ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಈ ಬಾರಿಯ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯೂಪಿಎಲ್) ಕ್ರಿಕೆಟ್ ಟೂರ್ನಿಯ ತನ್ನ ಕೊನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 4 ವಿಕೆಟ್ ಅಂತರದ ಸೋಲು ಕಂಡಿದೆ.
ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ನೀಡಿದ 126 ರನ್‌ಗಳ ಗುರಿ ಬೆನ್ನತ್ತಿದ ಮುಂಬೈ, ಇನ್ನೂ 21 ಎಸೆತಗಳು ಬಾಕಿ ಇರುವಂತೆಯೇ 129 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ಮುಂಬೈಗೆ ಆರಂಭಿಕ ಬ್ಯಾಟರ್‌ಗಳಾದ ಹೀಲಿ ಮ್ಯಾಥ್ಯೂಸ್ (24) ಹಾಗೂ ಯಸ್ತಿಕಾ ಭಾಟಿಯಾ (30) ಉತ್ತಮ ಆರಂಭ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್ ಅರ್ಧಶತಕದ ಜೊತೆಯಾಟವಾಡಿತು.
6ನೇ ಓವರ್‌ನ ಕೊನೇ ಎಸೆತದಲ್ಲಿ ಯಸ್ತಿಕಾ ಔಟಾದರು. ಆಗ ತಂಡದ ಮೊತ್ತ 53 ರನ್. 8ನೇ ಓವರ್‌ನ ಮೊದಲ ಎಸೆತದಲ್ಲಿ ಮ್ಯಾಥ್ಯೂಸ್ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ನಥಾಲಿ ಸ್ಕೀವರ್ ಬ್ರಂಟ್ (13) ಹಾಗೂ ನಾಯಕಿ ಹರ್ಮನ್‌ಪ್ರೀತ್ ಕೌರ್ (2) ಅವರೂ ಹೆಚ್ಚು ಹೊತ್ತು ನಿಲ್ಲಲಿಲ್ಲ.
ಹೀಗಾಗಿ 19 ರನ್‌ಗಳ ಅಂತರದಲ್ಲಿ ಪ್ರಮುಖ 4 ವಿಕೆಟ್‌ಗಳನ್ನು ಕಳೆದುಕೊಂಡ ಮುಂಬೈ ತಂಡ ಸಂಕಷ್ಟಕ್ಕೆ ಸಿಲುಕಿತು.
ಈ ವೇಳೆ ಜೊತೆಯಾದ ಅಮೇಲಿಯಾ ಕೆರ್ ಹಾಗೂ ಪೂಜಾ ವಸ್ತ್ರಾಕರ್ ತಮ್ಮ ತಂಡವನ್ನು ಅಪಾಯದಿಂದ ಪಾರು ಮಾಡಿದರು. 5ನೇ ವಿಕೆಟ್ ಪಾಲುದಾರಿಕೆಯಲ್ಲಿ 47 ರನ್ ಗಳಿಸಿದ ಇವರಿಬ್ಬರು ತಮ್ಮ ತಂಡವನ್ನು ಜಯದ ಹೊಸ್ತಿಲಿಗೆ ತಂದು ನಿಲ್ಲಿಸಿದರು. ಗೆಲುವಿಗೆ ಇನ್ನು 6 ರನ್ ಬೇಕಿದ್ದಾಗ ಕನಿಕಾ ಅಹುಜಾ ಎಸೆದ 16ನೇ ಓವರ್‌ನ 5ನೇ ಎಸೆತದಲ್ಲಿ ಪೂಜಾ (19) ಔಟಾದರು. ನಂತರದ ಎಸೆತದಲ್ಲೇ ಇಸ್ಸಿ ವಾಂಗ್ (0) ಸಹ ವಿಕೆಟ್ ಒಪ್ಪಿಸಿದರು.
ಆದರೂ ಕೊನೆವರೆಗೆ ನಿರಾತಂಕವಾಗಿ ಬ್ಯಾಟ್ ಬೀಸಿದ ಅಮೇಲಿಯಾ ಕೆರ್ ಅಜೇಯ 31 ರನ್ ಗಳಿಸಿ, ಅಮನ್‌ಜೋತ್ ಕೌರ್ ಜೊತೆಗೂಡಿ ಆರ್‌ಸಿಬಿ ಬಾಕಿ ಚುಕ್ತಾ ಮಾಡಿ ಸಂಭ್ರಮಿಸಿದರು.
ಇದರೊಂದಿಗೆ ಆಡಿರುವ 8 ಪಂದ್ಯಗಳಲ್ಲಿ 6ನೇ ಗೆಲುವು ಕಂಡಿರುವ ಮುಂಬೈ, ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.
ಸಾಧಾರಣ ಗುರಿ
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳನ್ನು ಕಳೆದುಕೊಂಡು 125 ರನ್ ಗಳಿಸಲಷ್ಟೇ ಶಕ್ತವಾಯಿತು.
ನಾಯಕಿ ಸ್ಮೃತಿ ಮಂದಾನ (24 ರನ್), ಅನುಭವಿ ಎಲಿಸ್ ಪೆರ್ರಿ (29 ರನ್) ಹಾಗೂ ವಿಕೆಟ್‌ಕೀಪರ್ ರಿಚಾ ಘೋಷ್ (29 ರನ್) ಹೊರತುಪಡಿಸಿ ಉಳಿದವರಿಂದ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ಮೂಡಿಬರಲಿಲ್ಲ. ಹೀಗಾಗಿ ಆರ್‌ಸಿಬಿ ಆಟ ಸಾಧಾರಣ ಮೊತ್ತಕ್ಕೆ ಸೀಮಿತವಾಯಿತು.
ಮುಂಬೈ ಪರ ಅಮೇಲಿಯಾ ಕೆರ್ ಮೂರು ವಿಕೆಟ್ ಪಡೆದರೆ, ಇಸ್ಸಿ ವಾಂಗ್ ಮತ್ತು ನಥಾಲಿ ಸ್ಕೀವರ್ ಬ್ರಂಟ್ ತಲಾ ಎರಡು ವಿಕೆಟ್ ಕಿತ್ತರು. ಇನ್ನೊಂದು ವಿಕೆಟ್ ಸೈಕಾ ಇಷಾಕ್ಯೂ ಪಾಲಾಯಿತು.
ಆಡಿರುವ 8 ಪಂದ್ಯಗಳಲ್ಲಿ ಆರ್‌ಸಿಬಿಗೆ ಎದುರಾದ 6ನೇ ಸೋಲು ಇದು. ಸ್ಮೃತಿ ಪಡೆ ಪಾಯಿಂಟ್ಸ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಉಳಿದುಕೊಂಡಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.