ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಣಜಿ ಟ್ರೋಫಿ ಕ್ವಾರ್ಟರ್‌ಫೈನಲ್‌ ಇಂದಿನಿಂದ

Published 22 ಫೆಬ್ರುವರಿ 2024, 20:47 IST
Last Updated 22 ಫೆಬ್ರುವರಿ 2024, 20:47 IST
ಅಕ್ಷರ ಗಾತ್ರ

ಮುಂಬೈ: ಒಂದೂವರೆ ತಿಂಗಳ ಕಾಲ ನಡೆದ ರಣಜಿ ಟ್ರೋಫಿ ಲೀಗ್ ಪಂದ್ಯಗಳಲ್ಲಿ ಉತ್ತಮ ಸಾಧನೆ ತೋರಿರುವ ಎಂಟು ತಂಡಗಳು ಶುಕ್ರವಾರದಿಂದ ಕ್ವಾರ್ಟರ್‌ಫೈನಲ್ ಪಂದ್ಯಗಳನ್ನು ಆಡಲಿವೆ. ಹತ್ತು ವರ್ಷಗಳಿಂದ ಈ ಪ್ರಶಸ್ತಿಯ ಬರ ಎದುರಿಸುತ್ತಿರುವ ಕರ್ನಾಟಕ ನಾಗ್ಪುರದಲ್ಲಿ ನಡೆಯುವ ಎಂಟರ ಘಟ್ಟದ ಪಂದ್ಯದಲ್ಲಿ ಮಾಜಿ ಚಾಂಪಿಯನ್ ವಿದರ್ಭ ತಂಡವನ್ನು ಎದುರಿಸಲಿದೆ.

‘ಬಿ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿರುವ 41 ಬಾರಿಯ ಚಾಂಪಿಯನ್ ಮುಂಬೈ ತವರಿನಲ್ಲಿ (ಬಿಕೆಸಿ ಕ್ರೀಡಾಂಗಣದಲ್ಲಿ) ನಡೆಯುವ ಎಂಟರ ಘಟ್ಟದ ಪಂದ್ಯದಲ್ಲಿ ಬರೋಡಾ ತಂಡವನ್ನು ಎದುರಿಸಲಿದೆ. ಫಿಟ್ನೆಸ್‌ ಸಮಸ್ಯೆ ಎದುರಿಸುತ್ತಿರುವ ಶ್ರೇಯಸ್‌ ಅಯ್ಯರ್‌, ಗಾಯಾಳಾಗಿರುವ ಶಿವಂ ದುಬೆ ಅವರ ಅನುಪಸ್ಥಿತಿ ಮುಂಬೈ ತಂಡಕ್ಕೆ ಹಿನ್ನಡೆ. 19 ವರ್ಷದೊಳಗಿನವರ ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಮಿಂಚಿದ್ದ ಬ್ಯಾಟರ್‌ ಮುಷೀರ್ ಖಾನ್ ತಂಡಕ್ಕೆ ಮರಳಿದ್ದಾರೆ. ಏಳು ಪಂದ್ಯಗಳಲ್ಲಿ 493 ರನ್ ಹೊಡೆದಿರುವ ಭೂಪೇನ್‌ ಲಾಲ್ಬಾನಿ ಈಗ ತಂಡದ ಪ್ರಮುಖ ಬ್ಯಾಟರ್. ವೇಗದ ಬೌಲರ್ ಮೋಹಿತ್ ಅವಸ್ಥಿ (31 ವಿಕೆಟ್‌) ಅವರ ಮೇಲೆ ತಂಡ ಭರವಸೆಯಿಟ್ಟಿದೆ.

ಬರೋಡಾ ಪರ ಶಾಶ್ವತ್ ರಾವತ್ (628 ರನ್) ಸ್ಥಿರ ಪ್ರದರ್ಶನ ನೀಡಿದ್ದಾರೆ.

ತಮಿಳುನಾಡು ತಂಡ ಕೊಯಮತ್ತೂರಿನಲ್ಲಿ ನಡೆಯಲಿರುವ ಇನ್ನೊಂದು ಕ್ವಾರ್ಟರ್‌ಫೈನಲ್‌ನಲ್ಲಿ ಪ್ರಬಲ ಸೌರಾಷ್ಟ್ರ ತಂಡವನ್ನು ಎದುರಿಸಲಿದೆ. ತಮಿಳುನಾಡು ಆರು ವರ್ಷಗಳಲ್ಲಿ ನಾಕೌಟ್‌ ತಲುಪಿದ್ದು ಇದೇ ಮೊದಲು.

ಚೇತೇಶ್ವರ ಪೂಜಾರ ಈ ಬಾರಿ ಮೂರು ಶತಕ ಸೇರಿದಂತೆ 780 ರನ್ ಪೇರಿಸಿ ಒಳ್ಳೆಯ ಲಯದಲ್ಲಿದ್ದಾರೆ. ಅರ್ಪಿತ್ ವಾಸವದಾ (440) ಮತ್ತು ಪ್ರೇರಕ್ ಮಂಕಡ್ (426) ಕೊಡುಗೆಯೂ ತಂಡಕ್ಕೆ ನೆರವಾಗಿದೆ. ಈ ತಂಡದ ಧರ್ಮೇಂದ್ರಸಿನ್ಹ ಜಡೇಜ 39 ವಿಕೆಟ್‌ ಪಡೆದಿದ್ದು, ಟೂರ್ನಿಯ ಅತಿ ಯಶಸ್ವಿ ಬೌಲರ್ ಆಗುವ ಅವಕಾಶ ಪಡೆದಿದ್ದಾರೆ.

ತಮಿಳುನಾಡು ಪರ ನಾರಾಯಣ ಜಗದೀಶನ್ (775 ರನ್‌) ಒಳ್ಳೆಯ ಲಯದಲ್ಲಿದ್ದಾರೆ. ಬಾಬಾ ಇಂದ್ರಜಿತ್ (606) ಅವರೂ ಕೆಲಪಂದ್ಯಗಳಲ್ಲಿ ತಂಡವನ್ನು ಕಾಪಾಡಿದ್ದಾರೆ. ಸ್ಪಿನ್ನರ್‌ಗಳಾದ ಸಾಯಿ ಕಿಶೋರ್ (38 ವಿಕೆಟ್‌) ಮತ್ತು ಎಸ್‌.ಅಜಿತ್‌ ರಾಮ್ (36) ಅವರು ಯಶಸ್ವಿ ಬೌಲರ್‌ಗಳಾಗಿದ್ದಾರೆ.

ಮಧ್ಯಪ್ರದೇಶಕ್ಕೆ ಆಂಧ್ರ ಸವಾಲು:

ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಮಧ್ಯ ಪ್ರದೇಶ, ಆಂಧ್ರ ತಂಡವನ್ನು ಎದುರಿಸಲಿದೆ.

ರಿಕಿ ಭುಯಿ (861 ರನ್) ಅವರು ರಣಜಿ ಋತುವಿನ ಅತಿ ಯಶಸ್ವಿ ಆಟಗಾರ ಎನಿಸಿದ್ದಾರೆ. ಹನುಮ ವಿಹಾರಿ (453) ಕೂಡ ಉಪಯುಕ್ತ ಇನಿಂಗ್ಸ್‌ ಆಡಿದ್ದಾರೆ. ‘ಬಿ’ ಗುಂಪಿನಲ್ಲಿ ಆಂಧ್ರ ತಂಡ ಎರಡನೇ ಸ್ಥಾನ (ಮುಂಬೈ ಪ್ರಥಮ) ಪಡೆದಿತ್ತು.

ಮಧ್ಯಪ್ರದೇಶ ಈ ಟೂರ್ನಿಯಲ್ಲಿ ಅಜೇಯ ಸಾಧನೆ ಪ್ರದರ್ಶಿಸಿ ಗಮನ ಸೆಳೆದಿದೆ. ವೆಂಕಟೇಶ ಅಯ್ಯರ್ (510), ಕುಮಾರ ಕಾರ್ತಿಕೇಯ (34 ವಿಕೆಟ್‌) ತಂಡದ ಪ್ರಮುಖ ಆಟಗಾರರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT