇ ಇನಿಂಗ್ಸ್‌ನಲ್ಲಿ ತದ್ವಿರುದ್ಧವಾಗಿತ್ತು. ಮೂರನೇ ದಿನದಾಟದ ಸುಮಾರು ನಾಲ್ಕು ತಾಸುಗಳಲ್ಲಿ 330 ರನ್‌ ಗಳಿಸಿತು. ಆದರೆ ಅವರ ಅಬ್ಬರಕ್ಕೆ ಬೆದರದ ಕರ್ನಾಟಕ ಬಳಗಕ್ಕೆ 10 ವಿಕೆಟ್‌ಗಳ ಜಯ ಒಲಿಯಿತು.

7 ಅಂಕಗಳೂ ಮಯಂಕ್ ಬಳಗದ ಬುಟ್ಟಿ ಸೇರಿದವು. 3ನೇ ದಿನವೇ ಗೆದ್ದು ಬೀಗಿದ ಕರ್ನಾಟಕ ತಂಡದ ಖಾತೆಯಲ್ಲಿ 26 ಅಂಕಗಳಿದ್ದು ಅಗ್ರಸ್ಥಾನಕ್ಕೇರಿದೆ. ಇದರಿಂದಾಗಿ ತಂಡವು ನಾಕೌಟ್ ಹಂತ ತಲುಪುವ ಹಾದಿ ಸುಗಮಗೊಂಡಿದೆ.

ಕರ್ನಾಟಕವು ಪಂದ್ಯದ ಎರಡನೇ ದಿನದಾಟದ ಮುಕ್ತಾಯಕ್ಕೆ 251 ರನ್‌ಗಳ ಮುನ್ನಡೆ ಗಳಿಸಿತ್ತು. 75 ರನ್ ಗಳಿಸಿ ಕ್ರೀಸ್‌ನಲ್ಲಿದ್ದ ಮನೀಷ್ ಪಾಂಡೆ ಮೂರನೇ ದಿನ ಬೆಳಿಗ್ಗೆ ಶತಕ (101 ರನ್) ಪೂರೈಸಿದರು. ಇದರಿಂದಾಗಿ ಕರ್ನಾಟಕವು ಮೊದಲ ಇನಿಂಗ್ಸ್‌ನಲ್ಲಿ 445 ರನ್‌ ಮೊತ್ತ ಕಲೆಹಾಕಿತು. 316 ರನ್‌ಗಳ ಮುನ್ನಡೆ ಗಳಿಸಿತು.

ಊಟದ ವಿರಾಮಕ್ಕೆ ಇನ್ನೂ ಒಂದೂವರೆ ಗಂಟೆ ಇದ್ದಾಗಲೇ 2ನೇ ಇನಿಂಗ್ಸ್ ಆರಂಭಿಸಿದ ರಾಜಸ್ಥಾನದ ಬ್ಯಾಟರ್‌ಗಳು ಟಿ20 ಮಾದರಿಯ ಬ್ಯಾಟಿಂಗ್ ಮಾಡಿದರು. ಇವತ್ತು ಮುನ್ನಡೆಯ ಮೊತ್ತ ಚುಕ್ತಾ ಮಾಡಿ. ಕೊನೆಯ ದಿನವಾದ ಶುಕ್ರವಾರ ಕರ್ನಾ ಟಕಕ್ಕೆ ಗುರಿಯೊಡ್ಡಿ ಗೆಲ್ಲುವ ಅಥವಾ ಕನಿಷ್ಠ ಪಕ್ಷ ಡ್ರಾ ಮಾಡಿಕೊಳ್ಳುವ ತಂಡದ ಯೋಜನೆಯೊಂದಿಗೆ ಆಡಿದರು.

ಆರಂಭಿಕ ಬ್ಯಾಟರ್ ಮಹಿಪಾಲ್ ಲೊಮ್ರೊರ್ (99; 83ಎ), ಆದಿತ್ಯ ಗಡ್ವಾಲ್ (66; 66ಎ) ಹಾಗೂ ಸಮರ್ಪಿತ್ ಜೋಶಿ (63; 79ಎ) ಅಬ್ಬರಿಸಿದರು. ಆದರೆ ಛಲ ಬಿಡದ ಕರ್ನಾಟಕದ ವೈಶಾಖ (73ಕ್ಕೆ4), ಕೌಶಿಕ್ (66ಕ್ಕೆ2) ಮತ್ತು ಆಫ್‌ಸ್ಪಿನ್ನರ್ ಗೌತಮ್ (72ಕ್ಕೆ3) ದಿನದಾಟದ ಅವಧಿ ಮುಗಿಯುವ ಕೆಲವೇ ನಿಮಿಷಗಳ ಮುನ್ನ ರಾಜಸ್ಥಾನ ತಂಡದ ಎಲ್ಲ ವಿಕೆಟ್ ಗಳಿಸುವಲ್ಲಿ ಸಫಲರಾದರು. ಅಷ್ಟೊತ್ತಿಗೆ ರಾಜಸ್ಥಾನ ತಂಡವು 14 ರನ್‌ಗಳ ಮುನ್ನಡೆ ಸಾಧಿಸಿತ್ತು. ಇದರಿಂದಾಗಿ ಇನಿಂಗ್ಸ್‌ ಗೆಲುವು ಸಾಧಿಸುವ ಕರ್ನಾಟಕದ ಉದ್ದೇಶ ಈಡೇರಲಿಲ್ಲ.

ಆದರೆ 15 ರನ್‌ಗಳ ಪುಟ್ಟ ಗುರಿಯನ್ನು ವಿಕೆಟ್‌ ನಷ್ಟವಿಲ್ಲದೇ ಸಾಧಿಸುವಲ್ಲಿ ಆರಂಭಿಕ ಜೋಡಿ ಮಯಂಕ್ ಅಗರವಾಲ್ ಮತ್ತು ಸಮರ್ಥ್ ಯಶಸ್ವಿಯಾದರು.

ಲೊಮ್ರೊರ್ ಅಬ್ಬರ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದ ಎಡಗೈ ಬ್ಯಾಟರ್ ಲೊಮ್ರೊರ್ (99; 83ಎ) ಮೈದಾನದ ಎಲ್ಲ ಭಾಗಕ್ಕೂ ಚೆಂಡನ್ನು ಹೊಡೆದಟ್ಟಿದರು. ಅವರು ಸಿಡಿಸಿದ ಆರು ಸಿಕ್ಸರ್‌ಗಳಲ್ಲಿ ಚೆಂಡು ಮೈದಾನದಿಂದ ಹೊರಗೆ ಬಿದ್ದವು. ಆದರೆ ಕೇವಲ ಒಂದು ರನ್‌ನಿಂದ ಶತಕ ತಪ್ಪಿಸಿಕೊಂಡರು. ವೈಶಾಖ ಎಸೆತವು ಅವರ ಬ್ಯಾಟ್ ಅಂಚು ಸವರಿ ವಿಕೆಟ್‌ಕೀಪರ್ ಶರತ್ ಶ್ರೀನಿವಾಸ್ ಕೈಸೇರಿತು.

ಕೈಚೆಲ್ಲಿದ ಕ್ಯಾಚ್‌ಗಳು: ಕರ್ನಾಟಕದ ಫೀಲ್ಡಿಂಗ್ ಲೋಪಗಳು ಈ ಇನಿಂಗ್ಸ್‌ನಲ್ಲಿಯೂ ಇದ್ದವು. ಲೊಮ್ರೊರ್ ಮತ್ತು ಆದಿತ್ಯ ಅವರ ಕ್ಯಾಚ್‌ಗಳನ್ನು ನೆಲಕ್ಕೆ ಚೆಲ್ಲಿದರು.

ಮನೀಷ್ ಪಾಂಡೆ 6000 ರನ್
ಕರ್ನಾಟಕದ ಅನುಭವಿ ಬ್ಯಾಟರ್ ಮನೀಷ್ ಪಾಂಡೆ ರಣಜಿ ಟ್ರೋಫಿ ಕ್ರಿಕೆಟ್‌ ನಲ್ಲಿ ಒಟ್ಟು 6000 ರನ್‌ಗಳನ್ನು ಗಳಿಸಿದರು. ಈ ಸಾಧನೆ ಮಾಡಿದ ಕರ್ನಾಟಕದ ಮೂರನೇ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾದರು.

ಬ್ರಿಜೇಶ್ ಪಟೇಲ್ (7126) ಮತ್ತು ರಾಬಿನ್ ಉತ್ತಪ್ಪ (6845) ಮೊದಲೆರಡು ಸ್ಥಾನಗಳಲ್ಲಿದ್ದಾರೆ.

ಗುರುವಾರದ ಪಂದ್ಯದಲ್ಲಿ ಅವರು 92 ರನ್‌ ಗಳಿಸಿದಾಗ ಆರು ಸಾವಿರದ ಗಡಿ ಮುಟ್ಟಿದರು. ಪಾಂಡೆಗೆ ಇದು 82ನೇ ರಣಜಿ ಪಂದ್ಯ ಇದಾಗಿದ್ದು, 20ನೇ ಶತಕ ದಾಖಲಿಸಿದರು. ರಣಜಿ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ 36ನೇ ಆಟಗಾರನಾದರು. ಇದೇ ಟೂರ್ನಿಯಲ್ಲಿ ಗೋವಾದ ವಿರುದ್ಧ ಅವರು ದ್ವಿಶತಕ ದಾಖಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT